Advertisement

ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ

03:23 AM Oct 27, 2021 | Team Udayavani |

ಮಂಗಳೂರು: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿ ಒಂದು ಗಂಟೆ ಕಾಲ ಕಾಯುವಂತೆ ಮಾಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತಂತೆ ಡಿಎಂಒ ಅವರು ಸಮಗ್ರ ತನಿಖೆ ನಡೆಸಿ 4 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ. ಶಾಸಕ ಡಿ. ವೇದವ್ಯಾಸ ಕಾಮತ್‌ ಕೂಡ ಮಂಗಳವಾರ ವೆನ್ಲಾಕ್ ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಕಾಸರಗೋಡು ಮೂಲದ ಮಹಿಳೆಯೊಬ್ಬರು ಉರಿಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದರು. ಸೋಮವಾರ ಏಕಾಏಕಿ ಉಸಿರಾಟದ ತೊಂದರೆ ಉಂಟಾಗಿತ್ತು. ಅಲ್ಲಿನ ಜಿಲ್ಲಾಸ್ಪತ್ರೆಗೆ ಹೋದಾಗ ಮಂಗಳೂರಿಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಸಂಜೆ ವೆನ್ಲಾಕ್ ಗೆ ಬಂದಿದ್ದರು. ಅಗ ನಿರ್ಲಕ್ಷ್ಯ ತೋರಿದ ಸಿಬಂದಿ “ಐಸಿಯು ಖಾಲಿ ಇಲ್ಲ; ಹೊಸ ಬ್ಲಾಕ್‌ನಲ್ಲಿ ವಿಚಾರಿಸಿ’ ಎಂದರು ಎನ್ನಲಾಗಿದೆ.

ಹೊಸ ಬ್ಲಾಕ್‌ನಲ್ಲಿ 1 ಗಂಟೆ ಕಾದರೂ ಅಲ್ಲಿಯೂ ಐಸಿಯು ಖಾಲಿ ಇಲ್ಲ; ಬೇರೆ ಆಸ್ಪತ್ರೆಗೆ ಕರೆದೊಯ್ಯಿರಿ ಎನ್ನಲಾಗಿತ್ತು. ರೋಗಿಯ ಜತೆಗಿದ್ದ
ವರು ತರಾಟೆಗೆ ತೆಗೆದುಕೊಂಡ ಬಳಿಕ ದಾಖಲಿಸಿಕೊಂಡರೂ 1 ಗಂಟೆಯ ಬಳಿಕ ಮೃತಪಟ್ಟಿದ್ದರು. ಇದಕ್ಕೆ ಸಿಬಂದಿಯ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಲಾಗಿದೆ.”ಪತ್ನಿಗೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ವೆನ್ಲಾಕ್ ಗೆ ಕರೆತರಲಾಗಿತ್ತು. ಎಷ್ಟು ಹೊತ್ತು ಕಾದರೂ ದಾಖಲಿಸಿಕೊಳ್ಳಲಿಲ್ಲ. ಬಳಿಕ ಶಾಸಕ ವೇದವ್ಯಾಸ ಕಾಮತ್‌ ಅವರ ಗಮನಕ್ಕೆ ತಂದಿದ್ದು, ಬಳಿಕವಷ್ಟೇ ವೆಂಟಿಲೇಟರ್‌ ಸೌಲಭ್ಯ ದೊರೆತಿದೆ. ಆದರೆ ಉಳಿಸಿಕೊಳ್ಳಲಾಗಲಿಲ್ಲ’ ಎಂದು ಪತಿ ಆರೋಪಿಸಿದ್ದಾರೆ.

ಇದನ್ನೂ ಓದಿ:ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಆದೇಶ ಮರುಪರಿಶೀಲನೆಗೆ ಹೈಕೋರ್ಟ್‌ ಸೂಚನೆ

ಇನ್ನೊಂದು ಪ್ರಕರಣ
ಇನ್ನೊಂದು ಪ್ರಕರಣದಲ್ಲಿ ಕಾರ್ಕಳದ ನಿವಾಸಿಯೊಬ್ಬರು ಬಿದ್ದು ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಗೆ ಕರೆತರಲಾಗಿತ್ತು. ಆಗಲೂ ಸಿಬಂದಿ ಸರಿಯಾಗಿ ಸ್ಪಂದಿಸಿಲ್ಲ ಎಂದು ಮೃತರ ಪತ್ನಿ ಅಳಲು ತೋಡಿಕೊಂಡಿದ್ದಾರೆ.

Advertisement

ಸಮಗ್ರ ತನಿಖೆಗೆ ಸೂಚನೆ
ಘಟನೆ ಬಗ್ಗೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದು, “ಮಾಹಿತಿ ಬಂದಾಕ್ಷಣ ವೈದ್ಯಾಧಿಕಾರಿಗಳ ಬಳಿ ವಿಚಾರಿಸಿದ್ದು, ರೋಗಿಯನ್ನು ಕರೆತರುವಾಗಲೇ ಸ್ಥಿತಿ ಹದಗೆಟ್ಟಿತ್ತು ಎಂದ್ದಾರೆ. ಆದರೆ ಆಸ್ಪತ್ರೆಯಲ್ಲಿ ದಾಖಲಿಸಲು ವಿಳಂಬಿಸಿದ್ದರಿಂದ ಹೀಗಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿರುವುದರಿಂದ ಸಮಗ್ರ ತನಿಖೆ ನಡೆಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದಿದ್ದಾರೆ.

ನಿರ್ಲಕ್ಷ್ಯ ತೋರಿಲ್ಲ
“ರೋಗಿಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಲ್ಲ. ಕಾಸರಗೋಡಿನ ರೋಗಿ ಬಂದಾಗ ಇತರ ಮೂವರು ರೋಗಿಗಳನ್ನು ದಾಖಲಿಸಲಾಗುತ್ತಿತ್ತು. ಅವರಿಗೆ ವ್ಯವಸ್ಥೆ ಕಲ್ಪಿಸಿ ಇವರಿಗೆ ವೆಂಟಿಲೇಟರ್‌ ವ್ಯವಸ್ಥೆ ಮಾಡಲಾಗಿತ್ತು’ ಎಂದು ವೆನ್ಲಾಕ್ ನ ವೈದ್ಯಕೀಯ ಅಧೀಕ್ಷಕ ಡಾ| ಸದಾಶಿವ ಶಾನುಭಾಗ್‌ ತಿಳಿಸಿದ್ದಾರೆ.

ಸಿಸಿ ಕೆಮರಾ ಅಳವಡಿಕೆ
ಶಾಸಕ ವೇದವ್ಯಾಸ ಕಾಮತ್‌ ಪ್ರತಿಕ್ರಿಯಿಸಿ, “ವೈದ್ಯರು, ವೈದ್ಯಾಧಿಕಾರಿಗಳು, ರೋಗಿಯ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಕಾರ್ಕಳದ ವ್ಯಕ್ತಿಯ ಚಿಕಿತ್ಸೆಗೆ ತೊಂದರೆಯಾದ ಆರೋಪ ಬಂದಾಗಲೂ ಡಿಎಂಒ ಜತೆ ಮಾತನಾಡಿ ದಾಖಲಾತಿಗೆ ಸೂಚಿಸಿದ್ದೆ. ಇಂತಹ ಘಟನೆಗಳನ್ನು ತಪ್ಪಿಸಲು ವೆನ್ಲಾಕ್ ಹಳೆ ಕಟ್ಟಡದ ಕಾರಿಡಾರ್‌ ಸೇರಿದಂತೆ ಅಲ್ಲಲ್ಲಿ ಸಿಸಿ ಕೆಮರಾ ಅಳವಡಿಸಲಾಗುವುದು’ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next