ಪುತ್ತೂರು : ಪುತ್ತೂರು ನಗರದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಹಲ್ಲೆ ಮತ್ತು ದರೋಡೆ ನಡೆಸಿರುವ ಆರೋಪದಡಿ ಇತ್ತಂಡಗಳಿಂದ ಪ್ರತ್ಯೇಕ ದೂರು ದಾಖಲಾಗಿದೆ.
ಕಾಂಗ್ರೆಸ್ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ಕೊಳ್ತಿಗೆ ನಿವಾಸಿ ಪ್ರದೀಪ್ ಕುಮಾರ್ ರೈ ಪಾಂಬಾರು ಅವರು ನೀಡಿದ ದೂರಿನಂತೆ ಜು. 18ರಂದು ರಾತ್ರಿ ಸ್ನೇಹಿತ ಜೀವರಾಜ್ ಅವರೊಂದಿಗೆ ಕಾರಿನಲ್ಲಿ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಬಂಧಿಯನ್ನು ನೋಡಲು ಬಂದು ಊಟ ಮತ್ತು ನೀರನ್ನು ತರಲು ಸಮೀಪದ ಹೊಟೇಲ್‌ಗೆ ಹೋಗಿ ಅಲ್ಲಿಂದ ಕಾರನ್ನು ಹಿಂದಿರುಗಿಸುವ ವೇಳೆ ಡಸ್ಟರ್ ಕಾರು ಬಂದು ಅಡ್ಡ ನಿಲ್ಲಿಸಿ ಅದರಲ್ಲಿದ್ದವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಅಲ್ಲಿಂದ ಆಸ್ಪತ್ರೆಗೆ ಬಂದು ಜೀವರಾಜ್ ಅವರೊಂದಿಗೆ ಮನೆಯ ಕಡೆ ಹೋಗುವಾಗ ಮಂಜಲ್ಪಡ್ಪು ಬೈಪಾಸ್ ರಸ್ತೆಯ ಬಳಿ ಪೆಟ್ರೋಲ್ ಬಂಕ್‌ನಿಂದ ಅದೇ ಕಾರಿನಲ್ಲಿ ಬಂದವರು ಪ್ರದೀಪ್ ಕುಮಾರ್ ರೈ ಅವರು ಹೋಗುತ್ತಿದ್ದ ಕಾರಿಗೆ ಅಡ್ಡವಾಗಿ ನಿಲ್ಲಿಸಿದಲ್ಲದೆ ಹಲ್ಲೆ ನಡೆಸಿದ್ದಾರೆ.
ಪ್ರದೀಪ್ ಕುಮಾರ್ ರೈ ಅವರ ಬಳಿ ಇದ್ದ ರೂ. 9 ಸಾವಿರ ನಗದು, ಬೆರಳಿನಲ್ಲಿದ್ದ ಚಿನ್ನದ ಉಂಗುರವನ್ನು ಕಿತ್ತು ಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರದೀಪ್ ಕುಮಾರ್ ರೈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಶಾಂತಿ ಭಂಗ ಮತ್ತು ದರೋಡೆ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿ ಇನ್ನೊಂದು ತಂಡದ ಕಲ್ಲಡ್ಕ ನಿವಾಸಿ ಅಭಿಷೇಕ್ ನೀಡಿದ ದೂರಿನಂತೆ ನೆಹರುನಗರದಿಂದ ಮುರಕ್ಕೆ ಸಂಚರಿಸುವ ಮಾರ್ಗ ಮಧ್ಯೆ ಇರುವ ಟಿಂಬರ್ ಶಾಪ್ ಬಳಿ ನಾನು ನಿಂತಿದ್ದ ವೇಳೆ ಪ್ರದೀಪ್ ಕುಮಾರ್ ರೈ ಅವರು ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ನಿಲ್ಲಿಸಿ ನನಗೆ ಅನಾವಾಶ್ಯಕವಾಗಿ ಬೈದು ಹಲ್ಲೆ ಮಾಡಿದ್ದಾರೆ.
ನಮ್ಮದೆ ಸರಕಾರ ಇರುವುದಾಗಿ ಹೇಳಿ ಜೀವ ಬೆದರಿಕೆಯೊಡ್ಡಿದ್ದಾರೆ. ನಾನು ಸ್ನೇಹಿತರಿಗೆ ಕರೆ ಮಾಡುತ್ತಿರುವ ವಿಚಾರ ತಿಳಿದಂತೆ ಪ್ರದೀಪ್ ಕುಮಾರ್ ರೈ ಅವರು ಅಲ್ಲಿಂದ ತೆರಳಿದ್ದಾರೆ. ಬಳಿಕದ ಬೆಳವಣಿಗೆಯಲ್ಲಿ ನನ್ನ ಸ್ನೇಹಿತರು ಪ್ರದೀಪ್ ಕುಮಾರ್ ರೈ ಅವರನ್ನು ಬೊಳುವಾರು ಬೈಪಾಸ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಭಿಷೇಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.