Advertisement

ಟೆಂಡರ್ ಅಕ್ರಮ ಆರೋಪ : ಸಚಿವ ಅಶ್ವತ್ಥ ನಾರಾಯಣ ತಿರುಗೇಟು

09:05 PM Jul 11, 2022 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಿಸಲು ಕರೆದಿದ್ದ ಟೆಂಡರ್ ನಲ್ಲಿ ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಖಂಡತುಂಡವಾಗಿ ಅಲ್ಲಗಳೆದಿರುವ ಉನ್ನತ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಇದೊಂದು ಆಧಾರರಹಿತ ಆಪಾದನೆ ಎಂದಿದ್ದಾರೆ. ಟೆಂಡರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆದಿದೆ ಎಂದು ಹೇಳಿದ್ದಾರೆ.

Advertisement

ಸಮಾಜದಲ್ಲಿ ಜನರ ಗಮನಸೆಳೆಯಲು ಯಾವುದೇ ರಚನಾತ್ಮಕ ಕಾರ್ಯಕ್ರಮಗಳನ್ನು ಹಾಗೂ ಕಾರ್ಯಸೂಚಿಯನ್ನು ಹೊಂದಿರದ ಆಮ್ ಆದ್ಮಿ ಪಕ್ಷವು ಇಲ್ಲದ ಭ್ರಷ್ಟಾಚಾರದ ವಾಸನೆಯನ್ನು ಹಬ್ಬಿಸುವ ಮೂಲಕ ತನ್ನ ಅಸ್ತಿತ್ವ ತೋರಿಸಿಕೊಳ್ಳಲು ಹೊರಟಿದೆ. ಇಂತಹ ಆಪಾದನೆ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ದೃಢವಾಗಿ ಹೇಳಿದ್ದಾರೆ.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಮೂಲಕ ನಡೆದ ಟೆಂಡರ್ ನಲ್ಲಿ ಅಕ್ರಮವಾಗಿದೆ ಎಂದು ಎಎಪಿ ಮುಖಂಡ ಮೋಹನ್ ದಾಸರಿ ಆರೋಪಿಸಿದ್ದಾರೆ. ಆದರೆ, ವಾಸ್ತವವೇನೆಂದರೆ ಮುಂಚೆ ರೂ 22 ಕೋಟಿಗೆ ಕರೆಯಲಾಗಿದ್ದ ಟೆಂಡರ್ ಅನ್ನು ರದ್ದುಗೊಳಿಸಿ ಎರಡನೇ ಬಾರಿ 21-01-22ರಂದು ತೆರೆದ ಬಿಡ್ ನಲ್ಲಿ ರೂ 15.99 ಕೋಟಿ ರೂಪಾಯಿಗಳಿಗೆ ಅಂತಿಮಗೊಳಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ರೂ 5.27 ಕೋಟಿ ರೂಪಾಯಿ ಉಳಿತಾಯವಾಗಿದೆ. ಆದರೆ ಎಎಪಿ ಮುಖಂಡರ ಗಮನ ಸೆಳೆಯುವ ಭರದಲ್ಲಿ ಕೂಲಂಕಷವಾಗಿ ಪರಿಶೀಲಿಸದೆ ಬೇಕಾಬಿಟ್ಟಿ ಆರೋಪ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.

ಟೆಂಡರ್ ಅನುಮೋದನೆ ಪಡೆದಿರುವ ಕಂಪನಿಗೆ ಆಟೋಮೊಬೈಲ್, ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್, ಮೆಕಾನಿಕ್, ಫಿಟ್ಟರ್ ಮತ್ತು ಮೆಕ್ಯಾನಿಕಲ್ ವಲಯಗಳಿಗೆ ರೂ 15.99 ಕೋಟಿ ಮೊತ್ತದಲ್ಲಿ ಟೂಲ್ ಕಿಟ್ ಗಳನ್ನು ಸರಬರಾಜು ಮಾಡಲು ಆದೇಶಿಸಲಾಗಿದೆ. ಈ ಪೈಕಿ ಮೂರು ವಲಯಗಳಿಗೆ ಫ್ರೀ ಡೆಸ್ ಪ್ಯಾಚ್ ಪರಿಶೀಲನೆಗೆ ಜುಲೈ 14ರಂದು ದಿನಾಂಕ ನಿಗದಿಗೊಳಿಸಲಾಗಿದೆ. ಈ ಟೆಂಡರ್ ಪ್ರಕ್ರಿಯೆ ಸಂಬಂಧ ಇದುವರೆವಿಗೂ ಯಾವುದೇ ಹಣ ಕೂಡ ಪಾವತಿಯಾಗಿಲ್ಲ. ಪ್ರಿನ್ಸಿಪಾಲರಿಂದ ದೃಢೀಕೃತ ಬಿಲ್ಲು ಮತ್ತು ಎಂಸಿಇ-07 ಅನ್ನು ಪಡೆದ ನಂತರವಷ್ಟೇ ಹಣ ಪಾವತಿ ನಡೆಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಆಮ್ ಆದ್ಮಿ ಪಕ್ಷದವರಿಗೆ ನೈಜ ಕಾಳಜಿ ಇದ್ದಿದ್ದೇ ಆದರೆ ಸರ್ಕಾರದ ಬೊಕ್ಕಸಕ್ಕೆ ರೂ 5.27 ಕೋಟಿ ರೂಪಾಯಿ ಹೊರೆ ಕಡಿಮೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕಿತ್ತು. ಅದನ್ನು ಬಿಟ್ಟು ಮೊಸರಲ್ಲಿ ಕಲ್ಲು ಹುಡುಕಿ ಭ್ರಷ್ಟಾಚಾರದ ಗುಲ್ಲೆಬ್ಬಿಸಿ ತಾನೂ ಇದ್ದೇನೆ ಇದೆ ಎಂದು ತೋರಿಸಿಕೊಳ್ಳಲು ಹೊರಟಿರುವುದು ಹಾಸ್ಯಾಸ್ಪದ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next