Advertisement

5ರಲ್ಲಿ ಮೈತ್ರಿ ಮೇಲುಗೈ; 2ರಲ್ಲಿ ಬಿಜೆಪಿ ಅಧಿಕಾರಕ್ಕೆ

11:44 PM Jun 03, 2019 | Team Udayavani |

ಬೆಂಗಳೂರು: ಶಿವಮೊಗ್ಗ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳ ಫ‌ಲಿತಾಂಶ ಸೋಮವಾರ ಪ್ರಕಟವಾಗಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳು ಮೇಲುಗೈ ಸಾಧಿಸಿದ್ದು, ಬಿಜೆಪಿ ಹಿನ್ನಡೆ ಅನುಭವಿಸಿದೆ.

Advertisement

ಮುಖ್ಯವಾಗಿ ಬಿಜೆಪಿ ಭದ್ರಕೋಟೆ ಎನಿಸಿಕೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರ ಪುರಸಭೆಯಲ್ಲಿ ಬಿಜೆಪಿ ಸೋಲು ಕಂಡಿದ್ದು, ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. 23 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಿರುವ ಸಂಖ್ಯಾಬಲವನ್ನು ಪಡೆದುಕೊಂಡಿದೆ. ಬಿಜೆಪಿ 8 ಸ್ಥಾನ ಗೆದ್ದರೆ, ಪಕ್ಷೇತರರು 3 ಕಡೆ ಗೆದ್ದಿದ್ದಾರೆ.

ಫ‌ಲಿತಾಂಶ ಪ್ರಕಟವಾದ ಏಳು ನಗರ ಸ್ಥಳೀಯ ಸಂಸ್ಥೆಗಳ 140 ವಾರ್ಡ್‌ಗಳಲ್ಲಿ 53ರಲ್ಲಿ ಕಾಂಗ್ರೆಸ್‌, 40ರಲ್ಲಿ ಬಿಜೆಪಿ, 28ರಲ್ಲಿ ಜೆಡಿಎಸ್‌, 18ರಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಬಿಎಸ್ಪಿ 1 ಸ್ಥಾನ ಪಡೆದುಕೊಂಡಿದೆ. ಸದ್ಯದ ಸ್ಥಿತಿಯಂತೆ ಏಳು ನಗರ ಸ್ಥಳೀಯ ಸಂಸ್ಥೆಗಳ ಪೈಕಿ 5 ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯವ ಸಾಧ್ಯತೆಯಿದ್ದು, ಬಿಜೆಪಿ 2ರಲ್ಲಿ ಮಾತ್ರ ಅಧಿಕಾರಕ್ಕೇರುವ ಅವಕಾಶವಿದೆ.

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ, ನೆಲಮಂಗಲ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಿರಾಳಕೊಪ್ಪ, ಹೊಸನಗರ ಮೈತ್ರಿ ಪಕ್ಷಗಳ ಪಾಲಾಗಲಿದ್ದು, ಸೊರಬ ಮತ್ತು ಸಾಗರ ಬಿಜೆಪಿ ತೆಕ್ಕೆಗೆ ಜಾರಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರೂ, ಕಾಂಗ್ರೆಸ್‌-ಜೆಡಿಎಸ್‌ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ.

ಇಲ್ಲಿ 23 ವಾರ್ಡ್‌ಗಳಲ್ಲಿ 10ರಲ್ಲಿ ಕಾಂಗ್ರೆಸ್‌ ಮತ್ತು 7ರಲ್ಲಿ ಜೆಡಿಎಸ್‌ ಗೆದ್ದಿದೆ. ಬಿಜೆಪಿ 2 ಸ್ಥಾನ ಗೆದ್ದಿದ್ದು, 1ರಲ್ಲಿ ಬಿಎಸ್ಪಿ ಮತ್ತು 3 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ. ನೆಲಮಂಗಲ ಪುರಸಭೆ ಜೆಡಿಎಸ್‌ ಪಾಲಾಗಿದ್ದು, 23 ವಾರ್ಡ್‌ಗಳಲ್ಲಿ 13 ವಾರ್ಡ್‌ಗಳನ್ನು ಗೆದ್ದಿರುವ ಜೆಡಿಎಸ್‌ ನಿಚ್ಚಳ ಬಹುಮತ ಪಡೆದುಕೊಂಡಿದೆ. ಕಾಂಗ್ರೆಸ್‌ 7, ಬಿಜೆಪಿ 2 ಮತ್ತು ಪಕ್ಷೇತರರು 1 ಸ್ಥಾನ ಗೆದ್ದಿದ್ದಾರೆ.

Advertisement

ಅದೇ ರೀತಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಲಿದೆ. 23 ವಾರ್ಡ್‌ಗಳಲ್ಲಿ 12 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾಗಿರುವ ಅಗತ್ಯ ಸಂಖ್ಯಾಬಲ ಪಡೆದುಕೊಂಡಿದೆ. ಅನೇಕ ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಶಿಕಾರಿಪುರ ಪುರಸಭೆ ಈ ಬಾರಿ ಕಾಂಗ್ರೆಸ್‌ ತೆಕ್ಕೆಗೆ ಜಾರಿದೆ.

ಬಿಜೆಪಿ 8 ಮತ್ತು ಪಕ್ಷೇತರರು 3 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಶಿರಾಳಕೊಪ್ಪ ಪುರಸಭೆಯ 17 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ 7ರಲ್ಲಿ ಮತ್ತು ಜೆಡಿಎಸ್‌ 3ರಲ್ಲಿ ಗೆದ್ದಿದ್ದು, ಮೈತ್ರಿ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ. ಇಲ್ಲಿ ಬಿಜೆಪಿ 3 ಸ್ಥಾನ ಪಡೆದುಕೊಂಡಿದ್ದರೆ, 5ರಲ್ಲಿ ಪಕ್ಷೇತರರು ಗೆದ್ದಿದ್ದಾರೆ.

ಹೊಸನಗರ ಪಟ್ಟಣ ಪಂಚಾಯಿತಿಯ 11 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ 4 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಜೆಡಿಎಸ್‌ 3 ಸ್ಥಾನಗಳಲ್ಲಿ ಗೆದ್ದಿದೆ. ಇಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಧಿಕಾರದ ಚುಕ್ಕಾಣಿ ಹಿಡಿಯವುದು ಸ್ಪಷ್ಟವಾಗಿದೆ. ಸಾಗರ ಪುರಸಭೆ ಮತ್ತು ಸೊರಬ ಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಬಿದ್ದಿದ್ದು, ಸಾಗರ ಪುರಸಭೆಯ 31ರಲ್ಲಿ 16 ರಲ್ಲಿ ಬಿಜೆಪಿ ಗೆದ್ದು, ಸ್ಪಷ್ಟ ಬಹುಮತ ಪಡೆದುಕೊಂಡಿದೆ.

ಕಾಂಗ್ರೆಸ್‌ 9 ಮತ್ತು ಜೆಡಿಎಸ್‌ 1 ಮತ್ತು ಐವರು ಪಕ್ಷೇತರರು ಗೆದ್ದಿದ್ದಾರೆ. ಸೊರಬ ಪಟ್ಟಣ ಪಂಚಾಯಿತಿ 12 ವಾರ್ಡ್‌ಗಳಲ್ಲಿ 6 ಸ್ಥಾನ ಗೆದ್ದಿರುವ ಬಿಜೆಪಿ ಅಧಿಕಾರದ ಸಂಖ್ಯಾಬಲ ಪಡೆದುಕೊಂಡಿದೆ. ಕಾಂಗ್ರೆಸ್‌ 4, ಜೆಡಿಎಸ್‌1 ಮತ್ತು ಒಬ್ಬರು ಪಕ್ಷೇತರರು ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next