ಬೆಂಗಳೂರು: ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಿದ್ದು, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಡಿ ರಾಜ್ಯದ ಬಡ ಕುಟುಂಬಗಳಿಗೆ ನಿರ್ಮಿಸಿಕೊಡುತ್ತಿರುವ ಮನೆಗಳ ಪೈಕಿ 36 ಸಾವಿರ ಮನೆಗಳನ್ನು ಮುಂದಿನ ತಿಂಗಳು ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಶೇಷಾದ್ರಿಪುರಂನ ಶಿರೂರ್ ಪಾರ್ಕ್‌ನಲ್ಲಿ ಮಂಗಳವಾರ ನಡೆದ “ಮನೆ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಮಾರು 2.32 ಲಕ್ಷ ಮನೆ ಗಳನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣ ಗೊಳಿಸಿ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 36 ಸಾವಿರ ಮನೆ ಫೆಬ್ರವರಿಯಲ್ಲಿ ಹಂಚಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ 2013 ರಿಂದ ಇದುವರೆಗೆ 2.32 ಲಕ್ಷ ಮನೆ ನಿರ್ಮಿಸಲಾಗುತ್ತಿದ್ದು ಬಡ ಕುಟುಂಬಗಳು ಫಲಾನುಭವಿಗಳ ಪಾಲಿನ ವಂತಿಗೆ 8,200 ರೂ. ಸರ್ಕಾರವೇ ಭರಿಸಲಿದ್ದು, ಮೊದಲ ಕಂತು 500 ಕೋಟಿ ರೂ. ಬಿಡುಗಡೆಯಾಗಿದ್ದು ಮನೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಒಂಟಿ ಮನೆ ನಿರ್ಮಾಣ 3 ವರ್ಷದಿಂದ ಸಾಧ್ಯವಾಗಿಲ್ಲ: ಬೆಂಗಳೂರಿನಲ್ಲಿ ಒಂಟಿ ಮನೆ ಸಮಸ್ಯೆ ಕಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಒಂಟಿ ಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ಸುಮಾರು 4 ಲಕ್ಷ ಜನರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಯೋಜನೆ ರೂಪಿಸಿದೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಡಿ ರಾಜ್ಯದ ಬಡ ಕುಟುಂಬಗಳಿಗೆ ನಿರ್ಮಿಸಿಕೊಡುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.