ಚನ್ನಪಟ್ಟಣ: ತಾಲೂಕಿನ ಮುದಗೆರೆ ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್ 118-1ರಲ್ಲಿಯ ಎರಡು ಗುಂಟೆ ಹಾಗೂ ಮೂಲ ಖಾತೆದಾರರ ಸುಮಾರು 7ಗುಂಟೆ ಜಮೀನನ್ನು ಅಕ್ರಮವಾಗಿ ವ್ಯಕ್ತಿಯೊಬ್ಬರು ಖಾತೆ ಮಾಡಿಕೊಂಡಿದ್ದು, ಅವರ ಖಾತೆಯನ್ನು ವಜಾ ಮಾಡಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ತಹಶೀಲ್ದಾರ್‌ರಿಗೆ ತಾಲೂಕು ರೈತ ಸಂಘದ ಮೂಲಕ ನೊಂದವರು ಮನವಿ ಮಾಡಿದ್ದಾರೆ.
ದೂರು: ಗ್ರಾಮದ ಲೇಟ್ ಎಂ.ಪುಟ್ಟೇಗೌಡರ ಪುತ್ರ ಎಂ.ಎಸ್.ನಡಕೇರಿಗೌಡ, ಎಂ.ಎನ್. ಜಗದೀಶ್, ರಂಗನಾಥ್ ಎಂಬವರಿಗೆ ಸೇರಿದ ಎರಡು ಗುಂಟೆ ಪಿತ್ರಾರ್ಜಿತ ಜಮೀನನ್ನು ಇದೇ ಗ್ರಾಮದ ಲೇಟ್ ಚಿಕೈದೇಗೌಡ ಎಂಬವರ ಪುತ್ರ ನಡಕೇರಿಗೌಡ ಎಂಬವರು ತಮಗೆ ಸೇರಿದ ಜಮೀನಿನ ಜತೆಯಲ್ಲಿಯೇ ಅನುಭವದಲ್ಲಿರುವ 2ಗುಂಟೆ ಜಮೀನನ್ನು ಸೇರಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆಂದು ಗಂಭೀರವಾಗಿ ಆರೋಪಿಸಿದರು. ಕಳೆದ 2016-17ರಲ್ಲಿಯೇ ನಕಲಿ ದಾಖಲೆ ಸೃಷ್ಟಿಸಿಕೊಂಡು ಹಾಗೂ ಅಂದಿನ ರಾಜಸ್ವ ನಿರೀಕ್ಷಕ, ಗ್ರಾಮಲೆಕ್ಕಿಗರನ್ನು ಬಳಸಿ ಅಕ್ರಮವೆಸಗಿದ್ದಾರೆಂದು ದೂರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎರಡುಗುಂಟೆ ಜಮೀನಿನ ವಾರಸುದಾರ ಎಂ.ಎನ್. ಜಗದೀಶ್ ಸಂಬಂಧಿಸಿದ ಜಮೀನಿನ ಸರ್ವೆ ಮಾಡುವಾಗ ಅಜುಬಾಜಿನವರಿಗೆ ಯಾವುದೇ ಮಾಹಿತಿ ನೀಡದ ಅಧಿಕಾರಿಗಳು, ಸರ್ವೆ ಮಾಡಿದ್ದಾರೆ. ಅಲ್ಲದೆ ಅಜುಬಾಜಿನವರು ಎಂದು ಬೇರೆ ಗ್ರಾಮದ ಜನರಿಂದ ಸಹಿ ಪಡೆದಿದ್ದು ಅಕ್ರಮಖಾತೆ ಆಗಿದೆ ಎಂದರು.
ಮೇಲ್ಮೋಟಕ್ಕೆ ಕಂಡು ಬಂದಿದೆ: ತಹಶೀಲ್ದಾರ್ ಮಹೇಂದ್ರ ಮಾತನಾಡಿ, ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಸಮರ್ಪಕವಾಗಿಯೇ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ ಸಂಬಂಧಿಸಿದ ಖಾತೆ ಮಾಡುವಾಗ ಮೂಲ ದಾಖಲೆ ಪರಿಶೀಲನೆ ಮಾಡಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿ ಹಾಗೂ ಎಸಿ ಅವರು ಆದೇಶಕ್ಕೆ ಅನುಗುಣವಾಗಿ ಖಾತೆಯಾಗಿದೆ. ನಾವು ಖಾತೆಯನ್ನು ವಜಾ ಮಾಡಲು ಬರುವುದಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಸಂಬಂಧಿಸಿದ ಮೂಲ ದಾಖಲೆ ಪರಿಶೀಲನೆ ನಡೆಸಿ ಹಾಗೂ ಮೇಲ್ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರೈತ ಮುಖಂಡರಾದ ಅಣ್ಣಿಗೆರೆ ಮಲವೇಗೌಡ, ರಾಜು, ಕನ್ನಸಂದ್ರ, ಸಂತೋಷ್, ಜಯಕುಮಾರ್, ಎಂ.ಎನ್. ಸುರೇಶ್, ಕನ್ನಸಂದ್ರ ಅರ್ಕೇಶ್, ಹೋಟೆಲ್ ದೇವರಾಜು, ಶಿಕ್ಷಕ ರಂಗನಾಥ್, ದೀಪಕ್, ಸತೀಶ್, ಕೆಂಪೇಗೌಡ, ಹನಿ ಹಾಗೂ ಹಲವಾರು ಮುಖಂಡರು ಇದ್ದರು.