Advertisement

ಕುಕ್ಕೆ ದೇಗುಲದ ಪ್ರಮುಖ ಹುದ್ದೆಗಳೆಲ್ಲ ಖಾಲಿ

12:37 AM Oct 24, 2019 | mahesh |

ಸುಬ್ರಹ್ಮಣ್ಯ: ಪ್ರವಾಸಿಗರ ಮೊದಲ ಆದ್ಯತೆ ದೇಗುಲಗಳು. ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು, ಸಿಬಂದಿ ಅಗತ್ಯ. ಆದರೆ ರಾಜ್ಯದ ಪ್ರಮುಖ ದೇವಸ್ಥಾನಗಳ ಆಡಳಿತ ಮಂಡಳಿಯ ಪ್ರಮುಖ ಹುದ್ದೆಗಳೆಲ್ಲ ಖಾಲಿ ಬಿದ್ದಿವೆ. ಆದಾಯದಲ್ಲಿ ನಂಬರ್‌ ಒನ್‌ ದೇಗುಲ ಎನಿಸಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಂತೂ ಮುಖ್ಯಕಾರ್ಯ ನಿರ್ವಹಣಾಧಿಕಾರಿ, ಆಡಳಿತಾಧಿ ಕಾರಿ ಇಲ್ಲ; ಆಡಳಿತ ಸಮಿತಿಯೂ ಇಲ್ಲ. ಪ್ರಧಾನ ಅರ್ಚಕ ಹುದ್ದೆಯೂ ಪ್ರಭಾರ ನೆಲೆಯಲ್ಲಿದೆ!

Advertisement

ದೀಪಾವಳಿ ಸಮೀಪಿಸುತ್ತಿದೆ. ವಾರ್ಷಿಕ ಜಾತ್ರೆ ಮತ್ತು ಪರ್ವ ದಿನಗಳು ಆರಂಭಗೊಳ್ಳುತ್ತಿದ್ದು, ಭಕ್ತರ ದಂಡು ದೇಗುಲಗಳಿಗೆ ಹರಿದು ಬರಲಾರಂಭಿಸಿದೆ. ಇಂತಹ ಸಂದರ್ಭದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ರಾಜ್ಯದ ಬಹುತೇಕ ದೇಗುಲಗಳಿಗೆ ಕಾರ್ಯನಿರ್ವಹಣಾಧಿಕಾರಿಗಳೇ ಇಲ್ಲ. ಕೆಲವೆಡೆ 3ರಿಂದ 5 ದೇಗುಲಗಳಿಗೆ ಒಬ್ಬರೇ ಅಧಿಕಾರಿಯಿದ್ದು, ಎರಡೆರಡು ಕಡೆ ಸಮರ್ಪಕವಾಗಿ ಕೆಲಸ ನಿರ್ವಹಿಸಲಾಗುತ್ತಿಲ್ಲ.
ರಾಜ್ಯದಲ್ಲಿ ಇಲಾಖೆ ವ್ಯಾಪ್ತಿಯಲ್ಲಿ 36 ಸಾವಿರ ದೇಗುಲ, ಛತ್ರಗಳಿವೆ. ಕೇವಲ 200 ಆಸುಪಾಸಿನ ಸಂಖ್ಯೆಯಲ್ಲಿ ಇರುವ ಕಾರ್ಯನಿರ್ವಾಹಕ ಅಧಿಕಾರಿಗಳು ವಿವಿಧ
ದೇಗುಲಗಳ ಜವಾಬ್ದಾರಿ ನಿರ್ವಹಿಸು ತ್ತಿದ್ದಾರೆ. ಕೆಲವು ದೇಗುಲಗಳಲ್ಲಿ ಅಧಿಕಾರಿಗಳಿದ್ದರೂ ಬೇರೆ ಇಲಾಖೆ ಯಿಂದ ಎರವಲು ಬಂದವರು. ಭಡ್ತಿ, ವರ್ಗಾವಣೆಗಳಿಂದಾಗಿ ಹುದ್ದೆ ಗಳು ಖಾಲಿ ಬಿದ್ದಿವೆ. ಕೆಲವರು ಮಾತೃ ಇಲಾಖೆಯ ಜವಾಬ್ದಾರಿ ಜತೆಗೆ ಹೆಚ್ಚುವರಿಯಾಗಿ ಸಿಇಒ ಹುದ್ದೆಯನ್ನು ನಿರ್ವಹಿಸಬೇಕಾಗಿದೆ. ಇದರಿಂದ ದೇಗುಲಗಳ ಅಭಿವೃದ್ಧಿ ಕುಂಠಿತವಾಗಿದೆ. ಮುಜರಾಯಿ ಇಲಾಖೆಯ ಅವಧಿ ಮುಗಿದ ಇತರ ಎ, ಬಿ, ಸಿ  ಗ್ರೇಡ್‌ ದೇವಸ್ಥಾನಗಳಿಗೂ ನಾಮ ನಿರ್ದೇಶಿತ ಸದಸ್ಯರ ನೇಮಕವಾಗಿಲ್ಲ.

ಸಮಸ್ಯೆಗಳೇನು?
ಧಾರ್ಮಿಕ ದತ್ತಿ ಇಲಾಖೆಯ ದೇಗುಲಗಳಲ್ಲಿ ಕಾಲಕಾಲಕ್ಕೆ ನಡೆಯಬೇಕಾದ ಹುಂಡಿ ಹಣ ಎಣಿಕೆ, ರಥೋತ್ಸವ, ಅನ್ನದಾಸೋಹ, ಪ್ರಸಾದ ವಿನಿಯೋಗ, ಅಭಿವೃದ್ಧಿ ಕಾಮಗಾರಿ, ಗಣ್ಯರ ಭೇಟಿ ಸಂದರ್ಭ ವಹಿಸಬೇಕಾದ ಮುಂಜಾಗ್ರತ ಕ್ರಮಗಳಿಗೆಲ್ಲ ಸಿಇಒ ಹುದ್ದೆ ಖಾಲಿಯಾಗಿರುವುದರಿಂದ ಅನನುಕೂಲವಾಗುತ್ತಿದೆ. ಆಡಳಿತ ಸಮರ್ಪಕವಾಗಲು ಕಾರ್ಯನಿರ್ವಹಣಾಧಿಕಾರಿ ಅಗತ್ಯ. ಆ ಹುದ್ದೆ ಖಾಲಿ ಇರುವುದರಿಂದ ದೇವಸ್ಥಾನಗಳ ಚರಾಸ್ಥಿ, ಆಭರಣಗಳಿಗೆ ಭದ್ರತೆಯ ಕೊರತೆ ಕಂಡುಬರುತ್ತದೆ. ಹುಂಡಿ ಹಣ ಸಾರ್ವಜನಿಕ ಸೊತ್ತಾಗಿರುವುದರಿಂದ ಅದರ ರಕ್ಷಣೆಯ ಪ್ರಶ್ನೆಯೂ ಎದುರಾಗುತ್ತದೆ.

ಕುಕ್ಕೆ ದೇಗುಲಕ್ಕೆ ಸರಕಾರ ನೇಮಿಸಿದ್ದ ನಾಮನಿರ್ದೇಶಿತ ಸದಸ್ಯರ ಸಮಿತಿ ಅವಧಿ ಅ. 15ಕ್ಕೆ ಮುಗಿದಿದೆ. ಸಿಇಒ ರವೀಂದ್ರ ಎಂ.ಎಚ್‌. ಅವರು ನಂಜನಗೂಡಿಗೆ ವರ್ಗವಾಗಿದ್ದಾರೆ. ಪುತ್ತೂರಿನ ಎಸಿ ಇಲ್ಲಿನ ಆಡಳಿತಾಧಿಕಾರಿ. ಅವರ ವರ್ಗಾವಣೆಯಿಂದಾಗಿ ಈ ಹುದ್ದೆಯೂ ಖಾಲಿ ಇದೆ. ಡಿಸೆಂಬರ್‌ ಮೊದಲ ವಾರದಲ್ಲಿ ಚಂಪಾಷಷ್ಠಿ ಮಹೋತ್ಸವ ನಡೆಯಲಿದ್ದು, ಅಧಿಕಾರಿಗಳಿಲ್ಲದೆ ಸಿದ್ಧತೆಗೆ ತೊಡಕಾಗಿದೆ.

ಕುಕ್ಕೆ ದೇಗುಲಕ್ಕೆ ವಾರದೊಳಗೆ ತೆರಳಿ ಶಾಸಕರ ಸಮ್ಮುಖ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವೆ. ಸಿಇಒ ನಿಯೋಜನೆ ಸಹಿತ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವೆ.
– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವರು

Advertisement

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next