Advertisement

Alleged: ಇದು 60 ಪರ್ಸೆಂಟ್‌ ಲಂಚದ ಕಾಂಗ್ರೆಸ್‌ ಸರಕಾರ: ಎಚ್‌.ಡಿ.ಕುಮಾರಸ್ವಾಮಿ ಆರೋಪ

01:23 AM Jan 06, 2025 | Team Udayavani |

ಮೈಸೂರು: ಕಾಂಗ್ರೆಸ್‌ ಸರಕಾರದಲ್ಲಿ ಲಂಚದ ಪ್ರಮಾಣ ಶೇ. 60ಕ್ಕೆ ತಲುಪಿದೆ. ಬಡವರಿಗೆ ಕೊಡುವ ಮನೆಗಳ ಹಂಚಿಕೆಯಲ್ಲಿಯೂ ಲಂಚ ಪಡೆಯಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಾತನ್ನು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ. ಮೊದಲು ಪಿಡಿಒ (ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ) ಲಂಚ ಪಡೆಯುತ್ತಿದ್ದರು. ಈಗ ವಿಧಾನಸೌಧದಲ್ಲಿ ಸಚಿವರೇ ರಾಜಾರೋಷವಾಗಿ ಪಡೆಯುತ್ತಿದ್ದಾರೆ. ಇವರ “ಸತ್ಯಮೇವ ಜಯತೆ’ ಬರೀ ಜಾಹೀರಾತಿಗೆ ಸೀಮಿತ ಎಂದು ಕುಟುಕಿದರು.

ಗಾಂಧೀಜಿ ಅವರ ಸತ್ಯಮೇವ ಜಯತೆ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾರಾ? ಅವರ ಆತ್ಮಕ್ಕೆ ಅವರೇ ಉತ್ತರ ಕೊಟ್ಟುಕೊಳ್ಳಲಿ. ಹಣ ಲೂಟಿ ಮಾಡುವುದಕ್ಕೆ ಇತಿಮಿತಿ ಇಲ್ಲವೇ? ಎಂದು ಕುಮಾರಸ್ವಾಮಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ರಾಜ್ಯದ ಗುತ್ತಿಗೆದಾರರ ಪರಿಸ್ಥಿತಿ ಶೋಚನೀಯವಾಗಿದೆ. ಕಾಂಗ್ರೆಸ್‌ ಪಕ್ಷದ ಪರವಾಗಿರುವ ಗುತ್ತಿಗೆದಾರರು ಇವತ್ತಿನ ಪರಿಸ್ಥಿತಿ ನೋಡಿದರೆ ಹಿಂದಿನ ಬಿಜೆಪಿ ಸರಕಾರವೇ ಚೆನ್ನಾಗಿತ್ತು ಎನ್ನುತ್ತಿದ್ದಾರೆ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಪಕ್ಷ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೆಎಸ್ಸಾರ್ಟಿಸಿ ಬಸ್‌ ಪ್ರಯಾಣ ದರವನ್ನು ಒಮ್ಮೆಲೇ ಶೇ. 15ರಷ್ಟು ಏರಿಕೆ ಮಾಡಿರುವ ಸರಕಾರ ಮಧ್ಯಮ ವರ್ಗದ ಜನರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ. “ಅತ್ತೆಯದನ್ನು ಅಳಿಯ ದಾನ ಮಾಡಿದ’ ಎನ್ನುವ ಗಾದೆಮಾತಿನಂತೆ ಅವರಿಂದ ಕಿತ್ತು ಅವರಿಗೆ ಕೊಡುವುದಕ್ಕೆ ಇವರೇ ಆಗಬೇಕಾ? ಪ್ರಯಾಣ ದರ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಯಾವುದೇ ಮಂತ್ರಿಯ ಮಕ್ಕಳು, ಶಾಸಕರ ಮಕ್ಕಳು ಸರಕಾರಿ ಬಸ್‌ನಲ್ಲಿ ಓಡಾಡುವುದಿಲ್ಲ. ಓಡಾಡುವವರೆಲ್ಲಾ  ಜನ ಸಾಮಾನ್ಯರು. ದಿನಕ್ಕೆ 10 ರೂಪಾಯಿ ಹೆಚ್ಚಿಗೆಯಾದರೂ ಅದು ಅವರಿಗೆ ಹೊರೆಯೇ ಎಂದು ಕಳವಳ ವ್ಯಕ್ತಪಡಿಸಿದರು.

ಜನರು ಕೊಡಬೇಕು
ವಿಪಕ್ಷವಾಗಿ ರಾಜ್ಯದಲ್ಲಿ ಬಿಜೆಪಿ ವಿಫ‌ಲಗೊಂಡಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ಈ ವಿಚಾರವಾಗಿ ನಾನು ಹೇಳುವುದಲ್ಲ. ಜನರು ಸರ್ಟಿಫಿಕೆಟ್‌ ಕೊಡುತ್ತಾರೆ ಎಂದರು.

Advertisement

ಮಾಂಸ ಖರೀದಿಗೆ ಎಷ್ಟು ಕಷ್ಟ ಪಡುತ್ತಾರೆ, ಗೊತ್ತಾ?’
ಬಸ್‌ ಪ್ರಯಾಣ ದರ ಏರಿಕೆ ಪ್ರಶ್ನಿಸಿದರೆ ಮಾಂಸ ತಿನ್ನುವುದಿಲ್ಲವೇ ಎಂದು ಸಚಿವರು ಹಾರಿಕೆಯ ಉತ್ತರ ನೀಡುತ್ತಾರೆ. ಬಡವರು ಮಾಂಸ ತಿನ್ನುವುದರ ಮೇಲೆ ಇವರಿಗೇಕೆ ಕಣ್ಣು? ಬಡ ಮಧ್ಯಮ ವರ್ಗದವರು ವಾರಕ್ಕೆ ಒಮ್ಮೆ ಮಾಂಸ ಖರೀದಿ ಮಾಡಲು ಎಷ್ಟು ಕಷ್ಟಪಡುತ್ತಾರೆ ಎಂದು ಇವರಿಗೆ ಗೊತ್ತಿದೆಯಾ? ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಇವರ ಕಾರ್ಯಕ್ರಮ ಏನು? ಅಷ್ಟು ಪರಿಜ್ಞಾನ ಬೇಡವೇ ಇವರಿಗೆ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆ ದಯವಿಟ್ಟು ನಿಲ್ಲಿಸಬೇಡಿ: ಕೇಂದ್ರ ಸಚಿವ
ಮಳವಳ್ಳಿ: ಜನರಿಗೆ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಹೇಗಾದರೂ ಮಾಡಿ ನಿಲ್ಲಿಸಬೇಕೆಂದು ರಾಜ್ಯದ ಕಾಂಗ್ರೆಸ್‌ ಸರಕಾರ ಕಾರಣ ಹುಡುಕುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ಧ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು, ಯಾವುದೇ ಕಾರಣಕ್ಕೂ ಉಚಿತ ಯೋಜನೆಗಳನ್ನು ನಿಲ್ಲಿಸಬೇಡಿ ಎಂದು ಆಗ್ರಹಿಸಿದರು.

ಆರೋಪ ಮಾಡುವುದಿದ್ದರೆ ದಾಖಲೆ ಸಹಿತ ಸಾಬೀತುಪಡಿಸಿ: ಸಿದ್ದರಾಮಯ್ಯ ಸವಾಲು
ವಿಪಕ್ಷಗಳಿಗೆ ಕೇವಲ ಆರೋಪ ಮಾಡುವುದೇ ಕೆಲಸವಾಗಿಬಿಟ್ಟಿದೆ. ಏನೇ ಆರೋಪ ಮಾಡುವುದಿದ್ದರೂ ದಾಖಲೆಗಳ ಸಹಿತ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ನಮ್ಮ ಸರಕಾರದಲ್ಲಿ ಶೇ. 60 ಕಮಿಷನ್‌ ಪಡೆಯಲಾಗಿದೆ ಎಂದು ಆರೋಪಿಸುವವರು ಮೊದಲು ಅದನ್ನು ಸಾಬೀತು ಪಡಿಸಬೇಕು. ಆಧಾರವಿಲ್ಲದೆ ಆರೋಪಗಳನ್ನು ಮಾಡುವುದು ಸರಿಯಲ್ಲ. ಎಚ್‌.ಡಿ.ಕುಮಾರಸ್ವಾಮಿ ಈ ಹಿಂದೆಯೂ ಹಲವಾರು ಆರೋಪ ಮಾಡಿದ್ದಾರೆ. “ಹಿಟ್‌ಆ್ಯಂಡ್‌ ರನ್‌’ನಲ್ಲಿ ಅವರು ಸಿದ್ಧಹಸ್ತರು. ಒಂದು ಆರೋಪವನ್ನೂ ಸಾಬೀತುಪಡಿಸಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next