Advertisement

lok sabha polls ಮೈತ್ರಿ ಸೀಟು ಹಂಚಿಕೆ ವಾರದಲ್ಲಿ ಅಂತಿಮ: ಎಚ್‌ಡಿಡಿ

11:42 PM Mar 04, 2024 | Team Udayavani |

ಬೆಂಗಳೂರು: ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ಅಂತಿಮ ಹಂತದಲ್ಲಿದ್ದು ಬಹುಶಃ ಒಂದು ವಾರದೊಳಗೆ ಎಲ್ಲ ಪ್ರಕ್ರಿಯೆ ಅಂತಿಮಗೊಳ್ಳುತ್ತವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.

Advertisement

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸೋಮವಾರ ರಾಜ್ಯ ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆಯಾಗಿ ರಶ್ಮಿ ರಾಮೇಗೌಡ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸೀಟು ಹಂಚಿಕೆ ವಿಚಾರದ ಬಗ್ಗೆ ಈಗಾಗಲೇ ಬಿಜೆಪಿ ನಾಯಕರ ಜತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ.

ಬಹುಶಃ ಇನ್ನೊಮ್ಮೆ ಕುಳಿತು ಚರ್ಚಿಸಿದರೆ ಎಲ್ಲವೂ ಅಂತಿಮ ಆಗುತ್ತದೆ ಎಂದರು.ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆಯೇ ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಅವರು, ಇನ್ನೊಂದು ವಾರದಲ್ಲಿ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಆಗುತ್ತದೆ. ಜೆಡಿಎಸ್‌ಗೆ ಯಾವ ಕ್ಷೇತ್ರ ಎನ್ನುವುದು ಮೋದಿ, ಅಮಿತ್‌ ಷಾ, ಜೆ.ಪಿ.ನಡ್ಡಾ, ಕುಮಾರಸ್ವಾಮಿ ಸಮಾಲೋಚಿಸುತ್ತಾರೆ. ಅಲ್ಲಿ ಅವರು ಸ್ಪರ್ಧೆ ಮಾಡಬೇಕಾ ಬೇಡವಾ ಎನ್ನುವ ಅಂಶವನ್ನು ಚರ್ಚಿಸಿ ನಿರ್ಧಾರ ಮಾಡುತ್ತಾರೆ ಎಂದರು.

ಚುನಾವಣೆ ಅಧಿಸೂಚನೆ ಆದ ಬಳಿಕ ರಾಜ್ಯದಲ್ಲಿ ನನ್ನ ಪ್ರವಾಸದ ಬಗ್ಗೆ ನಿರ್ಧಾರ ಮಾಡಲಾಗುವುದು. ಮೋದಿ ಅವರದ್ದು ಬಹಳ ವೇಗ ಇದೆ. 10 ದಿನಗಳಲ್ಲಿ ಹಲವಾರು ರಾಜ್ಯಗಳಲ್ಲಿ ಅವರು ಪ್ರವಾಸ ಮಾಡುತ್ತಿದ್ದಾರೆ. ಆದರೆ ನಾನು ಎಲ್ಲಿಗೆ ಕರೆದರೆ ಅಲ್ಲಿಗೆ ಹೋಗುತ್ತೇನೆ. ಯಾವ ಜಿಲ್ಲೆಗೆ ಕರೆದರೂ ಹೋಗುತ್ತೇನೆ. ಕುಮಾರಸ್ವಾಮಿ ಸಹಿತ ಜೆಡಿಎಸ್‌ ನಾಯಕರು ಎಲ್ಲರೂ ಪ್ರವಾಸ ಮಾಡುತ್ತಾರೆಂದು ಮಾಜಿ ಪ್ರಧಾನಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶೀಘ್ರ ಮಂಡ್ಯದಲ್ಲಿ ಸಮಾವೇಶ
ಮಾಧ್ಯಮಗಳಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಅನಗತ್ಯವಾಗಿ ಚರ್ಚೆ ಆಗುತ್ತಿದೆ. ಒಂದಿಷ್ಟು ಜನ ಮನಸ್ಸಿಗೆ ಬಂದ ಹಾಗೆ ಹೇಳಿಕೆ ಕೊಡುತ್ತಿದ್ದಾರೆ. ಹಾಗೆ ಹೇಳಿಕೆ ಕೊಡಲು ಅವರು ಸ್ವತಂತ್ರರು ಎಂದು ಮಾರ್ಮಿಕವಾಗಿ ಹೇಳಿದ ದೇವೇಗೌಡರು, ಆ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ. ಸಂಘಟನೆ ಚೆನ್ನಾಗಿದೆ. ಆದಷ್ಟು ಬೇಗ ಮಂಡ್ಯದಲ್ಲಿ ಸಮಾವೇಶ ನಡೆಸಲಾಗುವುದು. ನನಗೆ ವಯಸ್ಸಾಗಿದ್ದರೂ ನಾನೇನು ಸುಮ್ಮನೆ ಕೂರಲ್ಲ ಎಂದರು.

Advertisement

ಕೋಲಾರದಲ್ಲಿ ಮಹಿಳಾ ಸಮಾವೇಶ
ಮಹಿಳಾ ಘಟಕದ ನೂತನ ಅಧ್ಯಕ್ಷರು ಕೋಲಾರ ಜಿಲ್ಲೆಯವರು. ಹೀಗಾಗಿ ಅವರ ನೇತೃತ್ವದಲ್ಲಿ ಈ ತಿಂಗಳ 14 ಅಥವಾ 16ರಂದು ಕೋಲಾರದಲ್ಲಿ ಜೆಡಿಎಸ್‌ ಮಹಿಳಾ ಸಮಾವೇಶ ನಡೆಸಲಾಗುವುದು. ಆ ಮೂಲಕ ಕೋಲಾರದಿಂದಲೇ ಲೋಕಸಭಾ ಚುನಾವಣ ಪ್ರಚಾರ ಆರಂಭ ಆಗಲಿದೆ ಎಂದು ದೇವೇಗೌಡರು ಹೇಳಿದರು. ಇದಕ್ಕೂ ಮೊದಲು ಮಾಜಿ ಪ್ರಧಾನಿಗಳ ಸಮಕ್ಷಮದಲ್ಲಿ ರಶ್ಮಿ ರಾಮೇಗೌಡ ಅವರು ಲೀಲಾದೇವಿ ಆರ್‌. ಪ್ರಸಾದ್‌ ಅವರಿಂದ ಪಕ್ಷದ ಬಾವುಟ ಸ್ವೀಕರಿಸುವ ಮೂಲಕ ರಾಜ್ಯ ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next