ದಾವಣಗೆರೆ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಕೇವಲ ಔಪಚಾರಿಕ ಮಾತ್ರ. ಇದರಲ್ಲಿ ಯಾರನ್ನು ಸೇರಿಸಿಕೊಳ್ಳಬೇಕೆನ್ನುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡುರಾವ್ ಅವರು ಸಮನ್ವಯ ಸಮಿತಿ ಸೇರ್ಪಡೆ ಒಂದು ಮುಖ್ಯವಾದ ವಿಷಯವೇ ಅಲ್ಲ .ಅದನ್ನು ವಿಶ್ವನಾಥ್ ಅವರು ಸಾರ್ವಜನಿಕವಾಗಿ ಚರ್ಚೆ ಮಾಡುವ ಅಗತ್ಯವಿರಲಿಲ್ಲ. ಯಾಕೆ ಹೀಗೆ ಹೇಳಿದ್ದಾರೆ ಎಂದು ನನಗೆ ಅರ್ಥ ಆಗುತ್ತಿಲ್ಲ ಎಂದರು.
ಜೆಡಿಎಸ್ ನಮ್ಮ ವಿರೋಧ ಪಕ್ಷವಾಗಿತ್ತು. ಹೊಂದಾಣಿಕೆಗೆ ಇನ್ನೂ ಕೆಲ ದಿನಗಳು ಬೇಕಾಗುತ್ತದೆ ಎಂದರು.
ಸಮನ್ವಯ ಸಮಿತಿಗೆ ಯಾರನ್ನು ಸೇರ್ಪಡೆ ಮಾಡಬೇಕು ಎನ್ನುವುದನ್ನು ಜೆಡಿಎಸ್‌ನಲ್ಲಿ ದೇವೇಗೌಡರು ತೀರ್ಮಾನ ಮಾಡುತ್ತಾರೆ. ನಮ್ಮಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.