ಕಲಬುರಗಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಉನ್ನತ ಶಿಕ್ಷಣದ ಸಾಲ ಮನ್ನಾವನ್ನು ರಾಜ್ಯ ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದಾಗ ಅವರು ಈ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ಹೇಳಿದ್ದಾರೆ.
ಬೆಂಗಳೂರಿಗೆ ನಿಯೋಗದ ಮೂಲಕ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪರಿಶಿಷ್ಟ ವಿದ್ಯಾರ್ಥಿಗಳ ಸಾಲ ಮನ್ನಾ ಮಾಡಿದ್ದಕ್ಕಾಗಿ ಅಭಿನಂದಿಸಿದ ಅವರು, ಈ ಯೋಜನೆಯನ್ನು ಎಲ್ಲ ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕೆಂದು ಕೋರಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪಾಲಕರ ವಾರ್ಷಿಕ ಆದಾಯ 4.5 ಲಕ್ಷ ರೂ.ಗಿಂತ ಕಡಿಮೆಯಿರುವ ವಿದ್ಯಾರ್ಥಿಗಳು ಪಡೆದ ಶೈಕ್ಷಣಿಕ ಸಾಲದ ಬಡ್ಡಿಯನ್ನು ಕೇಂದ್ರ ಸರ್ಕಾರ ತುಂಬುವುದಾಗಿ 2009 ಹಾಗೂ 2014 ರಲ್ಲಿ ಆದೇಶ ಹೊರಡಿಸಿದರೂ ಕೇಂದ್ರ ಸರ್ಕಾರ ತುಂಬದೇ ಇರುವುದರಿಂದ ಬ್ಯಾಂಕಿನವರು ಶೇ.13 ರಿಂದ 16 ರಷ್ಟು ದುಬಾರಿ ಬಡ್ಡಿ ಹಾಕಿ ವಸೂಲಿ ಮಾಡುತ್ತಿದ್ದಾರೆ.
ಬಡ್ಡಿ ಹಣ ತುಂಬುವಂತೆ ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳ ಪರವಾಗಿ ನಾಲ್ಕು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದ್ದು, ಸಾಕಷ್ಟು ಬಾರಿ ಕೇಂದ್ರ ಸಚಿವರು, ಸಂಸದರನ್ನು ಕಂಡು ಮನವಿ ಸಲ್ಲಿಸಲಾಗಿದೆ. ಪ್ರಧಾನಿ ಕಚೇರಿಗೆ 56 ಪತ್ರಗಳನ್ನು ಬರೆಯಲಾಗಿದೆ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಲಾಗಿದೆ ಎಂದಿದ್ದಾರೆ.
ಬರುವ ಚಳಿಗಾಲ ಅಧಿವೇಶನ ನಡೆವ ಸಮಯದಲ್ಲಿ ದೆಹಲಿಯ ಜಂತರ್ ಮಂತರನಲ್ಲಿ ಸತ್ಯಾಗ್ರಹ ನಡೆಸಲಾಗುವುದು. ಅದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಪ್ರಧಾನಿ ಮನೆ ಎದುರೇ ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೈ.ಕ. ಭಾಗದ ವ್ಯಾಪ್ತಿಯಲ್ಲಿ ಶೈಕ್ಷಣಿಕ ಸಾಲ ಪಡೆದ ಎಸ್.ಸಿ., ಎಸ್.ಟಿ., ಹಾಗೂ ಎಲ್ಲ ವರ್ಗದ ವಿದ್ಯಾರ್ಥಿಗಳ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗುವುದರಿಂದ ಹೈ.ಕ. ಭಾಗದಲ್ಲಿ ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳು ಮೊ.ಸಂಖ್ಯೆ 9880169907ಕ್ಕೆ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಕೋರಿದ್ದಾರೆ.