Advertisement

ಸಾ.ರಾ.ಮಹೇಶ್‌ ವರ್ತನೆಯಿಂದ ಮೈತ್ರಿ ಸರ್ಕಾರ ಪತನ

09:37 PM Sep 15, 2019 | Team Udayavani |

ಕೆ.ಆರ್‌.ನಗರ: ಶಾಸಕ ಸಾ.ರಾ.ಮಹೇಶ್‌ ಅವರ ದುರಾಹಂಕಾರದ ವರ್ತನೆಯೇ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಕಿಡಿಕಾರಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ಮಾತನಾಡಿದ ಅವರು, ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದ ಶಾಸಕನ ನಡವಳಿಕೆಯಿಂದಲೇ ಒಕ್ಕಲಿಗ ಸಮಾಜದ ಕೆಲವು ಶಾಸಕರು ಜೆಡಿಎಸ್‌ ಪಕ್ಷ ಬಿಟ್ಟು ಹೊರ ಹೋಗಬೇಕಾಯಿತು ಎಂದರು.

Advertisement

ಎಚ್‌.ವಿಶ್ವನಾಥ್‌ ರಾಜಕೀಯವಾಗಿ ಮೂಲೆ ಗುಂಪಾಗಿದ್ದರು. ಅವರನ್ನು ನಾನು ಜೆಡಿಎಸ್‌ ಪಕ್ಷಕ್ಕೆ ಕರೆತಂದು ಅಧಿಕಾರ ಕೊಡಿಸಿದೆ ಎಂದು ಹೇಳುವ ಸಾ.ರಾ.ಮಹೇಶ್‌ ವರ್ತನೆ ಬಾಲಿಶವಾದುದು. ನಾನೂ ಕೂಡ ರಾಜಕೀಯದಲ್ಲಿ 40 ವರ್ಷಗಳಿಂದ ಇದ್ದು ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಹಾಗಾಗಿ ನನ್ನ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದರು.

ಎಚ್‌.ಡಿ.ದೇವೇಗೌಡರ ಕುಟುಂಬ ಅಧಿಕಾರ ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯಲು ನಾವ್ಯಾರು ಕಾರಣರಲ್ಲ. ಅದಕ್ಕೆ ನೇರ ಹೊಣೆಗಾರ ಸಾ.ರಾ.ಮಹೇಶ್‌ ಮತ್ತು ಅವರ ಸ್ನೇಹಿತರು ಎಂಬುದು ರಾಜ್ಯದ ಜನತೆಗೆ ತಿಳಿದಿರುವ ವಿಚಾರ ಎಂದು ಛೇಡಿಸಿದ ಅವರು, ಈ ಕಟುಸತ್ಯ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿಯವರಿಗೂ ಮನವರಿಕೆಯಾಗಿದೆ ಎಂದು ಹೇಳಿದರು.

ಕೆ.ಆರ್‌.ನಗರ ತಾಲೂಕಿಗೆ 700 ಕೋಟಿ ರೂ. ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿರುವ ಸಾ.ರಾ.ಮಹೇಶ್‌ ಅದರ ಲೆಕ್ಕ ಕೊಡಲಿ ಎಂದ ಎಚ್‌.ವಿಶ್ವನಾಥ್‌ ಇದರ ಜತೆಗೆ ಸರ್ಕಾರದ ಅನುದಾನ ವಾಪಸ್‌ ಹೋಗಿದೆ ಎಂದು ಅವರು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದ ಆರೋಪ ಎಂದು ವ್ಯಂಗ್ಯವಾಡಿದರು.

ಕೆ.ಆರ್‌.ನಗರ ಸೇರಿದಂತೆ ನಾಲ್ಕು ತಾಲೂಕುಗಳ ರೈತರ ಜೀವನಾಡಿಯಾಗಿದ್ದ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಮುಚ್ಚಿಸಿದ ನಂತರ ಅದರ ಆರಂಭಕ್ಕೆ ಪಾದಯಾತ್ರೆ, ಧರಣಿಯಂತಹ ನಾಟಕವಾಡಿದ ಸಾ.ರಾ.ಮಹೇಶ್‌ ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಪರಮಾಪ್ತರಾಗಿದ್ದರೂ ಪುನರಾರಂಭಕ್ಕೆ ಯಾಕೆ ಪ್ರಯತ್ನಿಸಲಿಲ್ಲ ಎಂದು ಪ್ರಶ್ನಿಸಿದರು.

Advertisement

ಕಾರ್ಖಾನೆಯ ಭೂಮಿಯನ್ನು ಸರ್ಕಾರಕ್ಕೆ ಅಡವಿಡಿಸಿ ಆ ಹಣದಿಂದ ಕಾರ್ಮಿಕರ ವೇತನ ಕೊಡಿಸಿದ್ದು ಶಾಸಕರ ಸಾಧನೆ ಎಂದು ಜರಿದ ಎಚ್‌.ವಿಶ್ವನಾಥ್‌ ಕೆ.ಆರ್‌.ನಗರಕ್ಕೆ ನಾನು ಮಾಡಿರುವಷ್ಟು ಅಭಿವೃದ್ಧಿ ಕೆಲಸಗಳನ್ನು ನೀನು ಮಾಡಿಲ್ಲ ಎಂದು ಸಾ.ರಾ.ಮಹೇಶ್‌ ವಿರುದ್ಧ ಏಕ ವಚನದಲ್ಲಿ ಹರಿಹಾಯ್ದರು. ತಮ್ಮ ತಪ್ಪನ್ನು ಮುಚ್ಚಿಸಲು ನನ್ನ ಹೆಸರು ಹೇಳಬೇಡಿ ಎಂದರು.

ತಾಲೂಕಿನಲ್ಲಿ ಮುಚ್ಚಿ ಹೋಗಿದ್ದ ಸಹಕಾರ ಸಂಘಗಳನ್ನು ಪುನಶ್ಚೇತನ ಮಾಡಿ ಸಹಕಾರಿಗಳಿಗೆ ಅನುಕೂಲ ಕಲ್ಪಿಸಿಕೊಡುವುದರ ಜತೆಗೆ ಇತರ ಹತ್ತಾರು ಶಾಶ್ವತ ಕೆಲಸಗಳನ್ನು ಮಾಡಿದ ಸಾಧನೆ ನನ್ನದು ಎಂದ ವಿಶ್ವನಾಥ್‌ 2004ರ ತನಕ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಉತ್ತಮವಾಗಿ ನಾನು ನಡೆಸಿಕೊಂಡು ಬಂದಿದ್ದೆ. ಆದರೆ ಅದನ್ನು ಮುಚ್ಚಿಸಿದ್ದು ಅವರ ಸಾಧನೆ ಎಂದರು.

ಕೆ.ಆರ್‌.ಪೇಟೆ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಅವರು ಹೆಚ್‌.ಡಿ.ದೇವೇಗೌಡ ಅವರ ಕುಟುಂಬದ ವಿರುದ್ಧ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡ ಎಚ್‌.ವಿಶ್ವನಾಥ್‌ ಅವರು ಹೇಳಿರುವುದು ಸತ್ಯ ಅಡಗಿದೆ ಎಂದರು.  ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಕಳೆದ 15 ದಿನಗಳಿಂದ ಇಡಿ ಕಸ್ಟಡಿಯಲ್ಲಿ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾನೂನಿಗಿಂತ ಯಾರೂ ದೊಡ್ಡವರಲ್ಲ.

ಆದರೆ ಡಿ.ಕೆ.ಶಿವಕುಮಾರ್‌ ನನ್ನ ಜತೆ ರಾಜಕೀಯವಾಗಿ ಬೆಳೆದವರು. ಹಾಗಾಗಿ ಆದಷ್ಟು ಬೇಗ ಅವರು ಕಾನೂನಿನ ಸಂಕೋಲೆಯಿಂದ ಹೊರಬಂದು ಮತ್ತೆ ಸಕ್ರಿಯ ರಾಜಕೀಯ ಆರಂಭಿಸಬೇಕೆಂದು ಹಾರೈಸಿದರು. ತಾಪಂ ಸದಸ್ಯ ಮುಂಡೂರುಕುಮಾರ್‌, ಎಪಿಎಂಸಿ ಮಾಜಿ ನಿರ್ದೇಶಕ ರಾಜಶೇಖರ, ಪುರಸಭೆ ಮಾಜಿ ಸದಸ್ಯ ಪೆರಿಸ್ವಾಮಿ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next