Advertisement
ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಭಾರತೀಯ ನೌಕಾ ಪಡೆಗೆ ಸೇರ್ಪಡೆಗೊಂಡ ತಾರಿಣಿ ಎಂಬ ಸ್ವದೇಶಿ ನಿರ್ಮಿತ ಲಘು ನೌಕೆಯಿಂದ (ಸೈಲಿಂಗ್ ಬೋಟ್ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ) ಹಲವಾರು ದಾಖಲೆಗಳನ್ನು ನಿರ್ಮಿಸಿ ಮಹಿಳಾ ಸಬಲೀ ಕರಣದ ಹೊಸ ಅಧ್ಯಾಯವನ್ನು ತೆರೆದು ಇಡೀ ಜಗತ್ತು ಭಾರತದ ಮಹಿಳಾ ಶಕ್ತಿ ಹಾಗೂ ಸ್ವದೇಶಿ ನಿರ್ಮಿತ ತಂತ್ರಜ್ಞಾನದ ಗುಣಗಾನ ಮಾಡುವ ಸನ್ನಿವೇಶ ಸೃಷ್ಟಿಯಾಗಲಿದೆ ಎಂಬುದನ್ನೂ ನಿರೀಕ್ಷಿಸಿರಲಿಲ್ಲ. ತಾರಿಣಿ, ಮಹಿಳಾ ಸಬಲೀಕರಣ, ನಾರಿ ಶಕ್ತಿ, ನೌಕಾ ಪಡೆ, ಲಘು ನೌಕೆ, ಇವುಗಳಿಗೆ ಸಂಬಂಧ ಕಲ್ಪಿಸುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿರಬಹುದು.
Related Articles
Advertisement
ಡಿಸೆಂಬರ್ 12, 2017ರಂದು ತಾರಿಣಿ ತಂಡವು ಪೋರ್ಟ್ ಸ್ಟ್ಯಾನ್ ಲೀ ಯಲ್ಲಿನ ಫಾಲ್ಕ್ಲ್ಯಾಂಡ್ ದ್ವೀಪದ ಕಡೆಗೆ 3ನೇ ಹಂತದ ಪ್ರಯಾಣವನ್ನು ಆರಂಭಿಸಿತು. ಈ ಹಂತದ ಪ್ರಯಾಣವು ಮಹಿಳಾ ತಂಡದ ಸಾಮರ್ಥ್ಯ, ತಾಳ್ಮೆ, ದೈಹಿಕ, ಮಾನಸಿಕ ಕ್ಷಮತೆ ಪರೀಕ್ಷಿಸುವ ಘಟ್ಟವಾಗಿತ್ತು. ಏಕೆಂದರೆ ಸುಮಾರು 41 ದಿನಗಳ ಕಾಲ ಪೆಸಿಫಿಕ್ ಸಾಗರದಲ್ಲಿ ಉಂಟಾದ ಸೂಪರ್ ಸೈಕ್ಲೋನ್ ಚಂಡಮಾರುತದ ಸಂದಿಗ್ಧ ಪರಿಸ್ಥಿತಿಯಲ್ಲಿಯೇ ಇವರು ಸಾಗರದ ಮಧ್ಯೆ ನಡೆಸಿದ ಪ್ರಯಾಣವು ಪರಿಣಿತ ನಾವಿಕರನ್ನೂ ನಾಚಿಸುವಂಥದ್ದು. ಈ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ ತಂಡದಲ್ಲಿದ್ದ ಲೆಫ್ಟಿನೆಂಟ್ ಕಮಾಂಡರ್ ಸ್ವಾತಿ ಅವರು, ಪೆಸಿಫಿಕ್ ಸಾಗರದಲ್ಲಿ ಉಂಟಾದ ಪ್ರಕ್ಷುಬ್ಧ ಪರಿಸ್ಥಿತಿ ಹೇಗಿತ್ತೆಂದರೆ ಅಲೆಗಳ ಎತ್ತರವು ಸುಮಾರು ಹತ್ತು ಮೀಟರ್‌ಗಳಷ್ಟಿತ್ತು. ಬೃಹತ್ ಗಾತ್ರದ ಅಲೆಗಳು ನಮಗಪ್ಪಳಿಸುತ್ತಿದ್ದವು. ಅಲೆಗಳ ಎತ್ತರವು ಒಂದೆಡೆಯಾದರೆ ಸುಮಾರು 140 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿತ್ತು ಎಂದು ಮೈ ಜುಮ್ಮೆನ್ನುವ ರೀತಿಯಲ್ಲಿ ವಿವರಿಸುತ್ತಾರೆ.
ಜನವರಿ 21, 2018ರಂದು ಫಾಲ್ಕ್ಲ್ಯಾಂಡ್ ದ್ವೀಪವನ್ನು ಪ್ರವೇಶಿಸಿ ಅಲ್ಲಿ ನೌಕೆಯ ದುರಸ್ತಿ ಕಾರ್ಯಕ್ಕೆ ಹಾಗೂ ಆಹಾರ ಸಾಮಗ್ರಿಗಳನ್ನು ಶೇಖರಿಸುವ ಸಲುವಾಗಿ ಸುಮಾರು ಹದಿನೈದು ದಿನಗಳ ಕಾಲ ತಾರಿಣಿಯನ್ನು ನಿಲುಗಡೆ ಗೊಳಿಸಿದ ಮಹಿಳಾ ತಂಡವು ಅಲ್ಲಿಯೂ ಅನೇಕ ಮಂದಿಯನ್ನು ಭೇಟಿಯಾಗಿ ತಮ್ಮ ಪ್ರವಾಸದ ಬಗ್ಗೆ ವಿವರಿಸಿದರು. ಸಾವಿರಾರು ಮಂದಿ ನೌಕೆಯನ್ನು ವೀಕ್ಷಿಸಲು ಆಗಮಿಸಿ ಇವರನ್ನು ಹುರಿದುಂಬಿಸಿ ಶುಭ ಹಾರೈಸಿದರು. ಜಗತ್ತಿನ ಯಾವುದೇ ಭಾಗವನ್ನು ಸಂಪರ್ಕಿಸಲು ತಾರಿಣಿಯಲ್ಲಿ ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆಯಿತ್ತು. ಪ್ರಯಾಣಕ್ಕೆ ಸಂಬಂಧಿಸಿದ ಹಂತ ಹಂತದ ಮಾಹಿತಿಗಳನ್ನು ತಂಡದ ಸದಸ್ಯೆ ಲೆಫ್ಟಿನೆಂಟ್ ಐಶ್ವರ್ಯಾ ಬ್ಲಾಗ್ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ನೀಡುತ್ತಿದ್ದರು.
ಫೆಬ್ರವರಿ 4, 2018ರಂದು ಪ್ರಯಾಣದ ನಾಲ್ಕನೇ ಘಟ್ಟ ಆರಂಭಿಸಿದ ತಾರಿಣಿ ತಂಡವು 17,500 ನಾಟಿಕಲ್ ಮೈಲ್‌ಗಳಷ್ಟು ದೂರವನ್ನು (ಆರಂಭಿಕ ಹಂತದಿಂದ) ಕ್ರಮಿಸಿ ಮಾರ್ಚ್ 2, 2018ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಪ್ರವೇಶಿಸಿತು. ಇಲ್ಲಿಯೂ ತಾರಿಣಿ ತಂಡಕ್ಕೆ ಅಭೂತಪೂರ್ವ ಸ್ವಾಗತ ಲಭಿಸಿತು. ಇಲ್ಲಿ ನೆಲೆಸಿರುವ ಭಾರತೀಯರು ಇವರನ್ನು ಸ್ವಾಗತಿಸಲು ತಂಡೋಪತಂಡವಾಗಿ ಆಗಮಿಸಿ ಇವರ ಸಾಹಸದ ಗುಣಗಾನ ಮಾಡಿದರು. ಸುಮಾರು ಎರಡು ವಾರಗಳ ಕಾಲ ನಿಲುಗಡೆಯ ನಂತರ ಮತ್ತೆ ತಮ್ಮ (ಸರ್ಕಮ್ ನೇವಿಗೇಟ್) ಸಾಗರ ಯಾತ್ರೆಯ ಅಂತಿಮ ಹಂತವನ್ನು ಪೂರ್ಣಗೊಳಿಸುವ ಸಲುವಾಗಿ ಭಾರತದತ್ತ ಪ್ರಯಾಣ ಬೆಳೆಸಿದ ತಾರಿಣಿ ತಂಡವು ಮೇ 21, 2018 ರಂದು ತಾಯ್ನಾಡಿಗೆ ಮರಳಿತು. ತಾರಿಣಿ ತಂಡದ ಬರುವಿಕೆಯನ್ನು ನಿರೀಕ್ಷಿಸುತ್ತ ಗೋವಾದ ಸಮುದ್ರ ಕಿನಾರೆಯಲ್ಲಿ ಮುಂಚಿತವಾ ಗಿಯೇ ಆಗಮಿಸಿದ್ದ ನಿರ್ಮಲಾ ಸೀತಾರಾಮನ್ ಭಾರತೀಯ ನೌಕಾ ಪಡೆಯ ಇತರ ಅಧಿಕಾರಿಗಳ ಜೊತೆ ತಾರಿಣಿ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಗಣೇಶ್ ಪ್ರಸಾದ್ ಜಿ. ನಾಯಕ್