Advertisement

ಮೆಗಾನ್‌ನಲ್ಲಿ ಎಲ್ಲಾ ರೀತಿಯ ಆರೋಗ್ಯ ಸೇವೆ

03:03 PM Jun 09, 2020 | mahesh |

ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದ್ದ ಎಲ್ಲಾ ರೀತಿಯ ಆರೋಗ್ಯ ಸೇವೆಗಳನ್ನು ಗುರುವಾರದಿಂದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು. ಸೋಮವಾರ ಶಿಮ್ಸ್‌ ಮೆಡಿಕಲ್‌ ಕಾಲೇಜಿನಲ್ಲಿ ಮೆಗ್ಗಾನ್‌ ಆಸ್ಪತ್ರೆ ಸೇವೆಗಳನ್ನು ಉತ್ತಮಪಡಿಸುವ ಬಗ್ಗೆ ಜನಪ್ರತಿನಿಧಿ ಗಳು ಹಾಗೂ ಕಾಲೇಜಿನ ಹಿರಿಯ ವೈದ್ಯಾಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಜಿಲ್ಲೆಯಲ್ಲಿ ಒಟ್ಟು 69 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 29ಮಂದಿ ಈಗಾಗಲೇ ಗುಣಮುಖರಾಗಿ ಹಿಂದಿರುಗಿದ್ದಾರೆ. ಇನ್ನುಳಿದಿರುವ 40 ಮಂದಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬ್ಲಾಕ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೆಗ್ಗಾನ್‌ ಆಸ್ಪತ್ರೆಯನ್ನು ಮೊದಲಿನಂತೆ ಇನ್ನಿತರ ಎಲ್ಲಾ ಚಿಕಿತ್ಸೆಗಳಿಗೆ ಬಳಸಲಾಗುತ್ತಿದೆ. ಇನ್ನು ಯಾವುದೇ ಚಿಕಿತ್ಸೆಗಾಗಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುವುದಿಲ್ಲ. ಎಲ್ಲಾ ವಿಧದ ಚಿಕಿತ್ಸೆಗಳನ್ನು ಮೆಗ್ಗಾನ್‌ನಲ್ಲಿಯೇ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು. ಮೆಗ್ಗಾನ್‌ನಲ್ಲಿ ಒಟ್ಟು 16 ಡಯಾಲಿಸಿಸ್‌ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಶನಿವಾರದಿಂದ ಪೂರ್ಣ ಪ್ರಮಾಣದ ಡಯಾಲಿಸಿಸ್‌ ಸೇವೆ ಮೆಗ್ಗಾನ್‌ನಲ್ಲಿ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.

ವೈದ್ಯರ ಗೈರು ಹಾಜರಾತಿಗೆ ಎಚ್ಚರಿಕೆ:  ಶಿಮ್ಸ್‌ ಮೆಡಿಕಲ್‌ ಕಾಲೇಜಿನಲ್ಲಿ 130 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಬಹುತೇಕ ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಕೇವಲ ಸಹಿ
ಮಾಡಿ ಹೋಗುತ್ತಿದ್ದಾರೆ. ಶಿಮ್ಸ್‌ನಲ್ಲಿರುವ ವಿದ್ಯಾರ್ಥಿಗಳು ರೋಗಿಗಳನ್ನು ನೋಡಿಕೊಳ್ಳುತ್ತಿದ್ದು, ಕರ್ತವ್ಯದಲ್ಲಿರಬೇಕಾದ ವೈದ್ಯರು ವಾಟ್ಸಪ್‌ ಮೂಲಕ ಈ ವಿದ್ಯಾರ್ಥಿಗಳಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ನಿರಂತರ ದೂರುಗಳು ಬರುತ್ತಿವೆ. ಎಲ್ಲಾ ವೈದ್ಯರು ಕಡ್ಡಾಯವಾಗಿ ಡ್ಯೂಟಿ ಸಮಯದಲ್ಲಿ ಆಸ್ಪತ್ರೆಯಲ್ಲಿರುವಂತೆ ನೋಡಿಕೊಳ್ಳಬೇಕಾದುದು ನಿರ್ದೇಶಕರ ಜವಾಬ್ದಾರಿ ಎಂದರು.

ಔಷಧಗಳನ್ನು ವೈದ್ಯರು ಹೊರಗೆ ಖರೀದಿಸಲು ಚೀಟಿ ಬರೆದುಕೊಡುವಂತಿಲ್ಲ. ಮೆಗ್ಗಾನ್‌ನಲ್ಲಿ ಚಿಕಿತ್ಸೆ  ನೀಡಲು ಸಾಧ್ಯವಾಗದೆ ಬೇರೆ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಬೇಕಿದ್ದರೆ, ಆಯಾ ವಿಭಾಗದ ಮುಖ್ಯಸ್ಥರು ಮಾತ್ರ ಶಿಫಾರಸು ಮಾಡಬಹುದಾಗಿದೆ. ಖಾಸಗಿ ಆ್ಯಂಬುಲೆನ್ಸ್‌ಗಳು ಮೆಗ್ಗಾನ್‌ ಆವರಣದ ಒಳಗೆ ಬಾರದಂತೆ ನೋಡಿಕೊಳ್ಳಬೇಕು ಎಂದರು. ಶಾಶಕರಾದ ಅರಗ ಜ್ಞಾನೇಂದ್ರ ಆಯನೂರು ಮಂಜುನಾಥ, ಪ್ರಸನ್ನ ಕುಮಾರ್‌, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಎಂ.ಎಲ್‌.ವೈಶಾಲಿ, ಶಿಮ್ಸ್‌ ಆಡಳಿತ ಮಂಡಳಿ ಸದಸ್ಯರಾದ ದಿವಾಕರ ಶೆಟ್ಟಿ, ಡಾ| ವಾಣಿ ಕೋರಿ, ಡಾ| ಗೌತಮ್‌, ಶಿಮ್ಸ್‌  ನಿರ್ದೇಶಕ ಡಾ| ಗುರುಪಾದಪ್ಪ, ಜಿಲ್ಲಾ ಸರ್ಜನ್‌ ಡಾ|ರಘನಂದನ್‌ ಮತ್ತಿತರರು ಉಪಸ್ಥಿತರಿದ್ದರು.

ಶಿಮ್ಸ್‌ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯರ ಹಾಜರಾತಿಗಾಗಿ ಫೇಸ್‌ ರೀಡಿಂಗ್‌ ಯಂತ್ರ ಸೇರಿದಂತೆ ಅಗತ್ಯ ಯಂತ್ರಗಳನ್ನು ಖರೀದಿಸಬೇಕು. ಕರ್ತವ್ಯದಲ್ಲಿರುವ ವೈದ್ಯರ ಪಟ್ಟಿಯನ್ನು ಎಲ್ಲರಿಗೂ ಕಾಣುವಂತೆ ಪ್ರತಿದಿನ ಪ್ರಕಟಿಸಬೇಕು. ಶಿಮ್ಸ್‌ ಆಡಳಿತ ಮಂಡಳಿಯ ಮೂರು ಮಂದಿ ನಾಮನಿರ್ದೇಶಿತ ಸದಸ್ಯರ ವಿಜಿಲೆನ್ಸ್‌ ಸಮಿತಿ ರಚಿಸಬೇಕು.
ಕೆ.ಎಸ್‌.ಈಶ್ವರಪ್ಪ, ಸಚಿವರು

Advertisement
Advertisement

Udayavani is now on Telegram. Click here to join our channel and stay updated with the latest news.

Next