Advertisement

Parliament session ಮೊದಲೇ ಮೈತ್ರಿ ಘೋಷಣೆ? ಲೋಕಸಭೆ ಸ್ಪರ್ಧೆಯಿಂದ ಎಚ್‌ಡಿಕೆ ದೂರ

09:39 PM Sep 11, 2023 | Team Udayavani |

ಬೆಂಗಳೂರು: ಇದೇ ತಿಂಗಳು ನಡೆಯುವ ಸಂಸತ್‌ ಅಧಿವೇಶನಕ್ಕೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಅಮಾವಾಸ್ಯೆಯ ಮರುದಿನ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ದಿಲ್ಲಿಗೆ ತೆರಳಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹರಡಿದೆ.

Advertisement

ರವಿವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮೈತ್ರಿ ವಿಚಾರವನ್ನು ದೃಢಪಡಿಸುತ್ತಿದ್ದಂತೆ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಜತೆ ನಡೆಯುವ ಮಹತ್ವದ ಸಭೆ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.

ಸ್ಪರ್ಧೆ ಇಲ್ಲ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಕಣಕ್ಕೆ ಇಳಿಯದಿರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಡಿ.ಕೆ.ಸುರೇಶ್‌ ವಿರುದ್ಧ ಕುಮಾರಸ್ವಾಮಿ ಕಣಕ್ಕೆ ಇಳಿಯಬೇಕೆಂಬ ಆಗ್ರಹ ಬಿಜೆಪಿ ಸ್ನೇಹಿತರು ವ್ಯಕ್ತಪಡಿಸಿದ್ದಾರೆ. ಆದರೆ ಈ ಪ್ರಸ್ತಾವಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದು, ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಸ್ಪರ್ಧಿಸಲಿ ಎಂದು ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ. ರಾಜ್ಯ ರಾಜಕಾರಣದಲ್ಲೇ ನಾನು ಮುಂದುವರಿಯುತ್ತೇನೆಂದು ಕುಮಾರಸ್ವಾಮಿ ಹೇಳಿದ್ದು, ಇದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಶಾಸಕರಲ್ಲಿ ಆತಂಕ
ಆದರೆ ಬಿಜೆಪಿ-ಜೆಡಿಎಸ್‌ ಮೈತ್ರಿ ಜಾತ್ಯತೀತ ಜನತಾ ದಳದ ಕೆಲವು ಹೊಸ ಶಾಸಕರ ಆತಂಕಕ್ಕೂ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಶಾಸಕರಾದ ಸ್ವರೂಪ್‌, ಎ.ಮಂಜು, ಕರೆಮ್ಮ, ಶರಣಗೌಡ ಕಂದಕೂರ್‌, ನೇಮಿರಾಜ ನಾಯ್ಕ ಮೊದಲಾದವರು ಕುಮಾರಸ್ವಾಮಿಯವರಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ನಾಯಕರ ಜತೆ ನೇರಾನೇರ ಹಣಾಹಣಿ ನಡೆಸಿ ನಾವು ಗೆದ್ದಿದ್ದೇವೆ. ಈಗ ಮೈತ್ರಿಯಾದರೆ ಅವರ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ ಎಂಬ ದುಗುಡ ಈ ಶಾಸಕರದ್ದಾಗಿದೆ.

ವಿಪಕ್ಷ ನಾಯಕ ?
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಎಚ್‌.ಡಿ. ಕುಮಾರಸ್ವಾಮಿ ವಿಪಕ್ಷ ನಾಯಕರಾಗಬಹುದೆಂಬ ಚರ್ಚೆ ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಬಿಜೆಪಿಯ ಕೆಲವು ಹಿರಿಯ ಶಾಸಕರೇ ಕುಮಾರಸ್ವಾಮಿ ಜತೆಗೆ ಈ ಪ್ರಸ್ತಾವ ಇಟ್ಟಿದ್ದಾರೆ. ಆಗ ವಿಧಾನಸಭೆಯಲ್ಲಿ ಹೊಸ ಸಮೀಕರಣ ತೆರೆದುಕೊಳ್ಳಬಹುದು ಎನ್ನಲಾಗುತ್ತಿದೆ. ಕುಮಾರಸ್ವಾಮಿ ವಿಪಕ್ಷ ನಾಯಕರಾದರೆ, ಮಾಜಿ ಸಚಿವ ವಿ.ಸುನಿಲ್‌ ಕುಮಾರ್‌ ಉಪನಾಯಕ ಸ್ಥಾನಕ್ಕೆ ನೇಮಕವಾಗುವ ಸಾಧ್ಯತೆ ಇದ್ದು, ಯಡಿಯೂರಪ್ಪ ಅವರ ಇಚ್ಛೆಗೆ ಅನುಸಾರವಾಗಿ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಸಭೆ ಮುಖ್ಯ ಸಚೇತಕ ಹುದ್ದೆಯನ್ನು ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

Advertisement

ಬಿಜೆಪಿ ಪದಾಧಿಕಾರಿಗಳ ಸಭೆ
ಮೈತ್ರಿ ಖಚಿತ ಆಗುತ್ತಿರುವುದರ ಮಧ್ಯೆಯೇ ಬಿಜೆಪಿ ಪದಾಧಿಕಾರಿಗಳ ಸಭೆ ಮಂಗಳವಾರ ನಡೆಯಲಿದ್ದು, ಲೋಕಸಭಾ ಚುನಾವಣೆ ಸಿದ್ಧತೆಗೆ ಸಂಬಂಧಪಟ್ಟಂತೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಸಭೆಯನ್ನು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ಮೊದಲಾದವರು ಭಾಗವಹಿಸಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next