Advertisement

ಪಿಯು ಇಂಗ್ಲಿಷ್‌ ಪರೀಕ್ಷೆಗೆ ಸಕಲ ಸಿದ್ಧತೆ

11:27 AM Jun 12, 2020 | Suhan S |

ಬಾಗಲಕೋಟೆ: ಕೋವಿಡ್  ಹಿನ್ನೆಲೆ ಲಾಕ್‌ಡೌನ್‌ದಿಂದ ಮುಂದೂಡಲಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್‌ ವಿಷಯ ಪರೀಕ್ಷೆ ಜೂನ್‌ 18 ರಂದು ಜಿಲ್ಲೆಯಾದ್ಯಂತ ನಡೆಯಲಿದೆ. ವಿದ್ಯಾರ್ಥಿಗಳು ಪರೀಕ್ಷೆ ನಡೆಯುವ ಒಂದು ಗಂಟೆ ಮುಂಚೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ ಹೇಳಿದರು.

Advertisement

ಜಿಲ್ಲಾಡಳಿತ ಭವನದ ನೂತನ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಜರುಗಿದ ದ್ವಿತೀಯ ಪಿಯು ಇಂಗ್ಲಿಷ್‌ ವಿಷಯ ಪರೀಕ್ಷಾ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಥರ್ಮಲ್‌ ಸ್ಕ್ರೀನಿಂಗ್‌, ಕೈಗಳಿಗೆ ಸ್ಯಾನಿಟೈಸರ್‌ ಮಾಡಿ ಪರೀಕ್ಷಾ ಕೊಠಡಿಗಳಿಗೆ ಕಳುಹಿಸಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಬರಬೇಕು ಎಂದು ತಿಳಿಸಿದರು.

21 ಸಾವಿರ ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ ಒಟ್ಟು 37 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 21,011 ವಿದ್ಯಾರ್ಥಿಗಳು ಇಂಗ್ಲಿಷ್‌ ವಿಷಯ ಪರೀಕ್ಷೆ ಬರೆಯಲಿದ್ದಾರೆ. ಈ ಹಿಂದೆ ಇಂಗ್ಲಿಷ್‌ವಿಷಯ ಪರೀಕ್ಷೆಗೆ 20,618 ವಿದ್ಯಾರ್ಥಿಗಳು ಬರೆಯಲಿದ್ದರು. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಜಿಲ್ಲೆಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರಿಂದ ಜಿಲ್ಲೆಯಿಂದ 314 ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ಹೋಗಿದ್ದಾರೆ. ಬೇರೆ ಜಿಲ್ಲೆಯ 707 ವಿದ್ಯಾರ್ಥಿಗಳು ನಮ್ಮ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವ ಮೂಲಕ ಜಿಗ್‌ಜಾಗ್‌ ರೀತಿಯಲ್ಲಿ ಆಸನದ ವ್ಯವಸ್ಥೆ ಮಾಡಲಾಗುವುದು ಎಂದರು.

ಪರೀಕ್ಷೆಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ಆರೋಗ್ಯ ಸಹಾಯಕರನ್ನು ನಿಯೋಜಿಸಲಾಗುತ್ತಿದೆ. ಇಲಾಖಾ ಮಾರ್ಗದರ್ಶನದಂತೆ ಬೇರೆ ಜಿಲ್ಲೆಯ ಪರೀಕ್ಷಾ ಕೇಂದ್ರದಿಂದ ಆಗಮಿಸಿದ ಹೊಸದಾಗಿ ಪ್ರವೇಶ ಪತ್ರ ತರದೇ ಇರುವುದರಿಂದ ಬಂದಿರುವ ಲಿಸ್ಟ್‌ ಪರಿಶೀಲಿಸಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗುತ್ತಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರುವಂತೆ ತಿಳಿಸಬೇಕು. ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರು 200 ಮಾಸ್ಕ್ಗಳನ್ನು ಇಟ್ಟುಕೊಳ್ಳಬೇಕು. ಪ್ರತಿಯೊಂದು ಕೊಠಡಿಯನ್ನು ಸ್ಯಾನಿಟೈಸೇಷನ್‌ ಮಾಡಲು ತಿಳಿಸಿದರು.

ಪರೀಕ್ಷಾ ದಿನದಂದು ಕೇಂದ್ರದ ಸುತ್ತಮುತ್ತಲೂ 200 ಮೀಟರ್‌ ನಿಷೇಧಿತ ಪ್ರದೇಶವೆಂದು ಘೋಷಿಸಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ನೇಮಕೊಂಡ ಅಧಿಕಾರಿ ಹಾಗೂ ಸಿಬ್ಬಂದಿ ಹೊರತುಪಡಿಸಿ ಉಳಿದ ವ್ಯಕ್ತಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಅಲ್ಲದೇ ಈ ವ್ಯಾಪ್ತಿಯಲ್ಲಿ ಝರಾಕ್ಸ್‌ ಅಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸುವುದಾಗಿ ತಿಳಿಸಿದರು.

Advertisement

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಪೂಜಾರಿ ಪರೀಕ್ಷಾ ಸಿದ್ದತೆ ಕುರಿತು ವಿವರಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌.ಬಿರಾದಾರ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಆಯಾ ತಾಲೂಕಿನ ತಹಶೀಲ್ದಾರ್‌ ರು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.

24 ವಿದ್ಯಾರ್ಥಿಗಳು :  ಜಿಲ್ಲೆಯಲ್ಲಿ 37 ಪರೀಕ್ಷಾ ಕೇಂದ್ರಗಳಿವೆ. ಪ್ರತಿ 24 ವಿದ್ಯಾರ್ಥಿಗಳಂತೆ ಪರೀಕ್ಷಾ ಕೊಠಡಿಯಂತೆ ಒಟ್ಟು 955 ಪರೀಕ್ಷಾ ಕೊಠಡಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯ ಕೊಠಡಿ ಮೇಲ್ವಿಚಾರಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನಿಯೋಜನೆ ಮಾಡಲಾಗಿದೆ. ಪರೀಕ್ಷಾ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಮಾಧ್ಯಮದವರಿಗೆ ನಿಷೇಧಿಸಲಾಗಿದೆ. ಶಶಿಧರ ಪೂಜಾರಿ, ಉಪ ನಿರ್ದೇಶಕ, ಪ.ಪೂ ಇಲಾಖೆ

ಉಚಿತ ಬಸ್‌ ವ್ಯವಸ್ಥೆ :  ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರಲು ಉಚಿತವಾಗಿ ಸಂಚರಿಸಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಆಯಾ ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳ ಪಟ್ಟಿ ಮಾಡಿಕೊಂಡು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಪರೀಕ್ಷಾ ವಿದ್ಯಾರ್ಥಿಗಳು ಸ್ಮಾರ್ಟ್‌ಪಾಸ್‌, ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. –ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next