Advertisement

ಖಾಸಗಿ ಆಸ್ಪತ್ರೆಯಲ್ಲಿ ಇಂದಿನಿಂದ ಎಲ್ಲಾ ಸೇವೆ ಲಭ್ಯ

07:33 AM Nov 17, 2017 | Team Udayavani |

ಬೆಂಗಳೂರು: ಹೈಕೋರ್ಟ್‌ ತಾಕೀತಿಗೆ ಮಣಿದ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂ ಸಂಘ(ಫ‌ನಾ) ತನ್ನ ಮುಷ್ಕರ ಕೈಬಿಟ್ಟು, ಶುಕ್ರವಾರದಿಂದಲೇ ಹೊರರೋಗಿಗಳ ವಿಭಾಗ ಸೇರಿ ಎಲ್ಲಾ ರೀತಿಯ ಸೇವೆ ಒದಗಿಸಲು ನಿರ್ಧರಿಸಿದೆ. ಈ ಮಧ್ಯೆ, ಭಾರತೀಯ ವೈದ್ಯ ಸಂಘದ ಕರ್ನಾಟಕ ಶಾಖೆಯ ಪದಾಧಿಕಾರಿಗಳು ಬೆಳಗಾವಿಯಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು
ಮುಂದುವರಿಸಲು ತೀರ್ಮಾನಿಸಿದ್ದಾರೆ.

Advertisement

ವೈದ್ಯ ಸಂಘಟನೆಗಳ ಈ ನಿರ್ಧಾರದಿಂದ ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಇಂದಿನಿಂದ ಸಕಲ ಸೇವೆ ದೊರೆಯಲಿದೆ. ಬೆಳಗಾವಿಯಲ್ಲಿ ಕೇವಲ ಐದಾರು ವೈದ್ಯರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಸಂಘದ ಸದಸ್ಯರು, ಕೆಲ ಜಿಲ್ಲೆಯ ಪದಾಧಿಕಾರಿಗಳು ಬೆಂಬಲವಾಗಿ ಅಲ್ಲಿಯೇ ಇದ್ದಾರೆ. ಉಳಿದಂತೆ ಎಲ್ಲಾ ಖಾಸಗಿ ವೈದ್ಯರು ಆಯಾ
ಜಿಲ್ಲೆಗೆ ವಾಪಸ್‌ ಆಗಿದ್ದಾರೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆರೋಗ್ಯ ಸೇವೆ ಎಂದಿನಂತೆ ಮುಂದುವರಿಯಲಿದೆ.

ಖಾಸಗಿ ವೈದ್ಯರ ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌.  ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠ, ಸಮಾಜದ ಹಿತದೃಷ್ಟಿಯಿಂದ ಕೂಡಲೇ ಮುಷ್ಕರ ವಾಪಾಸ್‌ ಪಡೆಯುವಂತೆ ಸೂಚಿಸಿತ್ತು. ಜೊತೆಗೆ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್‌ ಹೋಂಗಳ ಸಂಘ, ಭಾರತೀಯ ವೈದ್ಯಕೀಯ ಸಂಘಕ್ಕೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ನ. 23ಕ್ಕೆ ಮುಂದೂಡಿತು.

ಅದರಂತೆ ಫ‌ನಾದ ಪದಾಧಿಕಾರಿಗಳು ಸಭೆ ಸೇರಿ, ಅನಿರ್ಧಿಷ್ಟಾವಧಿ ಮುಷ್ಕರ ಕೈಬಿಡುವುದರ ಜತೆಗೆ ಶುಕ್ರವಾರ ಬೆಳಗ್ಗೆಯಿಂದ ಎಲ್ಲಾ ರೀತಿಯ ವೈದ್ಯಕೀಯ ಸೇವೆ ನೀಡಲು ತೀರ್ಮಾನಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಒಮ್ಮತದ ತೀರ್ಮಾನ ತೆಗೆದುಕೊಂಡು
ಒಪಿಡಿ ಸೇವೆ ಒದಗಿಸಲಿ ದ್ದೇವೆ. ಸರ್ಕಾರದ ತೀರ್ಮಾನ ಸಕಾರಾತ್ಮಕವಾಗಿಲ್ಲದ್ದಿದ್ದರೆ ಮತ್ತೆ ಹೋರಾಟ ಆರಂಭಿಸಲಿದ್ದೇವೆ. ಬೆಂಗಳೂರು ಘಟಕದಿಂದ ಮುಷ್ಕರ್‌ ವಾಪಸ್‌ ಪಡೆದಿದ್ದೇವೆ. ಜಿಲ್ಲಾ ಮಟ್ಟದ ತೀರ್ಮಾನಗಳನ್ನು ಆಯಾ ಘಟಕದಿಂದಲೇ ತೆಗೆದುಕೊಳ್ಳುತ್ತಾರೆ ಎಂದು ಫ‌ನಾ ನಿಯೋಜಿತ ಅಧ್ಯಕ್ಷ ಡಾ.ಸಿ.ಜಯಣ್ಣ ಸ್ಪಷ್ಟಪಡಿಸಿದ್ದಾರೆ. 

ಸತ್ಯಾಗ್ರಹ ಮುಂದುವರಿಯುತ್ತೆ: ಮುಖ್ಯಮಂತ್ರಿಯವರು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಐಎಂಎ ಕರ್ನಾಟಕ ಘಟಕದ ಪದಾಧಿಕಾರಿಗಳ ಸಭೆ ಕರೆದಿದ್ದು, ಅಲ್ಲಿಯವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಸಲು ಸಂಘದ ಸದಸ್ಯರು ನಿರ್ಧರಿಸಿದ್ದಾರೆ. ಸಂಘದಿಂದ ಅಧಿಕೃತವಾಗಿ ಒಪಿಡಿ ಬಂದ್‌ಗೆ ಕರೆ ನೀಡಿಲ್ಲ. ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿಯುವುದರಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಐಎಂಎ ಕರ್ನಾಟಕ ಶಾಖೆ ಗೌವರ ಕಾರ್ಯದರ್ಶಿ ಡಾ.ಬಿ.ವೀರಣ್ಣ ಮಾಹಿತಿ ನೀಡಿದರು.

Advertisement

ಸಂಘಟನೆಯಲ್ಲಿ ಒಡಕು?
ತಿದ್ದುಪಡಿ ವಿಧೇಯಕ ಮಂಡನೆ ವಿರೋಧಿಸಿ ಭಾರತೀಯ ವೈದ್ಯ ಸಂಘದ ಕರ್ನಾಟಕ ಶಾಖೆ ಹಾಗೂ ಫ‌ನಾ ಸೇರಿದಂತೆ 30ಕ್ಕೂ ಅಧಿಕ ವೈದ್ಯಕೀಯ ಸಂಘಟನೆಗಳು ಹಮ್ಮಿಕೊಂಡಿರುವ ಹೋರಾಟದಲ್ಲಿ ಈಗ ಬಿರುಕು ಮೂಡಿದೆ ಎನ್ನಲಾಗಿದೆ. ಐಎಂಎ ರಾಜ್ಯ ಘಟಕ ಖಾಸಗಿ ಆಸ್ಪತ್ರೆಯ ಒಪಿಡಿ ಬಂದ್‌ಗೆ ಕರೆ ನೀಡಿಲ್ಲ. ಇದು ಫ‌ನಾದಿಂದ ತೆಗೆದುಕೊಂಡ ನಿರ್ಧಾರ ಎಂದು ಸಂಘದ ಕೆಲವರು ಹೇಳುತ್ತಿದ್ದಾರೆ. ಸಂಘಕ್ಕೆ ಬೆಂಬಲ ನೀಡಲು, ಅವರ ಸೂಚನೆಯಂತೆ ಎಲ್ಲಾ ಪದಾಧಿಕಾರಿಗಳ ಸಭೆ ಕರೆದು ಒಪಿಡಿ ಬಂದ್‌ಗೆ
ತೀರ್ಮಾನಿಸಲಾಗಿದೆ ಎಂದು ಫ‌ನಾದ ವೈದ್ಯರು ವಾದಿಸುತ್ತಿದ್ದಾರೆ.  

ಒಬ್ಬರಿಂದ ಉದ್ಧಾರವಾಗಲ್ಲ
ವಿಚಾರಣೆ ವೇಳೆ ನ್ಯಾಯಾಲಯ ಮಸೂದೆ ಮಂಡನೆ ವಿಚಾರವಾಗಿ ಅರ್ಜಿದಾರರು ಹಾಗೂ ಪ್ರತಿವಾದಿಗಳ ವಾದಗಳನ್ನು ಕೇಳುತ್ತಾ, “ದೇಶ ಒಬ್ಬರಿಂದ ಉದ್ಧಾರವಾಗಲು ಸಾಧ್ಯವಿಲ್ಲ. ಎಲ್ಲರೂ ಪಾರದರ್ಶಕ, ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next