Advertisement
ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ಶುಕ್ರವಾರ ಸುಪ್ರೀಂಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ರಾಜಕೀಯ ಗೊಂದಲವು ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸುಳಿವು ನೀಡಿದೆ. 15 ಮಂದಿ ಅತೃಪ್ತ ಶಾಸಕರಿಗೆ ಸಂಬಂಧಿಸಿ ಜುಲೈ 17ರಂದು ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶ ಕುರಿತು ಸ್ಪಷ್ಟನೆ ನೀಡುವಂತೆ ಕೋರಿ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Related Articles
Advertisement
ಹೀಗಾಗಿ, ಜು.17ರಂದು ನ್ಯಾಯಾಲಯವು ನೀಡಿರುವ ಆದೇಶವು, ರಾಜಕೀಯ ಪಕ್ಷಗಳಿಗೆ ನೀಡಿರುವ ಹಕ್ಕುಗಳಿಗೆ ಸಂಬಂಧಿಸಿದ್ದಲ್ಲ ಎಂಬುದನ್ನು ನ್ಯಾಯಾಲಯವೇ ಸ್ಪಷ್ಟಪಡಿಸಬೇಕು. ಅಂದಿನ ಆದೇಶದ ಕುರಿತು ನಮಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಅರ್ಜಿಯಲ್ಲಿ ಕೋರಿದೆ.
ಗೊಂದಲ ಮೂಡಿಸಿದ್ದ ಆದೇಶ: ತಮ್ಮ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುತ್ತಿಲ್ಲ ಎಂದು ಆರೋಪಿಸಿ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಜು.17ರಂದು ಈ ಬಗ್ಗೆ ಆದೇಶ ಹೊರಡಿಸಿದ್ದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ, “ಬಂಡಾಯ ಶಾಸಕರಿಗೆ ವಿಧಾನಸಭೆ ಕಲಾಪಕ್ಕೆ ಹಾಜರಾಗಲೇಬೇಕು ಎಂದು ಯಾರೂ ಒತ್ತಡ ಹೇರುವಂತಿಲ್ಲ.
ಸದನಕ್ಕೆ ಬರುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು’ ಎಂದು ಹೇಳಿತ್ತು. ಆದರೆ, ನ್ಯಾಯಾಲಯದ ಆದೇಶವು ಹಲವು ಗೊಂದಲಗಳಿಗೆ ಕಾರಣವಾಗಿದ್ದವು. ಈ ಆದೇಶದ ಪ್ರಕಾರ, ಅತೃಪ್ತ ಶಾಸಕರು ಸದನಕ್ಕೆ ಹಾಜರಾಗದಿದ್ದರೆ, ಅವರು “ವಿಪ್ ಉಲ್ಲಂಘನೆಯಿಂದ ವಿನಾಯ್ತಿ’ ಪಡೆಯುತ್ತಾರಾ, ಅನರ್ಹತೆಯ ಶಿಕ್ಷೆಯಿಂದ ಪಾರಾಗುತ್ತಾರಾ ಎಂಬ ಪ್ರಶ್ನೆ ಮೂಡಿದ್ದವು.
ಈ ಕುರಿತು ಭಿನ್ನ, ಭಿನ್ನ ಅಭಿಪ್ರಾಯಗಳೂ ಕೇಳಿ ಬಂದಿದ್ದವು. ಕೆಲವರು ಬಂಡಾಯ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ ಎಂದರೆ, ಇನ್ನು ಕೆಲವರು ಸುಪ್ರೀಂಕೋರ್ಟ್ ಎಲ್ಲೂ “ವಿಪ್’ ಎಂಬ ಪದವನ್ನೇ ಆದೇಶದಲ್ಲಿ ಉಲ್ಲೇಖೀಸಿಲ್ಲ. ಹೀಗಾಗಿ, ವಿಪ್ ಅತೃಪ್ತರಿಗೆ ಅನ್ವಯವಾಗುತ್ತದೆ ಎಂದು ವಾದಿಸಿದ್ದರು.
ಸಿಎಂ ಅರ್ಜಿಯಲ್ಲಿ ಏನಿದೆ?: ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಒಂದಾದ ನಂತರ ಒಂದರಂತೆ ಗಡುವು ವಿಧಿಸಿದ್ದನ್ನು ಸಿಎಂ ಕುಮಾರಸ್ವಾಮಿ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ. ಇಂತಿಷ್ಟು ಗಂಟೆಗೆ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ರಾಜ್ಯಪಾಲರು ಸಂದೇಶ ಕಳುಹಿಸಿದ್ದಾರೆ.
ಆದರೆ, ಈಗಾಗಲೇ ವಿಶ್ವಾಸಮತದ ಕುರಿತು ಚರ್ಚೆ ನಡೆಯುತ್ತಿರುವಾಗ ಇಂಥ ಸೂಚನೆ ನೀಡುವ ಅಧಿಕಾರ ರಾಜ್ಯಪಾಲರಿಗಿರುವುದಿಲ್ಲ. ಚರ್ಚೆ ಮುಗಿದ ಬಳಿಕವೇ ವಿಶ್ವಾಸಮತ ಸಾಬೀತು ನಡೆಯುತ್ತದೆ ಎಂದು ಸ್ಪೀಕರ್ ಅವರೇ ಸ್ಪಷ್ಟವಾಗಿ ತಿಳಿಸಿರುವಾಗ, ವಿಧಾನಸಭೆಗೆ ಆದೇಶಿಸುವ ಅಧಿಕಾರ ಗವರ್ನರ್‌ಗಿಲ್ಲ.
ಈ ಕುರಿತು ನಾನು ಈಗಾಗಲೇ ರಾಜ್ಯಪಾಲರಿಗೂ ಲಿಖೀತ ಮಾಹಿತಿ ನೀಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ರಾಜ್ಯದ ರಾಜ್ಯಪಾಲರ ನಡೆಯು ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿದ ಕಾನೂನಿಗೆ ತದ್ವಿರುದ್ಧವಾಗಿದೆ ಎಂದೂ ಅವರು ಅರ್ಜಿಯಲ್ಲಿ ಉಲ್ಲೇಖೀಸಿದ್ದಾರೆ. ಇದೇ ವೇಳೆ, ಜು.17ರ ಸುಪ್ರೀಂಕೋರ್ಟ್ ಆದೇಶದ ಕುರಿತು ಸಿಎಂ ಕೂಡ ತಮ್ಮ ಅರ್ಜಿಯಲ್ಲಿ ಸ್ಪಷ್ಟನೆ ಕೋರಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಗದ್ದಲ: ಕರ್ನಾಟಕದ ರಾಜಕೀಯ ಬಿಕ್ಕಟ್ಟು ಕುರಿತು ಪ್ರಸ್ತಾಪಿಸುವ ಮೂಲಕ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಶುಕ್ರವಾರ ಗದ್ದಲ ಎಬ್ಬಿಸಿದರು. ಎಲ್ಲೆಲ್ಲಿ ಕಾಂಗ್ರೆಸ್ ಆಡಳಿತವಿದೆಯೋ, ಅಂಥ ಎಲ್ಲ ರಾಜ್ಯಗಳಲ್ಲೂ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದರು.
ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ವಿಧಾನಸಭೆಯ ಸ್ವಾತಂತ್ರ್ಯದ ಹರಣವಾಗಿದ್ದು, ರಾಜ್ಯದಲ್ಲಿ ಪ್ರಜಾಸತ್ತೆಯ ಕೊಲೆ ನಡೆಯುತ್ತಿದೆ ಎಂದೂ ಚೌಧರಿ ಆರೋಪಿಸಿದರು. ಇದಕ್ಕೂ ಮುನ್ನ ಕಾಂಗ್ರೆಸ್ ಸಂಸದರು “ಪ್ರಜಾತಂತ್ರ ಉಳಿಸಿ’, “ನ್ಯಾಯ ಬೇಕು’ ಎಂಬ ಫಲಕಗಳನ್ನು ಹಿಡಿದು, ಸದನದ ಬಾವಿಗಿಳಿದು ಘೋಷಣೆ ಕೂಗಿದ್ದೂ ಕಂಡು ಬಂತು. ಕಾಂಗ್ರೆಸ್ ಸಂಸದರ ಪ್ರತಿಭಟನೆಗೆ ಡಿಎಂಕೆ ಸದಸ್ಯರೂ ಸಾಥ್ ನೀಡಿದರು.
ಶ್ರೀಮಂತ ಪಾಟೀಲ್‌ಗೆ ಭದ್ರತೆ: ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್‌ಗೆ ಭದ್ರತೆ ಒದಗಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಂತರ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ಅವರಿಗೆ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಪಾಟೀಲ್‌ರನ್ನು ಭೇಟಿಯಾಗಿ ಹೇಳಿಕೆ ಪಡೆಯಲು ಕರ್ನಾಟಕದ ಪೊಲೀಸರಿಗೂ ಅವಕಾಶ ಕಲ್ಪಿಸಲಾಗಿದೆ ಎಂದೂ ಮುಂಬೈ ಪೊಲೀಸರು ತಿಳಿಸಿದ್ದಾರೆ.