ಬೆಂಗಳೂರು: ಹಿಂದುಳಿದ ವರ್ಗದ ಮೀಸಲು ವಿಚಾರಕ್ಕೆ ಸಂಬಂಧಪಟ್ಟಂತೆ ಮಾ.31 ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಾಮಚಾಯಿತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಗೆ ಈ ವಿಚಾರ ತಿಳಿಸಿದ್ದಾರೆ.
ಹಿಂದುಳಿದ ವರ್ಗಕ್ಕೆ ಅನ್ಯಾಯವಾಗುವುದಕ್ಕೆ ನಾವ್ಯಾರು ಅವಕಾಶ ನೀಡಬಾರದು. ಈ ಚುನಾವಣೆಯನ್ನು ಪಕ್ಷಭೇದದಿಂದ ನೋಡಬಾರದು. ಈ ಹಿನ್ನೆಲೆಯಲ್ಲಿ ಮಾ.31 ರಂದು ಎಲ್ಲರೂ ಸೇರಿ ಚರ್ಚೆ ಮಾಡಿ, ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಿಸೋಣ. ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿ ಚುನಾವಣೆ ನಡೆಯುವುದಕ್ಕೆ ಅವಕಾಶ ಮಾಡಿಕೊಡುವುದು ಬೇಡ ಎಂದು ಈಶ್ವರಪ್ಪ ಹೇಳಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಖಾತ್ರಿ ಯೋಜನೆ ಕಳೆದ ಮೂರ್ನಾಲ್ಕು ವರ್ಷದಲ್ಲಿ ನಮ್ಮ ನಿರೀಕ್ಷೆ ಮೀರಿ ಕೆಲಸವಾಗುತ್ತಿದೆ. 18 ಹಾಗೂ 22ನೇ ಸಾಲಿನವರೆಗೂ 53 ಕೋಟಿ ಮಾನವ ದಿನಗಳನ್ನ ಸೃಜನೆ ಮಾಡಲಾಗಿದೆ. ರಾಷ್ಟ್ರದಲ್ಲೇ ಅತೀ ಹೆಚ್ಚು ಮಾನವ ದಿನಗಳನ್ನ ಸೃಜನೆ ಮಾಡುವುದರಲ್ಲಿ ರಾಜ್ಯವೂ ಒಂದು. 16 ಕೋಟಿ ಮಾನವ ದಿನಗಳನ್ನ ನಾವು ಗುರಿ ಮುಟ್ಟಿದ್ದೇವೆ. ದುಡಿಯೋಣ ಬಾ, ರೈತ ಕ್ರಿಯಾ ಯೋಜನೆ, ಮಹಿಳಾ ಕಾಯಕೋತ್ಸವ, ರೈತ ಬಂಧು ಸೇರಿದಂತೆ ಅನೇಕ ಕಾಮಗಾರಿಗಳನ್ನ ಮಾಡಿದ್ದೇವೆ ಎಂದರು.
ಇದನ್ನೂ ಓದಿ:‘ನೀರಾವರಿ ಎಂದರೆ ಕೇವಲ ಕೃಷ್ಣಾ ಮೇಲ್ದಂಡೆಯೇ?’ ಎಂದ ಶಿವಲಿಂಗೇಗೌಡಗೆ ಉ.ಕ ಶಾಸಕರ ತರಾಟೆ
ಈ ವೇಳೆ ಮಧ್ಯಪ್ರವೇಶ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಎನ್ಆರ್ ಇಜಿಎಸ್ ನಲ್ಲಿ ಕೇಂದ್ರ ಸರ್ಕಾರ ಅನುದಾನ ಕಡಿಮೆ ಮಾಡಿದೆ. ಮಾನವ ದಿನಗಳನ್ನ ಬಹಳ ಮಾಡಿದ್ದೀವಿ ಅಂತ ನೀವು ಹೇಳಿದ್ರಲ್ಲಾ 2021ರ ಕೇಂದ್ರ ಬಜೆಟ್ ನಲ್ಲಿ ಒಂದು ಲಕ್ಷದ 11 ಸಾವಿರ ಕೋಟಿ ಇತ್ತು, 22ರ ಬಜೆಟ್ ನಲ್ಲಿ 98 ಸಾವಿರ ಕೋಟಿ ಇತ್ತು .ಈ ವರ್ಷದ ಕೇಂದ್ರ ಬಜೆಟ್ ನಲ್ಲಿ 70 ಸಾವಿರ ಕೋಟಿ ಇದೆ. ಅಂದರೆ ಅನುದಾನ ಕಡಿಮೆಯಾದಂತಲ್ಲವೇ? ಎಂದು ಪ್ರಶ್ನಿಸಿದರು.