Advertisement

ಮೂವರಿಗೂ ಸಿಗಲಿಲ್ಲ ಮಂತ್ರಿಗಿರಿ!

01:11 PM Aug 21, 2019 | Suhan S |

ಕೊಪ್ಪಳ: ಕೊಪ್ಪಳ ಜಿಲ್ಲೆ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಾರತಮ್ಯಕ್ಕೆ ಒಳಗಾಗುತ್ತಲೇ ಬಂದಿದೆ. ಈಗ ಸಚಿವ ಸ್ಥಾನ ನೀಡುವಲ್ಲಿಯೂ ತಾರತಮ್ಯವಾಗಿದೆ. ಈ ಹಿಂದೆ ಮೈತ್ರಿ ಸರ್ಕಾರದಲ್ಲೂ ಕೊಪ್ಪಳ ಜಿಲ್ಲೆಗೆ ಮಂತ್ರಿ ಭಾಗ್ಯ ಸಿಗಲಿಲ್ಲ. ಈಗ ಬಿಜೆಪಿ ಸರ್ಕಾರದಲ್ಲೂ ಮಂತ್ರಿ ಸ್ಥಾನ ಸಿಗಲಿಲ್ಲ. ಹೈಕ ಭಾಗಕ್ಕೊಂದೇ ಮಂತ್ರಿ ಸ್ಥಾನ ನೀಡಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.

Advertisement

ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆ ರಾಜಕೀಯವಾಗಿ ಅನ್ಯಾಯ ಅನುಭವಿಸುತ್ತಲೇ ಬಂದಿದೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕೊಪ್ಪಳ ಹಾಗೂ ಕುಷ್ಟಗಿಯಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇವರಲ್ಲಿ ಹಿರಿಯ ನಾಯಕ ಹಾಲಪ್ಪ ಆಚಾರ್‌ ಅವರಿಗೆ ಮಂತ್ರಿ ಭಾಗ್ಯ ಒಲಿದು ಬರಲಿದೆ ಎಂಬ ನಿರೀಕ್ಷೆ ಇತ್ತು. ಜತೆಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸಹಿತ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಇದರೊಟ್ಟಿಗೆ ಸಿಎಂ ಮಾನಸ ಪುತ್ರ ಎಂದೆನಿಸಿರುವ ಕನಕಗಿರಿ ಶಾಸಕ ಬಸವರಾಜ ದಡೆಸೂಗೂರು ಸಹಿತ ಮಂತ್ರಿಗಿರಿ ಪಡೆಯಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಆದರೆ ಮೂವರು ಶಾಸಕರಲ್ಲಿ ಯಾರಿಗೂ ಮಂತ್ರಿ ಸ್ಥಾನ ನೀಡಲಿಲ್ಲ.

ಮೈತ್ರಿ ಸರ್ಕಾರದಲ್ಲೂ ಸಿಕ್ಕಿರಲಿಲ್ಲ: ಈ ಹಿಂದೆ ರಾಜ್ಯದಲ್ಲಿ 14 ತಿಂಗಳು ಆಡಳಿತ ನಡೆಸಿದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ದಲ್ಲೂ ಕೊಪ್ಪಳ ಜಿಲ್ಲೆಗೆ ಮಂತ್ರಿ ಭಾಗ್ಯ ಒಲಿದು ಬಂದಿರಲಿಲ್ಲ. ಹಿರಿಯ, ಅನುಭವಿಗಳಾಗಿದ್ದ ಕುಷ್ಟಗಿ ಶಾಸಕ ಅಮರೇಗೌಡ ಭಯ್ನಾಪೂರ ಅವರಿಗೂ ಮಂತ್ರಿಪಟ್ಟ ಕೊಟ್ಟಿರಲಿಲ್ಲ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳಗೆ ಮಂತ್ರಿ ಸ್ಥಾನ ಸಿಗುತ್ತದೆ ಎನ್ನುವ ಮಾತು ಕೇಳಿ ಬಂದಿದ್ದವು. ಆವರಿಗೂ ಮಂತ್ರಿ ಸ್ಥಾನ ಕೊಡದೇ ಆರ್‌. ಶಂಕರ್‌ ಅವರಿಗೆ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದರು. ಆದರೆ ಅವರು ಮಂತ್ರಿಗಿರಿ ಕಳೆದುಕೊಂಡರು. ಬಳಿಕ ಈ ತುಕಾರಾಂ ಅವರು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿದ್ದರು. ಆಗ ಇಲ್ಲಿನ ಶಾಸಕರು ಜಿಲ್ಲೆಯವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಅಭಿವೃದ್ಧಿಯಾಗಲಿದೆ ಎಂದು ಒತ್ತಾಯಿಸಿದ್ದರು. ಆದರೆ ಅವರ ಕೂಗು ಸರ್ಕಾರಕ್ಕೆ ಕೊನೆಗೂ ಕೇಳಲೇ ಇಲ್ಲ.

ನಾನೇನು ಮಂತ್ರಿ ಸ್ಥಾನದ ನಿರೀಕ್ಷೆಯನ್ನಿಟ್ಟಿರಲಿಲ್ಲ. ನಮ್ಮಲ್ಲಿ ಹಿರಿಯರು ತುಂಬಾ ಜನ ಇದ್ದಾರೆ. ಹೈಕಮಾಂಡ್‌ ಅವರಿಗೆ ಸಚಿವ ಸ್ಥಾನ ನೀಡಿದೆ. ಸಚಿವ ಸ್ಥಾನಕ್ಕಿಂತಲೂ ಜಿಲ್ಲೆಯ ಅಭಿವೃದ್ಧಿ ಮುಖ್ಯವಾಗಿದೆ. ನಾವು ಹಾಕಿಕೊಂಡ ಯೋಜನೆಗಳ ಕಾರ್ಯಗತಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಕೃಷ್ಣಾ ಯೋಜನೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದೇನೆ.•ಹಾಲಪ್ಪ ಆಚಾರ್‌, ಯಲಬುರ್ಗಾ ಶಾಸಕ.

Advertisement

ಮಂತ್ರಿ ಸ್ಥಾನದ ನಿರೀಕ್ಷೆಯಿತ್ತು. ನಾವು ಹೈಕಮಾಂಡ್‌ ಮಟ್ಟದಲ್ಲಿ ಸಚಿವ ಸ್ಥಾನ ಕೇಳಿದ್ದೆವು. ಆದರೆ ಸಿಕ್ಕಿಲ್ಲ. ಸಚಿವ ಸ್ಥಾನ ಸಿಗದೇ ಇದ್ದಾಗ ಸಣ್ಣ ಪುಟ್ಟ ಅಸಮಾಧಾನ ಸಹಜ. ಇನ್ನೊಂದು ವಾರದಲ್ಲಿ ಏಳೆಂಟು ಸ್ಥಾನಗಳ ಹಂಚಿಕೆ ಮಾಡುವ ಸಾಧ್ಯತೆಯಿದೆ. ನಮ್ಮ ಪ್ರಯತ್ನ ನಡೆದಿದೆ. ಮುಂದೆ ಕಾದು ನೋಡೋಣ.•ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕ.

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next