Advertisement

ಜೆಡಿಎಸ್‌ ಜೊತೆ ಮೈತ್ರಿ: ಕಾಂಗ್ರೆಸ್‌ ಕಾರ್ಯಕರ್ತರ ಬೇಸರ

07:42 AM Mar 17, 2019 | Team Udayavani |

ಬೇಲೂರು: ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಕುಟುಂಬ ರಾಜಕಾರಣ ವಿರುದ್ಧ ರಾಜ್ಯದ ಜನತೆ ಬೇಸರಗೊಂಡಿದ್ದು ಕಾಂಗ್ರೆಸ್‌ ಕಾರ್ಯಕರ್ತರ ನಿಲುವಿನ ವಿರುದ್ಧ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದು ದುರದೃಷ್ಟ ಎಂದು ಮಾಜಿ ಸಚಿವ ಎ.ಮಂಜು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಮಹಮದ್‌ ಹಯಾತ್‌ಅವರ ನಿವಾಸದಲ್ಲಿ ಅಲ್ಪಸಂಖ್ಯಾತಮಸಮುದಾಯದ ಕಾಂಗ್ರೆಸ್‌ ಮುಖಂಡರನ್ನು ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜಕೀಯ ಅನುಭವವಿಲ್ಲದ ಪ್ರಜ್ವಲ್‌ ರೇವಣ್ಣ ಅವರನ್ನು ಲೋಕಸಭಾ ಚುನಾವಣೆ ಯಲ್ಲಿ ಕಣಕ್ಕಿಳಿಸುತ್ತಿದ್ದು ಜಿಲ್ಲೆಯ ಬಹುತೇಕ ಮತದಾರರು ಬೇಸರಗೊಂಡಿದ್ದಾರೆ ಎಂದರು. 

ಈ ಹಿಂದೆ ದೇವೇಗೌಡರ ರಾಜಕೀಯ ಪ್ರವೇಶ ಸೊಸೈಟಿಯಿಂದ, ರೇವಣ್ಣನವರ ಪ್ರವೇಶ ಜಿಲ್ಲಾ ಪಂಚಾಯಿತಿ ಸದಸ್ಯತ್ವದಿಂದ ಅದರೆ ಅವರ ಮಗ ದಿಢೀರ್‌ ಲೋಕಸಭಾ ಸದಸ್ಯ ಎಂದರೆ ಮತದಾರರ ಯೋಚಿಸುವುದಿಲ್ಲವೇ ಎಂದು ಪ್ರಶ್ನಿಸಿದರು. 

ಗೌಡರ ಕುಟುಂಬ ಬಿಟ್ಟು ಬೇರೆ ಯೂರೂ ಇಲ್ಲವೇ?: ದೇವೇಗೌಡರ ಕುಟುಂಬಸ್ಥರನ್ನು ಬಿಟ್ಟು ಬೇರೆ ಯಾರೂ ಪಕ್ಷಕ್ಕೆ ದುಡಿದಿರುವ ಸಾಕಷ್ಟು ಹಿರಿಯರಿಲ್ಲವೇ? ಅದನ್ನು ಬಿಟ್ಟು ಪ್ರಜ್ವಲ್‌ ಸ್ಪರ್ಧಿಸುವುದು ಎಷ್ಟು ಸರಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 25 ವರ್ಷದವರು ಚುನಾವಣೆಗೆ ನಿಲ್ಲಬಹುದು ಅದರೆ ಯಾವುದೇ ಅನುಭವವಿಲ್ಲದ ಪ್ರಜ್ವಲ್‌ಗೆ ಟಿಕೆಟ್‌ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆಗೆ ಮಾಜಿ ಪ್ರಧಾನಿ ದೇವೇಗೌಡರು ಅಭ್ಯರ್ಥಿಯಾದರೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದೆ. ಅದರೆ ಕುಟುಂಬ ವ್ಯಾಮೋಹದಿಂದ ತಮ್ಮ ಮೊಮ್ಮಗನನ್ನು ಗೌಡರು ಕಣಕ್ಕಿಳಿಸಿರುವುದು ದುರಾದೃಷ್ಟಕರವಾಗಿದ್ದು ಈ ಹಿಂದೆ ದೇವೇಗೌಡರ ವಿರುದ್ಧ ಸ್ಪರ್ಧಿಸಿ 1 ಲಕ್ಷ ಅಂತರದಲ್ಲಿ ಸೋಲು ಅನುಭವಿಸಿದೆ. ಅದರೆ ಇಂದಿನ ಚುನಾವಣೆ ಚಿತ್ರಣವೆ ಬೇರೆಯಾಗಿದ್ದು ಜಿಲ್ಲೆಯಲ್ಲಿ ಮತದಾರರು ಕುಟುಂಬ ರಾಜಕೀಯವನ್ನು ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.

Advertisement

ಅಲ್ಪಸಂಖ್ಯಾತರ ನಿರ್ಲಕ್ಷ್ಯ: ರಾಜ್ಯದಲ್ಲಿ ಮುಖ್ಯ ಮಂತ್ರಿಯಗಿ ಕುಮಾರಸ್ವಾಮಿ ಆಡಳಿತ ನಡೆಸು ತ್ತಿದ್ದಾರೆ. ಅದರೆ ಮಂತ್ರಿ ಮಂಡಲದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರಿಗೆ ಸಚಿವ ಸ್ಥಾನ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ದಲಿತರ ಕಡೆಗಣನೆ: ದಲಿತ ಸಮುದಾಯದ ಮತ ಪಡೆದು ಅಧಿಕಾರಕ್ಕೆ ಬಂದಿರುವ ಪಕ್ಷಗಳು ದಲಿತರನ್ನು ಮುಖ್ಯ ಮಂತ್ರಿ ಮಾಡಲು ಹಿಂದೇಟು ಹಾಕುತ್ತಿದ್ದು ದುರ್ಬಲ ವರ್ಗದವರ ಮತ ಬೇಕು ಅದರೆ ಅಧಿಕಾರ ಕೊಡವುದು ಮಾತ್ರ ಅವರಿಗೆ ಇಷ್ಟವಿಲ್ಲ ಎಂದು ತಿಳಿಸಿದರು.

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ: ಈಗಾಗಲೇ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರುಗಳ ಅಭಿಪ್ರಾಯ ಸಂಗ್ರಹ ಮಾಡಿದ್ದು, ಬಹುತೇಕ ಜೆಡಿಎಸ್‌ ಜೋತೆ ಹೊಂದಾಣಿಕೆ ಬಗ್ಗೆ ಭಿನ್ನಾಭಿಪ್ರಾಯ ಕಂಡು ಬಂದಿದೆ. ಇದರಂತೆ ಬೇಲೂರಿನಲ್ಲೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದು, ನಾನು ಮಂತ್ರಿಯಾದ ಸಂದರ್ಭದಲ್ಲಿ ತಾಲೂಕು ಅಲ್ಪಸಂಖ್ಯಾತ ಅಭಿವೃದ್ಧಿಗೆ ಸುಮಾರು 10ಕೋಟಿ ರೂ. ಬಿಡುಗಡೆ ಮಾಡಿಸಿದ್ದನ್ನು ಸ್ಮರಿಸಿದ ಅವರು, ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಬೆಂಬಲ ನನಗೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಳಿದ ತಾಲೂಕುಗಳ ಕಾರ್ಯಕರ್ತರ ಅಭಿಪ್ರಾಯ ಸಂಗ್ರಸಿ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದ ಅವರು ಕಾಂಗ್ರೆಸ್‌ ಪಕ್ಷದ ಸಕ್ರಿಯ ಕಾರ್ಯ ಕರ್ತರು ನನಗೆ ಬೆಂಬಲ ಸೂಚಿಸಲಿದ್ದು ಹಾಸನ ಜಿಲ್ಲೆಯ ಪ್ರಜ್ಞಾವಂತ ಮತದಾರರು ಈ ಸಾರಿ ಲೋಕಸಭಾ ಚುನಾವಣೆಯಲ್ಲಿ ಅಚ್ಚರಿ ಫ‌ಲಿತಾಂಶ ನೀಡಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಲೀಂ, ಕಾಂಗ್ರೆಸ್‌ ಮುಖಂಡರಾದ ಶಕೀಲ್‌, ಬಷೀರ್‌,ಇಮಿ¤ಯಾಜ್‌, ಜಾಕೀರ್‌ ಪಾಷ, ಅಲ್ತಾಫ್, ಅಬ್ದುಲ್‌ ಸಮದ್‌, ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್‌, ಕೆಪಿಸಿಸಿ ಸದಸ್ಯ ಬಿ.ಎಲ್‌. ಧರ್ಮೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜಪ್ಪ, ಎಚ್‌.ಎಂ.ರಾಜು, ಶಿವಣ್ಣ, ಕೆ.ಪಿ.ಶೈಲೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next