ಮುಂಬೈ: ಮುಂಬರುವ ಐಪಿಎಲ್ ಗಿಂತ ಮೊದಲು ನಡೆಯಬೇಕಿದ್ದ ಐಪಿಎಲ್ ಆಲ್ ಸ್ಟಾರ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.
13ನೇ ಆವೃತ್ತಿಯ ಐಪಿಎಲ್ ನ ಮೂರು ದಿನಗಳ ಮೊದಲು ಈ ಆಲ್ ಸ್ಟಾರ್ ಪಂದ್ಯ ನಡೆಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಆಲ್ ಸ್ಟಾರ್ ಪಂದ್ಯ ನಡೆಯುವುದಿಲ್ಲ. ಒಂದು ವೇಳೆ ನಡೆದರೂ ಐಪಿಎಲ್ ಗಿಂತ ಮೊದಲು ಖಂಡಿತಾ ಆಗುವುದಿಲ್ಲ ಎಂದು ಮುಂಬೈ ಮಿರರ್ ಸುದ್ದಿ ಮಾಡಿದೆ.
ಐಪಿಎಲ್ ನ ಎಲ್ಲಾ ಎಂಟು ಫ್ರಾಂಚೈಸಿಗಳ ಪ್ರಮುಖ ಆಟಗಾರರನ್ನು ಸೇರಿಸಿ ಎರಡು ತಂಡವನ್ನು ರಚಿಸಿ ಸೌಹಾರ್ಧ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಯೋಚಿಸಿತ್ತು. ಮೂಲಗಳ ಪ್ರಕಾರ ಉತ್ತರ ಮತ್ತು ದಕ್ಷಿಣ ಭಾರತದ ಫ್ರಾಂಚೈಸಿಗಳ ತಂಡವನ್ನು ರಚಿಸಲಾಗುತ್ತದೆ ಎನ್ನಲಾಗಿತ್ತು. ದಕ್ಷಿಣದ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್ ಸದಸ್ಯರು ದಕ್ಷಿಣದ ತಂಡದಲ್ಲಿ ಮತ್ತು ರಾಜಸ್ಥಾನ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಗಳು ಉತ್ತರ ಭಾರತದ ತಂಡದಲ್ಲಿ ಕಾಣಿಸಿಕೊಳ್ಳುವ ಯೋಜನೆಯಿತ್ತು.
ದಕ್ಷಿಣ ಭಾರತದ ಫ್ರಾಂಚೈಸಿಯ ಅಧಿಕಾರಿಯೋರ್ವರು ಈ ಬಗ್ಗೆ ಮಾಹಿತಿ ನೀಡಿದ್ದು, ಐಪಿಎಲ್ ಗಿಂತ ಮೊದಲು ಪಂದ್ಯ ನಡೆಯುವುದಿಲ್ಲ ಎಂದಿದ್ಧಾರೆ. ಬಿಸಿಸಿಐ ಅಧಿಕಾರಿಗಳು ಈ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಉತ್ತರ ಭಾರತದ ಫ್ರಾಂಚೈಸಿಯ ಅಧಿಕಾರಿಯೋರ್ವರು ಮಾಹಿತಿ ನೀಡಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ಈ ಬಾರಿಯ ಐಪಿಎಲ್ ಮಾರ್ಚ್ 29ರಂದು ಆರಂಭವಾಗಲಿದೆ. ಕಳೆದ ಆವೃತ್ತಿಯ ಫೈನಲಿಸ್ಟ್ ಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ಸೆಣಸಾಡಲಿದೆ.