ಮೂಡಬಿದಿರೆ: ಕರ್ನಾಟಕ ಸಲಫಿ ಅಸೋಸಿಯೇಶನ್ ಮಂಗಳೂರು ವತಿಯಿಂದ ಮೂಡಬಿದಿರೆ ಸಮಾಜ ಮಂದಿರದಲ್ಲಿ ಏರ್ಪಡಿಸಿರುವ “ದಿ ಮಿರಾಕಲ್ – ಇಸ್ಲಾಂ ಕುರಿತಾದ ಮೂರು ದಿನಗಳ ಪ್ರದರ್ಶನ ಕಾರ್ಯಕ್ರಮವನ್ನು ಶೈಖ್ ಡಾ| ಆರ್.ಕೆ. ನೂರ್ ಮದನಿ ಅವರು ಉದ್ಘಾಟಿಸಿದರು.
ಇಸ್ಲಾಂ ಅಗಣಿತ, ಅದ್ಭುತ ವಿಷಯಗಳನ್ನು ಒಳಗೊಂಡಿದ್ದು ಅವುಗಳ ಮಹತ್ವವನ್ನು ಜನ ಸಾಮಾನ್ಯರಿಗೆ ತಿಳಿಸುವ ಕಾರ್ಯ ನಡೆಯಬೇಕಾಗಿದೆ. ಇಸ್ಲಾಂ ಮಾತ್ರವಲ್ಲ ಸರ್ವ ಧರ್ಮೀ ಯರೂ ಅರಿತುಕೊಳ್ಳಬೇಕಾದ, ದುಶ್ಚಟ, ದುರ್ವರ್ತನೆಗಳ ಕೆಡುಕನ್ನು ಮನವರಿಕೆ ಮಾಡಿ ಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಮಿರಾಕಲ್ ಪ್ರದರ್ಶನ ಒಂದು ಉತ್ತಮ ಪ್ರಯತ್ನವಾಗಿದೆ’ ಎಂದು ಅವರು ಹೇಳಿದರು.
ಉಳ್ಳಾಲ ಅಲ್ ಬಯಾನ್ ಅರೇಬಿಕ್ ಕಾಲೇಜಿನ ಉಪನ್ಯಾಸಕ ಮೌಲವಿ ಮುಹಮ್ಮದ್ ಇಝಾಝ್ ಸ್ವಲಾಹಿ ಅವರು ಕನ್ನಡದಲ್ಲಿ “ನಮ್ಮ ಜೀವನದ ಗುರಿ’ ಎಂಬ ವಿಷಯದಲ್ಲಿ ಕನ್ನಡದಲ್ಲಿ ಉಪನ್ಯಾಸವಿತ್ತರು. ಮನುಷ್ಯ ಜನ್ಮ ಈ ಜಗತ್ತಿನ ಕೋಟ್ಯಂತರ ಜೀವರಾಶಿಗಳಲ್ಲಿ ಅತ್ಯಂತ ವಿಶಿಷ್ಟ. ಮನುಷ್ಯನಿಗೆ ಇರುವ ಬುದ್ಧಿಶಕ್ತಿ ಅನ್ಯ ಪ್ರಾಣಿಗಳಿಗಿಲ್ಲ ಎಂಬುದು ದೇವರ ಕೊಡುಗೆಯೇ ಆಗಿದೆ. ಈ ಅನುಗ್ರಹದ ಫಲವನ್ನು ನಾವೆಲ್ಲರೂ ಯೋಗ್ಯವಾಗಿ ಅನುಭವಿಸಬೇಕಾಗಿದೆ. ಜೀವನದ ನಿಜವಾದ ಉದ್ದೇಶವನ್ನು ಅರಿತು ಬಾಳಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವ ಧರ್ಮ ಬಾಂಧವರಿಗೆ ಮಿರಾಕಲ್ ಪ್ರದರ್ಶನ ಕಾರ್ಯಕ್ರಮವು ಉತ್ತಮ ಪ್ರಭಾವ ಬೀರಲಿದೆ ಎಂದು ಅವರು ತಿಳಿಸಿದರು. ಮೌಲವಿ ತಾಜುದ್ದೀನ್ ಸ್ವಲಾಹಿ ಅವರು “ದಾರಿ ತಪ್ಪುತ್ತಿರುವ ಯುವಜನಾಂಗ’ ದ ಕುರಿತು ಮಲಯಾಳಂನಲ್ಲಿ ಉಪನ್ಯಾಸವಿತ್ತರು. ಯೌವನ ಎಂಬುದು ಜೀವನದ ಅತಿ ಪ್ರಧಾನ ಹಂತ. ಈ ಹಂತದಲ್ಲಿ ದಾರಿ ತಪ್ಪುವವರೇ ಹೆಚ್ಚು. ಅಂಥವರಿಗೆಲ್ಲ ಸನ್ಮಾರ್ಗ ತೋರುವ, ಸಮಾಜ ಮುಖಿಗಳನ್ನಾಗಿಸುವ ಜವಾಬ್ದಾರಿ ಹಿರಿಯರ ಹಿರಿಯರ ಮೇಲಿದೆ, ಸಮಾಜದ ಮೇಲಿದೆ’ ಎಂದರು.
ಮೂರು ದಿನಗಳ ಈ ಪ್ರದರ್ಶನ ಮುಂಜಾನೆ ಗಂ. 9ರಿಂದ ರಾತ್ರಿ 10ರವರೆಗೆ ನಡೆಯಲಿದೆ. ಕನ್ನಡ ಮತ್ತು ಆಂಗ್ಲ ಭಾಷಾ ವೀಡಿಯೋ ಮಂದಿರಗಳು, ಪ್ರತ್ಯೇಕ ಚಿತ್ರ ಪ್ರದರ್ಶನದ ಪೆವಿಲಿಯನ್‌ಗಳು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ. ಶನಿವಾರ ಸಂಜೆ ಗಂ. 4.30ರಿಂದ ಉಪನ್ಯಾಸ ಕಾರ್ಯಕ್ರಮಗಳು ಬ್ಯಾರಿ, ಮಲಯಾಳ, ಉರ್ದು ನಡೆಯಲಿವೆ.
ಜ. 28ರಂದು ಕರ್ನಾಟಕ ಸಲಫಿ ಅಸೋಸಿ ಯೇಶನ್ ಅಧ್ಯಕ್ಷ ಅಬ್ದುರ್ರಶೀದ್ ಎಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ಶಾಸಕ ಕೆ. ಅಭಯಚಂದ್ರ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಡಾ| ಎಂ. ಮೋಹನ ಆಳ್ವ, ಜಗದೀಶ ಅಧಿಕಾರಿ ಅವರ ಉಪಸ್ಥಿತಿ, ಇಬ್ರಾಹಿಂ ಖಲೀಲ್ ತಲಪಾಡಿ, ಮೌಲವಿ ಶಿಹಾಬ್ ಎಡಕ್ಕರ ಅವರ ಉಪನ್ಯಾಸಗಳು, ಶೈಖ್ ಅಬ್ದುಲ್ ಖದೀರ್ ಉಮ್ರಿ ಅವರ ಸಮಾರೋಪ ಉಪನ್ಯಾಸದೊಂದಿಗೆ “ದಿ ಮಿರಾಕಲ್’ ಪ್ರದರ್ಶನ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.