Advertisement

ಎಲ್ಲ ಗೆದ್ದ ಮಹಾತ್ಮನಿಗೆ ಉತ್ಸವ ಬೇಕಿಲ್ಲ

10:38 AM Feb 10, 2018 | |

ಬೀದರ: ಬಸವಕಲ್ಯಾಣದ ತೇರು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿರುವ ಮೂರು ದಿನಗಳ “ಬಸವ ಉತ್ಸವ- 2018’ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

Advertisement

ಹೆಸರಾಂತ ಸಾಹಿತಿ, ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಸಲಹೆಗಾರ ಡಾ|ಗೋ.ರು. ಚನ್ನಬಸಪ್ಪ ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಬಸವಣ್ಣ ಎಲ್ಲವನ್ನು ಗೆದ್ದು ನಿಂತ ಮಹಾತ್ಮ. ಆತನಿಗೆ ಉತ್ಸವ ಬೇಕಾಗಿಲ್ಲ. ನಾವು ಮಾಡಿರುವ ಪಾಪಗಳಿಗೆ ಕ್ಷಮಿಸುವಂತೆ ಆಶಿಸುತ್ತ ಬಸವಣ್ಣನ ಹೆಸರಿನಲ್ಲಿ ಉತ್ಸವ ಆಚರಿಸುವುದು ನಮಗೆ ಬೇಕಾಗಿದೆ ಎಂದು ಹೇಳಿದರು. 

ಸಮಾಜ, ರಾಜಕೀಯದಲ್ಲಿ ಅಷ್ಟೇ ಇದ್ದ ಸ್ವಾರ್ಥ, ಶ್ವೇಚ್ಛಾಚಾರ ಇಂದು ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿರುವುದು ದುರಂತ. ವ್ಯಕ್ತಿಯ ಪ್ರತಿಷ್ಠೆ ಇಂದು ಇಡೀ ಸಮುದಾಯವನ್ನೇ ಹಾಳು ಮಾಡುತ್ತಿದೆ. ಇದುವೆ ನಮ್ಮೆಲ್ಲರನ್ನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸುವಂತೆ ಮಾಡಿದೆ. ನೈತಿಕ ದಾರಿದ್ರ್ಯತನದಿಂದ ನರಳುತ್ತಿರುವ ವ್ಯಕ್ತಿ ಪ್ರಾಣಿಯಂತೆ ವರ್ತಿಸುತ್ತಿದ್ದಾನೆ. ಇಡೀ ಜಗತ್ತು ಒಂದು ಹುಚ್ಚರ ಆಸ್ಪತ್ರೆಯಂತೆ ಆಗುತ್ತಿದೆ. ಮನ- ಮನೆಗಳಲ್ಲಿ ಮರಣಶಾಸ್ತ್ರ ಬರೆಯುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ವ್ಯವಸ್ಥೆಯನ್ನು ನಿಯಂತ್ರಣ ಮಾಡಲು ಆಗದಂತೆ ಸ್ಥಿತಿ ನಿರ್ಮಾಣವಾಗಿದೆ. ಸಭ್ಯ ವ್ಯಕ್ತಿ, ಸಭ್ಯ ಸಮಾಜ ನಿರ್ಮಾಣ ಆಗಬೇಕಾದ ಅಗತ್ಯವಿದೆ. ಇದಕ್ಕಾಗಿ ಬಸವ ಸಿದ್ಧಾಂತವನ್ನು ಪ್ರತಿಯೊಬ್ಬರು ಅಪ್ಪಿಕೊಳ್ಳಬೇಕಾಗಿದೆ. ಈಗಾಗಲೇ ಬಸವಣ್ಣನ ಪರ ದೊಡ್ಡ ಅಲೆಯೇ ಎದ್ದಿದೆ ಎಂಬುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು. 

ಹನ್ನೇರಡನೇ ಶತಮಾನದ ಅನುಭವ ಮಂಟಪದದಲ್ಲಿ ಶರರಣರು ಅನುಭಾವದ ಚಿಂತನೆಗಳನ್ನು ಮಾಡುತ್ತಿದ್ದರು. ಸಮಕಾಲೀನ ವಿಷಯಗಳ ಮೇಲೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಿದ್ದರು. ಸರ್ಕಾರ ನಿರ್ಮಾಣ ಮಾಡಲು ಉದ್ದೇಶಿಸಿರುವ ನೂತನ ಅನುಭವ ಮಂಟಪ ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರವಾಗಿ ಬೆಳಯಲಿ ಎಂಬುದು ನನ್ನ ಆಶಯ. ನಾನು ಬದುಕಿರುವಾಗಲೇ ಕೇಂದ್ರ ತಲೆ ಎತ್ತಬೇಕೆಂಬುದು ನನ್ನ ಆಶಯ ಎಂದರು.
 
ಹಾರಕೂಡದ ಶ್ರೀ ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರು, ಬೀದರನ ಶಿವಯೋಗೀಶ್ವರ ಸ್ವಾಮೀಜಿ, ಅಕ್ಕ ಗಂಗಾಂಬಿಕೆ, ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ, ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮೀಜಿ ಮೇಹಕರದ ಶ್ರೀ ರಾಜೇಶ್ವರ ಶಿವಾಚಾರ್ಯರು, ಕೌಠಾದ ಶ್ರೀ ಸಿದ್ದರಾಮ ಶರಣರು ಬೆಲ್ದಾಳ ನೇತೃತ್ವ ಮತ್ತು ಶಾಸಕ ಮಲ್ಲಿಕಾರ್ಜುನ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ರಾಜಶೇಖರ ಸ್ವಾಮಿ, ರಹೀಮ್‌ ಖಾನ್‌, ಜಿಪಂ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಕಂಠೀರವ ಸ್ಟುಡಿಯೋ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ನಗರಸಭೆ ಅಧ್ಯಕ್ಷಮೀರ್‌ ಅಜರ್‌ ಅಲಿ ನವರಂಗ, ಜಿಲ್ಲಾ ಧಿಕಾರಿ ಡಾ| ಎಚ್‌.ಆರ್‌. ಮಹಾದೇವ, ಎಸ್‌ಪಿ ಡಿ. ದೇವರಾಜ್‌ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಸಹಾಯಕ ಅಯುಕ್ತ ಶರಣಬಸಪ್ಪ ಕೊಟ್ಟಪ್ಪಗೋಳ ಸ್ವಾಗತಿಸಿದರು. ರಶ್ಮಿ ವಂದಿಸಿದರು.

Advertisement

ಮೂಲ ಅನುಭವ ಮಂಟಪ ಅಭಿವೃದ್ಧಿಗೊಳಿಸಿ ಬಸವಕಲ್ಯಾಣ: 12ನೇ ಶತಮಾನದಲ್ಲಿ ಶರಣರು ಸ್ಥಾಪಿಸಿದ್ದ ಮೂಲ ಅನುಭವ ಮಂಟಪ ಪತ್ತೆ ಹಚ್ಚಿ ಅಭಿವೃದ್ಧಿಗೊಳಿಸಬೇಕು ಎಂದು ಶಾಸಕ ಮಲ್ಲಿಕಾರ್ಜು ಖೂಬಾ ಹೇಳಿದರು. 

ನಗರದ ರಥ ಮೈದಾನದಲ್ಲಿ ನಡೆದ ಬಸವ ಉತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ಷರ ಧಾಮ ಮಾದರಿಯಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಲೋಕ ಸಭೆ ಆವರಣದಲ್ಲಿ ವಿಶ್ವ ಗುರು ಬಸವಣ್ಣನವರ ಪ್ರತಿಮೆ ಸ್ಥಾಪಿಸಲಾಗಿದೆ. ಆದರೆ ವಿಧಾನ ಸೌಧ ಆವರಣದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ವಿಧಾನ ಸೌಧ ಆವರಣದಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪನೆಗೆ ಸರ್ಕಾರ ಕೂಡಲೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದಿಂದ 650 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ನೂತನ ಅನುಭವ ಮಂಟಪಕ್ಕೆ ಬರುವ ಬಜೆಟ್‌ ನಲ್ಲಿ ಕನಿಷ್ಠ 25 ಪ್ರತಿಶತ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. 

ಬಸವಕಲ್ಯಾಣವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಬೇಕು. ಇಲ್ಲಿ ಗುಣಮಟ್ಟದ ರಸ್ತೆ, ಚರಂಡಿ ನಿರ್ಮಾಣ ಮಾಡಿ ನಗರದ ಸ್ವತ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದರು. 

ಬಸವಕಲ್ಯಾಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಒಂದು ಸಾವಿರ ಕೋಟಿ ರೂ. ಅನುದಾನ ಕಲ್ಪಿಸಲು ಮಾಜಿ ಪ್ರಧಾನಿ ದೇವೆಗೌಡ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಪ್ರಧಾನಿಗಳು ಅನುದಾನ ಕಲ್ಪಿಸುತ್ತಾರೆ ಎನ್ನುವ ಭರವಸೆ ಇದೆ ಎಂದರು. 

ಜಗತ್ತು ಅಭಿಮಾನ ಪಡುವಂಥ ಸಂವಿಧಾನವನ್ನು ಅಂಬೇಡ್ಕರ ರಚಿಸಿ ನಮಗೆ ನೀಡಿದ್ದಾರೆ. ಅದನ್ನು ತಿರುಚುವತ್ತ ಕೈ ಹಾಕುವುದು ಭಾರತದ ಗೌರವ, ಘನತೆಯನ್ನು ಹಾಳು ಮಾಡುವಂಥದ್ದಾಗಿದೆ. ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಸಂವಿಧಾನದ ಪರಿಕಲ್ಪನೆಯನ್ನು ನಮಗೆ ಕಲ್ಪಿಸಿಕೊಟ್ಟಿದ್ದರು. ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಅದರಲ್ಲಿ ಅಡಗಿದ್ದವು. ಶರಣರ
ಚಿಂತನೆಗಳನ್ನೇ ಇಂದು ಸಂವಿಧಾನದಲ್ಲಿ ಕಾಣುತ್ತಿದ್ದೇವೆ. 
 ಗೋ.ರು. ಚನ್ನಬಸಪ್ಪ, ಹಿರಿಯ ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next