Advertisement

ಕಾಮಗಾರಿಗೆ ವೇಗ ನೀಡುವುದೇ ಮೈತ್ರಿ?

11:38 AM May 27, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಈಗಾಗಲೇ ಮೈತ್ರಿ ಆಡಳಿತವಿರುವ ಬಿಬಿಎಂಪಿಯಲ್ಲೂ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಂಡು ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಮೂಡಿಸಿದೆ.

Advertisement

ಜತೆಗೆ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿರುವ 2018-19ನೇ ಸಾಲಿನ ಬಿಬಿಎಂಪಿ ಬಜೆಟ್‌ಗೆ ಶೀಘ್ರ ಅನುಮೋದನೆ ದೊರೆಯುವ ಸಾಧ್ಯತೆಯಿದೆ. ಪಾಲಿಕೆಯಲ್ಲಿ ಕಳೆದ ಮೂರು ವರ್ಷಗಳಿಂದ ಜೆಡಿಎಸ್‌-ಕಾಂಗ್ರೆಸ್‌ ಮುಂದುವರಿದಿದ್ದು, ಮೈತ್ರಿ ಆಡಳಿತದಲ್ಲಿ ರೂಪಿಸಲಾಗಿರುವ ಯೋಜನೆಗಳಿಗೆ ಕೊಕ್ಕೆ ಬೀಳುವ ಆತಂಕ ದೂರಾಗಿದೆ. ಇದರೊಂದಿಗೆ ಈ ಹಿಂದಿನ ಸರ್ಕಾರದ ಘೋಷಿಸಿರುವ ಹಾಗೂ ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳಿಗೂ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ದೊರೆಯುವ ನಿರೀಕ್ಷೆಯಿದೆ.

ಕಳೆದ ಬಜೆಟ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ 50 ಕಿ.ಮೀ. ಉದ್ದದ ರಸ್ತೆಗಳಿಗೆ ವೈಟ್‌ಟಾಪಿಂಗ್‌, 40 ಕೆರೆಗಳ ಅಭಿವೃದ್ಧಿ, 100 ಕಿ.ಮೀ. ಉದ್ದದ ರಸ್ತೆಗಳ ಸಮಗ್ರ ಅಭಿವೃದ್ಧಿ, ಎಂಟು ಪ್ರಮುಖ ಜಂಕ್ಷನ್‌ಗಳಲ್ಲಿ ಗ್ರೇಡ್‌ ಸೆಪರೇಟರ್‌, 150 ಕಿ.ಮೀ. ಉದ್ದದ ಬಹೃತ್‌ ಮಳೆ ನೀರು ಕಾಲುವೆ ಅಭಿವೃದ್ಧಿ, 250 ಕಿ.ಮೀ. ಉದ್ದದ ವಿವಿಧ ರಸ್ತೆಗಳ ಪಾದಚಾರಿ ಮಾರ್ಗ ಅಭಿವೃದ್ಧಿ, 110 ಹಳ್ಳಿಗಳ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದ್ದರು.

ಇದೀಗ ನೂತನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೊಸ ಬಜೆಟ್‌ ಮಂಡಿಸುವುದಾಗಿ ಪ್ರಕಟಿಸಿದ್ದು, ಬೆಂಗಳೂರಿಗೆ ಇನ್ನಷ್ಟು ಯೋಜನೆಗಳೊಂದಿಗೆ ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆಯಿದೆ. ಆದರೆ, ಮುಖ್ಯಮಂತ್ರಿಗಳು ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಘೋಷಿಸಿದ್ದ ಯೋಜನೆಗಳನ್ನು ಉಳಿಸಿಕೊಂಡು ಹೊಸ ಯೋಜನೆಗಳನ್ನು ಘೋಷಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. 

ಮೈತ್ರಿ ಸರ್ಕಾರದಿಂದ ಪಾಲಿಕೆಯ ನಾಲ್ಕನೇ ಅವಧಿಯ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆಗೂ ಮೈತ್ರಿ ಸದ್ಯದ ಮಟ್ಟಿಗೆ ಅಬಾಧಿತವೆನಿಸಿದೆ. ಮುಂದಿನ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಎರಡು ಪಕ್ಷಗಳ ಸದಸ್ಯರ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.

Advertisement

ಅನುದಾನ ಬಿಡುಗಡೆ ಸವಾಲು: ಕಳೆದ ಐದು ವರ್ಷಗಳಲ್ಲಿ ಸರ್ಕಾರ ಬಿಬಿಎಂಪಿಗೆ ಘೋಷಣೆ ಮಾಡಿದಷ್ಟು ಅನುದಾನ ಬಿಡುಗಡೆ ಮಾಡಿಲ್ಲ. ಆದರೆ, ಪಾಲಿಕೆಯ ಅಷ್ಟು ಅನುದಾನಕ್ಕೆ ಟೆಂಡರ್‌ ಮಾಡಿ, ಜಾಬ್‌ ಕೋಡ್‌ ನೀಡಲಾಗಿದೆ. ಹೀಗಾಗಿ ಬಿಬಿಎಂಪಿಯ ಮೇಲೆ ಆರ್ಥಿಕ ಹೊರೆ ಬಿದ್ದಿದ್ದು, ಸರ್ಕಾರ ಸಹ ಸಾಲದ ಸುಳಿಯಲ್ಲಿರುವುದರಿಂದ ಘೋಷಿಸಿರುವ ಅನುದಾನ ಬಿಡುಗಡೆ ಸವಾಲಾಗಿದೆ.

ಇದರೊಂದಿಗೆ ಕಳೆದ ಹಲವು ತಿಂಗಳಿಂದ ಪೌರಕಾರ್ಮಿಕರಿಗೆ ವೇತನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆಗಳು ಹಾಳಾಗಿದ್ದು, ಮಳೆ ಸುರಿದಾಗ ಅನಾಹುತಗಳು ಸಂಭವಿಸುತ್ತಿವೆ. ಹೀಗಾಗಿ ಮುಖ್ಯಮಂತ್ರಿಗಳು ಪಾಲಿಕೆಯೊಂದಿಗೆ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ.

ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕೈಗೊಳ್ಳಲು ಮೈತ್ರಿ ಸರ್ಕಾರ ಆದ್ಯತೆ ನೀಡಬೇಕು. ಈಗಾಗಲೇ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಗೆ ಹಿಂದಿನ ಸರ್ಕಾರ ಯೋಜನೆ ರೂಪಿಸಿದ್ದು, ನೂತನ ಸರ್ಕಾರ ಅನುದಾನ ನೀಡಿ ಚುರುಕಾಗಿ ಕಾಮಗಾರಿ ಪೂರ್ಣಗೊಳಿಸಲು ಗಮನ ಹರಿಸಬೇಕು. 
-ಎಂ. ರಾಮಚಂದ್ರಪ್ಪ, ಮಾಜಿ ಮೇಯರ್‌ 

ನಗರದಲ್ಲಿ ತ್ಯಾಜ್ಯ ಸಮಸ್ಯೆ ಮಿತಿ ಮೀರಿದ್ದು, ಬಹುತೇಕ ತ್ಯಾಜ್ಯ ಸಂಸ್ಕರಣಾ ಘಟಕಗಳು ಸ್ತಗಿತಗೊಂಡಿವೆ. ಹೀಗಾಗಿ ಕೂಡಲೇ ಘಟಕಗಳಿಗೆ ಮರುಚಾಲನೆ ನೀಡುವ ಮೂಲಕ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕಿದೆ. ನಗರದಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಶುರುವಾಗಿದ್ದು, ಸರ್ಕಾರ ತಕ್ಷಣವೇ ತುರ್ತು ಕ್ರಮ ಕೈಗೊಳ್ಳಬೇಕಿದೆ.
-ಬಿ.ಎಸ್‌.ಸತ್ಯನಾರಾಯಣ, ಮಾಜಿ ಮೇಯರ್‌ 

ನಗರದಲ್ಲಿ ಈಗಾಗಲೇ ಸಾವಿರಾರು ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಈ ಪೈಕಿ ಅರ್ಧದಷ್ಟು ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದೀಗ ಮೈತ್ರಿ ಸರ್ಕಾರದ ರಚನೆಯಾಗಿರುವುದರಿಂದ ನಗರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ. 
-ಆರ್‌.ಸಂಪತ್‌ರಾಜ್‌, ಮೇಯರ್‌ 

ಸರ್ಕಾರ ಬೆಂಗಳೂರಿಗೆ ಮೂಲಸೌಕರ್ಯಗಳನ್ನು ಒದಗಿಸುವುದರೊಂದಿಗೆ, ರಾಜ್ಯದ ಇತರೆ ನಗರಗಳ ಅಭಿವೃದ್ಧಿಗೆ ಒತ್ತು ನೀಡಿದಾಗ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಲಿದೆ. ಇದರೊಂದಿಗೆ ನಗರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ವಾರ್ಡ್‌ ಸಮಿತಿಗಳಿಗೆ ಆದ್ಯತೆ ನೀಡಬೇಕು. 
-ಅಶ್ವಿ‌ನ್‌ ಮಹೇಶ್‌, ನಗರ ತಜ್ಞ 

ಕಳೆದ ಐದು ವರ್ಷಗಳಲ್ಲಿ ನಗರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಈ ಬಾರಿಯ ಪ್ರಣಾಳಿಕೆಯಲ್ಲಿಯೂ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ಸರ್ಕಾರ ರಚನೆಯಾಗಿರುವುದರಿಂದ ಅಭಿವೃದ್ಧಿ ಯೋಜನೆಗಳು ಜಾರಿಯಾಗಲಿವೆ. 
-ರಾಮಲಿಂಗಾರೆಡ್ಡಿ, ಮಾಜಿ ಸಚಿವ 

ನಗರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ಸಬ್‌ ಅರ್ಬನ್‌ ಯೋಜನೆ ಜಾರಿಗೊಳಿಸಲು ಮೈತ್ರಿ ಸರ್ಕಾರ ಆದ್ಯತೆ ನೀಡಬೇಕು. ಭವಿಷ್ಯದ ಕುಡಿವ ನೀರಿನ ಸಮಸ್ಯೆಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಮಳೆಯಿಂದ ನಗರದಲ್ಲಿ ಉಂಟಾಗುವ ಅನಾಹುತಗಳ ತಡೆಗೆ ರಾಜಕಾಲುವೆಗಳ ದುರಸ್ತಿಗೆ ಮುಂದಾಗಬೇಕಿದೆ.
-ಆರ್‌. ಅಶೋಕ್‌, ಮಾಜಿ ಸಚಿವ

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next