Advertisement

ಮಹಿಳಾ ಶಕ್ತಿ ಕೇಂದ್ರದಲ್ಲಿ ಎಲ್ಲ ಸೇವೆಗಳೂ ಲಭ್ಯ

09:36 PM Jul 08, 2019 | Lakshmi GovindaRaj |

ಮೈಸೂರು: ಗ್ರಾಮೀಣ ಮಹಿಳೆಯರು ಯಾವುದೇ ಹಸ್ತಕ್ಷೇಪವಿಲ್ಲದೆ ಸರ್ಕಾರದ ಸೇವೆಗಳನ್ನು ಹಾಗೂ ಯೋಜನೆಗಳನ್ನು ಪಡೆಯಲು ಜಾಗೃತಿ ಮೂಡಿಸಿ, ತರಬೇತಿ ನೀಡಿ ಮಹಿಳೆಯರ ಸಾಮರ್ಥ್ಯ ಅಭಿವೃದ್ಧಿಪಡಿಸುವ ರೀತಿ ಮಹಿಳಾ ಶಕ್ತಿ ಕೇಂದ್ರ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಿಳಾ ಶಕ್ತಿ ಕೇಂದ್ರ, ಲಿಂಗತ್ವ ಅಲ್ಪಸಂಖ್ಯಾತರ ನೀತಿ ಹಾಗೂ ದಮನಿತ ಮಹಿಳೆಯರ ಯೋಜನೆಗಳ ಕುರಿತು ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಒಂದೇ ಕಡೆ ಎಲ್ಲಾ ಸೇವೆ: ಪ್ರಧಾನ ಮಂತ್ರಿ ಮಹಿಳಾ ಸಶಕ್ತೀಕರಣ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಡಿಜಿಟಲ್‌ ಸಾಕ್ಷರತೆ, ಆರೋಗ್ಯ ಮತ್ತು ಪೌಷ್ಟಿಕತೆಗಳ ಮೂಲಕ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಒಂದೇ ಕಡೆ ಎಲ್ಲಾ ಸೇವೆಗಳನ್ನು ನೀಡುವ ಉದ್ದೇಶದಿಂದ ಮಹಿಳಾ ಶಕ್ತಿಕೇಂದ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಗ್ರಾಮೀಣ ಮಹಿಳೆಯರಿಗೆ ಇದು ಸಹಾಯವಾಗಲಿದೆ ಎಂದರು.

ಮುಖ್ಯವಾಹಿನಿಗೆ ತನ್ನಿ: ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳನ್ನು ನೀಡುವುದು, ವಸತಿ, ನಿವೇಶನಗಳನ್ನು ನೀಡುವುದು ಹಾಗೂ ಶಿಕ್ಷಣದಲ್ಲಿ ಆದ್ಯತೆ ನೀಡಿ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ರೂಪಿಸಬೇಕು. ಹುಣಸೂರು ತಾಲೂಕಿನಲ್ಲಿ ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ನಿರ್ಮಿಸಲಾಗಿದ್ದು, ಅದೇ ರೀತಿ ನಿವೇಶನ ಹೊಂದಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಇತರೆ ತಾಲೂಕುಗಳಲ್ಲೂ ಸಹ ವಸತಿ ನಿರ್ಮಿಸಿ ಕೊಡಬೇಕು ಎಂದು ಸಲಹೆ ನೀಡಿದರು.

ದುಷ್ಕೃತ್ಯ ತಡೆಯಿರಿ: ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾನೂನು ನೆರವು ನೀಡಲು ಜಿಲ್ಲಾ ಮಟ್ಟದ ಕೋಶಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಒಬ್ಬರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಹಲವಾರು ದರೋಡೆಕೋರರು ಲಿಂಗತ್ವ ಅಲ್ಪಸಂಖ್ಯಾತರ ವೇಷ ಧರಿಸಿ ಸುಲಿಗೆ, ಕಳ್ಳತನ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಅಂತಹವರನ್ನು ಗುರುತಿಸಿ ಕ್ರಮವಹಿಸಬೇಕು ಎಂದರು.

Advertisement

ಅರಿವು: ಜಿಪಂ ಸಿಇಒ ಕೆ.ಜ್ಯೋತಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ನಡೆಸುತ್ತಿದ್ದು, ಅರಿವು ಮೂಡಿಸುವ ತಂಡದಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನೇ ನೇಮಿಸಿಕೊಂಡು ಜಾಗೃತಿ ಮೂಡಿಸಿದರೆ ಅವರಿಗೆ ಉದ್ಯೋಗವು ಸಿಗುತ್ತದೆ ಹಾಗೂ ಅವರ ಸಮುದಾಯಕ್ಕೆ ಯಾವ ರೀತಿ ಜಾಗೃತಿ ಮೂಡಿಸಬೇಕು ಎನ್ನುವುದು ಸಹ ಅವರಿಗೆ ತಿಳಿದಿರುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಮಹಿಳೆಯರ ಅಭಿವೃದ್ಧಿ ಕುರಿತಂತೆ ಮಹಿಳಾ ಶಕ್ತಿ ಕೆಂದ್ರದ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆ, ಜಿಲ್ಲಾ ಕಾರ್ಯ ಪಡೆಯ ರಚನೆ, ಕಾರ್ಯವಿಧಾನ, ಮಹಿಳಾ ಶಕ್ತಿ ಕೇಂದ್ರದ ಯೋಜನೆಯ ನಿರ್ವಹಣೆಗೆ ತಾತ್ಕಾಲಿಕ ಹುದ್ದೆಗಳ ಭರ್ತಿ ಮಾಡುವುದು ಹಾಗೂ ದಮನಿತ ಮಹಿಳೆಯರಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಗಾರ್ಮೆಂಟ್ಸ್‌ ತರಬೇತಿ ಮತ್ತು ಉತ್ಪಾದನೆ ಘಟಕ ಸ್ಥಾಪನೆ ಕುರಿತಂತೆ ಚರ್ಚಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪದ್ಮ ಕೆ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್‌.ವೆಂಕಟೇಶ್‌ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ದಮನಿತ ಮಹಿಳೆಯರ ರಕ್ಷಣೆ: ದಮನಿತ ಮಹಿಳೆಯರ ರಕ್ಷಣಾ ಕಾರ್ಯದಲ್ಲಿ ಪೊಲೀಸ್‌ ಇಲಾಖೆಯ ಜೊತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧಿಕಾರಿ ಹಾಗೂ ಸರ್ಕಾರದಿಂದ ನಿಯೋಜಿಸಲ್ಪಟ್ಟ ಎನ್‌ಜಿಓ ಸಂಸ್ಥೆಯ ಸದಸ್ಯರು ಇರಬೇಕು ಹಾಗೂ ಅವರ ಹೆಸರು ಮತ್ತು ಅವರ ವೈಯಕ್ತಿಕ ವಿವರ ಗೌಪ್ಯವಾಗಿಡಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ತಿಳಿಸಿದರು.

ದಮನಿತ ಮಹಿಳೆಯರ ಮಕ್ಕಳಿಗಾಗಿ ವಿಶ್ವ ವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಶೇ.1ರಷ್ಟು ಮೀಸಲಾತಿಯನ್ನು ಸಹ ನೀಡಲಾಗಿದ್ದು, ದಮನಿತ ಮಹಿಳೆಯರನ್ನು ರಕ್ಷಿಸಿದ ನಂತರ ಅವರಿಗೆ ಉದ್ಯೋಗ ಕಲ್ಪಿಸಬೇಕು ಅಥವಾ ಅವರನ್ನು ಮನೆಯವರಿಗೆ ಒಪ್ಪಿಸಿದರೆ ಅವರ ವಿಳಾಸ ಪಡೆದು ನಂತರ ಸಂಪರ್ಕದಲ್ಲಿರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next