ಬೆಳ್ತಂಗಡಿ: ಬೆಳ್ತಂಗಡಿ ತಾ.ಪಂ.ನ ಸಾಮಾನ್ಯ ಸಭೆಯ ನಿರ್ಣಯಗಳನ್ನು ಅನುಷ್ಠಾನಗೊಳಸಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಸದಸ್ಯರು ಸಭೆಯಲ್ಲಿ ಭಾಗವಹಿಸದೆ ತಾ.ಪಂ. ಸಾಮಾನ್ಯ ಸಭೆ ರದ್ದುಗೊಂಡ ಘಟನೆ ಗುರುವಾರ ಸಂಭವಿಸಿದೆ. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಿಗದಿಗೊಂಡು ಅಧ್ಯಕ್ಷರು ಸಹಿತ ಇಒ ಅವರು ಸಭಾಂಗಣದಲ್ಲಿ ಹಾಜರಿದ್ದರು. ಆದರೆ ಸದಸ್ಯರು ಇದನ್ನು ಧಿಕ್ಕರಿಸಿ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆಯಲ್ಲಿ ಹತ್ತಾರು ಸಮಸ್ಯೆಗಳಿದ್ದು, ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಜತೆಗೆ ತಾ.ಪಂ. ಸಭಾಂಗಣದ ಹೊರಗೆ ನಿಂತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಕುರಿತು ತಾ.ಪಂ. ಅಧ್ಯಕ್ಷರು ಮಾತನಾಡಿ, ಅಧಿಕಾರಿಗಳ ಕರ್ತವ್ಯಲೋಪದ ಕುರಿತು ಸದಸ್ಯರು ಅಸಮಾಧಾನಗೊಂಡಿದ್ದಾರೆ. ಇದಕ್ಕೆ ಅಧಿಕಾರಿಗಳೇ ಹೊಣೆಯಾಗಿದ್ದು, ಸದಸ್ಯರ ಪ್ರಶ್ನೆಗಳಿಗೆ ಅಧಿಕಾರಿಗಳೇ ಉತ್ತರಿಸಬೇಕು ಎಂದರು.
ಈ ಸಂದರ್ಭ ಸಭೆಯಲ್ಲಿದ್ದ ಅಧಿಕಾರಿಗಳು, ಪ್ರತಿ ಇಲಾಖೆಗಳಲ್ಲೂ ಸಿಬಂದಿ ಕೊರತೆಯಿಂದ ನಿಯೋಜಿತ ಕೆಲಸಗಳು ವಿಳಂಬವಾಗುತ್ತಿವೆ. ಕೆಲವು ಇಲಾಖೆಗಳಲ್ಲಿ ಶೇ. 80ಕ್ಕಿಂತಲೂ ಅಧಿಕ ಹುದ್ದೆಗಳು ಖಾಲಿ ಇವೆ. ನಾವು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಜನಪ್ರತಿನಿಧಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಬಳಿಕ ಸದಸ್ಯರು ಸಭೆಗೆ ಬಾರದ ಹಿನ್ನೆಲೆಯಲ್ಲಿ ಗುರುವಾರ ಸಭೆಯನ್ನು ರದ್ದುಗೊಳಿಸಿ, ಸೆ. 7ಕ್ಕೆ ಮುಂದೂಡಲಾಯಿತು. ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್, ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಮ್ಯಾನೇಜರ್ ಗಣೇಶ್, ತಾ| ಸಂಯೋಜಕ ಜಯಾನಂದ್ ಲಾೖಲ ನಿರೂಪಿಸಿದರು.