ನವದೆಹಲಿ: 2021ನೇ ಸಾಲಿನ ಡಿಸೆಂಬರ್ ವೇಳೆಗೆ ಭಾರತೀಯರೆಲ್ಲರಿಗೂ ಕೋವಿಡ್ 19 ಲಸಿಕೆ ಹಾಕುವ ಕಾರ್ಯಕ್ರಮ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ(ಮೇ 28) ತಿಳಿಸಿದೆ.
ಇದನ್ನೂ ಓದಿ:ವೀಡಿಯೋ ಕಾನ್ಫರೆನ್ಸ್ ನಲ್ಲಿ 3ಡಿ ಅನುಭವ ನೀಡಲಿದೆ ಗೂಗಲ್ ಪ್ರಾಜೆಕ್ಟ್ ಸ್ಟಾರ್ ಲೈನ್
ದೇಶದ ಜನಸಂಖ್ಯೆಯಲ್ಲಿ ಕೇವಲ ಶೇ.3ರಷ್ಟು ಜನ ಮಾತ್ರ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಈ ಘೋಷಣೆ ಮಾಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿಸೆಂಬರ್ ನೊಳಗೆ ದೇಶದಲ್ಲಿ 216 ಕೋಟಿ ಕೋವಿಡ್ 19 ಲಸಿಕೆಯ ಡೋಸ್ ಗಳನ್ನು ಉತ್ಪಾದಿಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಕಳೆದ ವಾರ ಸ್ಪಷ್ಟಪಡಿಸಿದೆ. ಅಂದರೆ ದೇಶದಲ್ಲಿರುವ ಕನಿಷ್ಠ 108 ಕೋಟಿ ಜನರು ಲಸಿಕೆ ಪಡೆಯಬಹುದಾಗಿದೆ. ಹೀಗಾಗಿ ಡಿಸೆಂಬರ್ 2021ರೊಳಗೆ ಭಾರತ ಎಲ್ಲರಿಗೂ ಲಸಿಕೆಯನ್ನು ನೀಡಲಿದೆ ಎಂಬುದನ್ನು ರಾಹುಲ್ ಗಾಂಧಿ ತಿಳಿದುಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ನೀಡಿರುವ ನೌಟಂಕಿ(ನಾಟಕ) ಶಬ್ದ ಬಳಸಿದ್ದನ್ನು ಖಂಡಿಸಿದ ಜಾವ್ಡೇಕರ್, ಕೋವಿಡ್ 19 ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸರ್ಕಾರದ ಪ್ರಯತ್ನವನ್ನು ರಾಹುಲ್ ಗಾಂಧಿ ಅವಮಾನಿಸುತ್ತಿದ್ದಾರೆ ಎಂದು ಹೇಳಿದರು.
ಕೋವಿಡ್ 19 ವಿಚಾರದಲ್ಲಿ ರಾಹುಲ್ ಗಾಂಧಿ ಬಳಸುವ ಭಾಷೆ ಟೂಲ್ ಕಿಟ್ ನಂತೆಯೇ ಇದೆ. ಹೀಗಾಗಿ ಟೂಲ್ ಕಿಟ್ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡ ಇದೆ ಎನ್ನುವುದು ಗೋಚರಿಸುತ್ತಿದೆ ಎಂದು ಜಾವ್ಡೇಕರ್ ದೂರಿದ್ದಾರೆ.