Advertisement

ಎಲ್ಲ ಸರಿ ಇದ್ದಾಗಲೂ ಧುತ್ತನೆ ಎದುರಾಗುವ ತಾಂತ್ರಿಕ ಸಮಸ್ಯೆ !

05:09 PM Apr 10, 2017 | Team Udayavani |

ತುಂಬೆ: ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನ ಬಳಿಯಿರುವ ಪಂಪ್‌ಹೌಸ್‌ನಲ್ಲಿ ನಿಜಕ್ಕೂ ಆಗಾಗ್ಗೆ ತಾಂತ್ರಿಕ ಸಮಸ್ಯೆ ಕಾಡುತ್ತದೆಯೇ? ವಿದ್ಯುತ್‌ ಸಮಸ್ಯೆ ಯಿಂದ ನಲುಗುತ್ತಿದೆಯೇ?

Advertisement

ಪಾಲಿಕೆ ಆಡಳಿತ ಮತ್ತು ಅಧಿಕಾರಿಗಳು ಬೇಸಗೆಯಲ್ಲಿ ಆಗಾಗ್ಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗಲೆಲ್ಲ ಕೊಡುವ ಕಾರಣ “ಪಂಪ್‌ ಹೌಸ್‌ ನಲ್ಲಿ ಪ್ರಾಬ್ಲಿಂ’ ಎನ್ನುವುದು. ಅದು ಈ ಬೇಸಗೆಯಲ್ಲೂ ಮುಂದುವರಿದಿದೆ. ಕೆಲವು ದಿನಗಳಿಂದ ಇಲ್ಲಿ ಪಂಪ್‌ ರಿಪೇರಿ ಸಹಿಧಿತ ವಿವಿಧ ಕಾರಣಗಳನ್ನು ನೀಡುತ್ತಾ ತಾಂತ್ರಿಕ ಎಡವಟ್ಟುಗಳು ನಡೆಯುತ್ತಲೇ ಇವೆ. ರಾತ್ರಿ ವೇಳೆ ಈ ಸಮಸ್ಯೆ ಕಾಡುವುದರಿಂದ ಜನರಿಗೆ ಅಷ್ಟೊಂದು ತೊಂದರೆ ಎನಿಸುತ್ತಿಲ್ಲ. ಆದರೂ ಕೆಲವು ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿರಬಹುದು.

ಹಾಗಾದರೆ ನಿಜಕ್ಕೂ ಇದು ಏನು? ನಮ್ಮ ಪಂಪ್‌ ಹೌಸ್‌ ನ ಸ್ಥಿತಿ ಹೇಗಿದೆ? ಅದರ ಆರೋಗ್ಯ ಹದಗೆಟ್ಟಿದೆಯೇ ಎಂದು ಪಂಪ್‌ ಹೌಸ್‌ನೊಳಗೆ ಹೊಕ್ಕಾಗ ಕಂಡದ್ದನ್ನು ಉದಯವಾಣಿ ಸುದಿನ ಇಲ್ಲಿ ಅನಾವರಣಗೊಳಿಸಿದೆ.

ಎಲ್ಲವೂ ವ್ಯವಸ್ಥಿತ
ತುಂಬೆಯಲ್ಲಿ 2 ಪಂಪ್‌ಹೌಸ್‌ (ಕೆಳ ಮಟ್ಟದ ರೇಚಕ ಸ್ಥಾವರ-ಎಲ್‌ಎಲ್‌ಪಿಎಸ್‌)ಇದೆ. ಇಲ್ಲಿ ತಲಾ ಮೂರರಂತೆ ಒಟ್ಟು 6 ಪಂಪ್‌ಗ್ಳಿವೆ. ಒಂದನೇ ಪಂಪ್‌ಹೌಸ್‌ 1971ರಲ್ಲಿ ಆರಂಭ‌ವಾಗಿ ದ್ದು, ಇದರಲ್ಲಿ 350 ಎಚ್‌ಪಿಯ 2 ಹಾಗೂ ಹೆಚ್ಚುವರಿಯಾಗಿ 400 ಎಚ್‌ಪಿಯ 1 ಪಂಪ್‌ ಇದೆ. ಎರಡನೇ ಪಂಪ್‌ಹೌಸ್‌ 2009ರಲ್ಲಿ ಆರಂಭ‌ವಾಗಿದ್ದು, ಇದರಲ್ಲಿ 320 ಎಚ್‌ಪಿಯ 3 ಪಂಪ್‌ಗ್ಳಿವೆ. ಇವು ಕಿರ್ಲೋಸ್ಕರ್‌ನದ್ದಾಗಿದ್ದು, ಕೆಲವು ಮೋಟಾರು ಬೇರೆ ಕಂಪೆನಿಯದ್ದು.

1971 ರಲ್ಲಿ ಇದ್ದ ಪಂಪ್‌ಗ್ಳು 2005ರವರೆಗೂ ಬಳಕೆಯಲ್ಲಿತ್ತು. ಬಳಿಕ ಬದಲಾಯಿಸಲಾಗಿದೆ. 2009 ರಿಂದ ಆರಂಭ‌ವಾದ ಪಂಪ್‌ಗ್ಳ ಪೈಕಿ ಕೆಲವನ್ನು ಬದಲಾಯಿಸಲಾಗಿದೆ. ಈ ಪಂಪ್‌ಗ್ಳು ಹೆಚ್ಚಿನ ಬಾಳ್ವಿಕೆ ಇರುವುದರಿಂದ ಪಂಪ್‌ಗ್ಳಲ್ಲಿ ಯಾವುದೇ ಸಮಸ್ಯೆ ಕಾಣಿಸದು. ಒಂದುವೇಳೆ ಕಂಡರೂ ಇಲ್ಲಿರುವ ನುರಿತ ತಂತ್ರಜ್ಞರ ಮೂಲಕವಾಗಿ ಪಂಪ್‌ ದುರಸ್ತಿಯಾಗುತ್ತದೆ.

Advertisement

ಪಂಪ್‌ಹೌಸ್‌ ಕಾರ್ಯನಿರ್ವಹಣೆ
ಪಂಪ್‌ಹೌಸ್‌ನ ಮೇಲ್ಭಾಗದಲ್ಲಿರುವ ಹೈಸ್ಪೀಡ್‌ ಮೋಟಾರು ತಿರುಗುವಾಗ, ಕೆಳಭಾಗದಲ್ಲಿ 1480 ಆರ್‌ಪಿಎಂ ನಲ್ಲಿ “ಸಾಫ್ಟ್’ ತಿರುಗುತ್ತದೆ. ಜಾಕ್‌ವೆಲ್‌ ಬೆಸೆದುಕೊಂಡು ಅಲ್ಲಿರುವ “ಇಂಪೆಲರ್‌’ ತಿರುಗಿ, ನೀರು ನದಿಯಿಂದ ಮೇಲೆ ಬರುತ್ತದೆ. ಇದಕ್ಕಾಗಿ ನದಿಯಿಂದ ಜಾಕ್‌ವೆಲ್‌ಗೆ 1.2 ಮೀಟರ್‌ ಹಾಗೂ 1.1 ಮೀಟರ್‌ ವ್ಯಾಸದ‌ ಪೈಪ್‌ ಬಳಕೆಯಾಗುತ್ತದೆ. ಇಲ್ಲಿಂದ ಹೈ ಲಿಫ್ಟ್ ಪಂಪ್‌ಹೌಸ್‌ಗೆ ನೀರು ಸರಬರಾಜಾಗುತ್ತದೆ. 

ಪ್ರತ್ಯೇಕ ವಿದ್ಯುತ್‌ ವ್ಯವಸ್ಥೆ 
ಇಲ್ಲಿನ ಪಂಪ್‌ಗ್ಳು 24 ಗಂಟೆ ಚಾಲ್ತಿಯಲ್ಲಿ ಇರಬೇಕು. ಹಾಗಾಗಿ ತುಂಬೆ ಯಿಂದ ಅಧ‌ì ಕಿ.ಮೀ. ದೂರದಲ್ಲಿರುವ ಬಂಟ್ವಾಳದ ತಲಪಾಡಿಯಿಂದ ನೇರವಾಗಿ 33 ಕೆ.ವಿ ಯ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಪ್ರತ್ಯೇಕವಾಗಿ ಕಲ್ಪಿಸಲಾಗಿದೆ. ಕೆಇಬಿ ಮಾರ್ಗದಲ್ಲಿ ಸಮಸ್ಯೆಯಾದರೂ ಅದನ್ನು ಕೂಡಲೇ ಸರಿಪಡಿಸಲಾಗುತ್ತದೆ.

ಸ್ಥಾವರದ ನಿರ್ವಹಣೆಗೆ ಸುಮಾರು 25 ಮಂದಿ ಕಾರ್ಯನಿರತರಾಗಿದ್ದಾರೆ. ಪಂಪ್‌ಹೌಸ್‌ನ ಮೊದಲ ಸ್ಥಾವರದ ನೀರು ನೇರವಾಗಿ ಬೆಂದೂರ್‌ವೆಲ್‌ ಹಾಗೂ 2ನೇ ಸ್ಥಾವರದ ನೀರು ಪಡೀಲ್‌ ಪಂಪ್‌ಹೌಸ್‌ಗೆ ಹೋಗಿ ಅಲ್ಲಿಂದ ನಗರದ ವಿವಿಧೆಡೆಗೆ ಪೂರೈಕೆಯಾಗುತ್ತದೆ.

ತಾಂತ್ರಿಕ ಸಮಸ್ಯೆ- ಅಭ್ಯಾಸದ ನುಡಿ
ತುಂಬೆಯ ಪಂಪ್‌ಗ್ಳು ಶೇ.90ರಷ್ಟು ಹಾಳಾಗುವುದಿಲ್ಲ. ಅದು ಅಷ್ಟು ಬಾಳಿಕೆಯ ಪಂಪ್‌ಗ್ಳು. ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ತಾಂತ್ರಿಕ ಸಮಸ್ಯೆಗಳನ್ನು ಹೇಳುತ್ತಲೇ ಇರುತ್ತಾರೆ. ಪಂಪ್‌ ಹಾಳಾದರೂ, ಹೆಚ್ಚುವರಿ ಪಂಪ್‌ಗ್ಳು ಇಲ್ಲಿ ಚಾಲು ಆಗುತ್ತದೆ. ನುರಿತ ಕೆಲಸಗಾರರು ಇದ್ದಾರೆ. ಆದರೆ, ಯಾವುದೋ ಕಾರಣವನ್ನು ಮುಂದಿಟ್ಟು ತಾಂತ್ರಿಕ ಸಮಸ್ಯೆ ಎಂದು ಹೇಳುತ್ತಾರೆ. 
– ಹನುಮಂತ ಕಾಮತ್‌,  ಸಾಮಾಜಿಕ ಹೋರಾಟಗಾರರು

ತಾಂತ್ರಿಕ ಸಮಸ್ಯೆ?
ನೇತ್ರಾವತಿಯಿಂದ ನೀರೆತ್ತುವ ಪಂಪ್‌ಗ್ಳು ಬಹಳ ವರ್ಷಗಳ ಕಾಲ ಬಾಳಿಕೆ ಬರುತ್ತದೆ ಹಾಗೂ ತಾಂತ್ರಿಕ ಸಮಸ್ಯೆ ಎದುರಾದರೆ ದುರಸ್ತಿ ಕೂಡ ಆಗುತ್ತದೆ. ಸ್ಟಾರ್ಟರ್‌ ಹಾಗೂ ಸ್ಟ್ರಕ್ಚರ್‌ನಲ್ಲಿ  ಸಮಸ್ಯೆ ಕಂಡರೂ ತತ್‌ಕ್ಷಣಕ್ಕೆ ಅದನ್ನು ಸರಿಮಾಡಲಾಗುತ್ತದೆ. ಹೀಗಾಗಿ ಪಂಪ್‌ನ ಗಂಭೀರ ಸಮಸ್ಯೆಗಳು ಇಲ್ಲಿಲ್ಲ ಎನ್ನುವುದು ಪಂಪ್‌ ಆಪರೇಟರ್‌ಗಳ ಅಭಿಪ್ರಾಯ. ವಿದ್ಯುತ್‌ ಸಮಸ್ಯೆ ಎದುರಾಗದಂತೆ ಪ್ರತ್ಯೇಕ ಲೈನ್‌ ಇರುವ ಹಿನ್ನೆಲೆಯಲ್ಲಿ ಅದೂ ಗಂಭೀರ ಸಮಸ್ಯೆ ಅಲ್ಲ ಎನ್ನುತ್ತಾರೆ ಅವರು. ಆದರೆ, ತಾಂತ್ರಿಕ ಕಾರಣಗಳ ನೆಪವೊಡ್ಡಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಲೇ ಇದೆ. ವಿದ್ಯುತ್‌ ಹಾಗೂ ಪಂಪ್‌ ಇವೆರಡರಲ್ಲೂ ಇರದ ತಾಂತ್ರಿಕ ಸಮಸ್ಯೆಗಳು ಇನ್ನೆಲ್ಲಿಂದ ಉಗಮವಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ನೀರಿರುವ ಕಾಲದಲ್ಲಿ ಕಾಣಿಸದ ತಾಂತ್ರಿಕ ಸಮಸ್ಯೆ, ನೀರಿಲ್ಲದ್ದಾಗ ಹೆಚ್ಚಾಗಿ ಕಾಣುತ್ತಿದೆ ಎಂಬುದು ಇನ್ನೊಂದು ವಿಶೇಷ.

– ದಿನೇಶ್ ಇರಾ

Advertisement

Udayavani is now on Telegram. Click here to join our channel and stay updated with the latest news.

Next