Advertisement

ಸ್ನೇಹಾ ಸೊಸೈಟಿಯಲ್ಲಿ ಅವ್ಯವಹಾರ ಆರೋಪ

10:54 AM Dec 18, 2021 | Team Udayavani |

ಕಲಬುರಗಿ: ತೃತೀಯ ಲಿಂಗಿಗಳ ಶ್ರೇಯೋಭಿವೃದ್ಧಿಯಾಗಿ ಸ್ಥಾಪಿತವಾಗಿರುವ ಸ್ನೇಹಾ ಸೊಸೈಟಿಯಲ್ಲಿ ಅವ್ಯವಹಾರ ನಡೆದಿದ್ದು, ಇದರ ಲೆಕ್ಕಪತ್ರದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಮಂಗಳಮುಖೀಯರ ಗುರುಗಳಾದ ಸಂತೋಷಿಯಮ್ಮ ಹಾಗೂ ಪಿಂಕಿಯಮ್ಮ ಒತ್ತಾಯಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಸೈಟಿ ಅಧ್ಯಕ್ಷೆಯಾಗಿರುವ ಮುಸ್ಕಾನ್‌, ಕಾರ್ಯದರ್ಶಿ ಅಂಬಿಕಾ ಅನಕ್ಷರಸ್ಥರಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಸೊಸೈಟಿಯ ಪ್ರೋಗ್ರಾಮ ಮ್ಯಾನೇಜರ್‌ ಮೌನೇಶ ಕೋರವಾರ, ಪ್ರೊಜೆಕ್ಟ್ ಡೈರೆಕ್ಟರ್‌ ಮನಿಷಾ ಚವ್ಹಾಣ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಕೊರೊನಾ ಮತ್ತು ಲಾಕ್‌ಡೌನ್‌ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆಗಳು ಸುಮಾರು ಒಂಭತ್ತು ಸಾವಿರ ಕಿಟ್‌ ಗಳನ್ನು ಕಲ್ಪಿಸಿವೆ. ಆದರೆ, ಈ ಕಿಟ್‌ಗಳನ್ನು ಯಾರಿಗೆ ಹಂಚಿಕೆ ಮಾಡಲಾಗಿದೆ ಎಂದು ಪ್ರಶ್ನಿಸಿದರು.

ಸೊಸೈಟಿಗೆ ಬಿಡುಗಡೆಯಾದ ಹಣ ಮತ್ತು ಕಿಟ್‌ಗಳ ಬಗ್ಗೆ ಪ್ರಶ್ನೆ ಮಾಡಿದ ಮಂಗಳಮುಖೀಯರ ಮೇಲೆ ಮೌನೇಶ ಕೋರವಾರ, ಮನಿಷಾ ಚವ್ಹಾಣ ಹಲ್ಲೆ ಮಾಡಿದ್ದಾರೆ. ಲೆಕ್ಕ ಕೊಡುತ್ತೇವೆ ಬನ್ನಿ ಎಂದು ಪೂಣಾದಿಂದ ಕರೆಸಿಕೊಂಡು ತಮ್ಮ ತಲೆಗೆ ಕಲ್ಲಿನಿಂದ ತಾವೇ ಹೊಡೆದುಕೊಂಡು ನಮ್ಮ ಮೇಲೆ ಕೇಸ್‌ ದಾಖಲಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ದಲಿತ ಸೇನೆ ಅಧ್ಯಕ್ಷ, ವಕೀಲ ಹಣಮಂತ ಯಳಸಂಗಿ ಮಾತನಾಡಿ, ಸ್ನೇಹಾ ಸೊಸೈಟಿ 2010ರಲ್ಲಿ ಸ್ಥಾಪನೆಯಾಗಿದೆ. 2,300ಕ್ಕೂ ಹೆಚ್ಚು ಮಂಗಳಮುಖೀಯರು ಇದರಲ್ಲಿ ಸದಸ್ಯರಿದ್ದಾರೆ. ಆದರೆ, ಇವರಿಗಾಗಿ ಹಣ ಖರ್ಚು ಮಾಡದೇ ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಹೇಳಿದರು.

Advertisement

ಡಿಸಿ ಕಚೇರಿ ಎದುರು ಪ್ರತಿಭಟನೆ

ಮಂಗಳಮುಖೀಯರು ಎಂದರೆ ಸಮಾಜದಿಂದ ದೂರ ಇರುವ ಸಮುದಾಯ. ಆದರೆ, ಅದೇ ಸಮುದಾಯದ ಎಂಟು ಜನರ ಮೇಲೆ ಮನಿಷಾ ಚವ್ಹಾಣ ಮತ್ತು ಮೌನೇಶ ಕೂಡಿಕೊಂಡು ಅಟ್ರಾಸಿಟಿ ಕೇಸ್‌ ದಾಖಲಿಸಿದ್ದಾರೆ. ತಕ್ಷಣವೇ ಈ ಕೇಸ್‌ ವಾಪಸ್‌ ಪಡೆಯಬೇಕು. ಮಂಗಳವಾರದೊಳಗೆ ಸ್ನೇಹಾ ಸೊಸೈಟಿ ಹಣದ ಬಗ್ಗೆ ತನಿಖೆ ನಡೆಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳಮುಖೀಯರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ದಲಿತ ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ ಎಚ್ಚರಿಸಿದ್ದಾರೆ.

ಸೊಸೈಟಿ ಅಧ್ಯಕ್ಷೆ ಮುಸ್ಕಾನ್‌, ಕಾರ್ಯದರ್ಶಿ ಅಂಬಿಕಾ, ಮಂಗಳಮುಖೀಯರಾದ ಭೀಮಾ, ಶೀಲಾ ಇನ್ನಿತರರು ಇದ್ದರು.

ಮನಿಷಾ ಚವ್ಹಾಣ ಬೇರೆ ಮಂಗಳಮುಖೀಯರಿಗೆ ಭಿಕ್ಷೆ ಬೇಡುವುದು ಬೇಡ ಎನ್ನುತ್ತಿದ್ದಳು. ಭಿಕ್ಷೆ ಬೇಡದೆ ಮಂಗಳಮುಖೀಯರು ಜೀವನ ಸಾಗಿಸುವುದು ಹೇಗೆ? ಆದರೆ, ಇದೇ ಮನಿಷಾ ಚವ್ಹಾಣ ಐಷಾರಾಮಿ ಜೀವನ ನಡೆಸುತ್ತಿದ್ದು, ಇದಕ್ಕೆ ಹಣ ಎಲ್ಲಿಂದ ಬರುತ್ತಿದೆ? -ಸಂತೋಷಿಯಮ್ಮ, ಮಂಗಳಮುಖೀಯರ ಗುರು

Advertisement

Udayavani is now on Telegram. Click here to join our channel and stay updated with the latest news.

Next