Advertisement

ಅಖಿಲ ಭಾರತ ಯುವ ಜಾಗೃತಿ ಅಭಿಯಾನ

12:48 PM Apr 20, 2018 | Team Udayavani |

ಮೈಸೂರು: ದೇಶದ ಪ್ರತಿಯೊಬ್ಬರು ನವಭಾರತದ ನಿರ್ಮಾಣಕ್ಕೆ ಸಕ್ರಿಯವಾಗಿ ಭಾಗವಹಿಸುವ ಮೂಲಕ ದೇಶ ಹಾಗೂ ಸಮಾಜದಲ್ಲಿ ಬದಲಾವಣೆ ಖಂಡಿತ ಸಾಧ್ಯ ಎಂದು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥಾಪಕ ಅಧ್ಯಕ್ಷ ಡಾ.ಆರ್‌.ಬಾಲಸುಬ್ರಹ್ಮಣ್ಯಂ ತಿಳಿಸಿದರು.

Advertisement

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಯಾದವಗಿರಿಯ ಜ್ಞಾನಪ್ರಕಾಶ ಭವನದಲ್ಲಿ ಆಯೋಜಿಸಿದ್ದ 2017-2020 ನನ್ನ ಭಾರತ ಸ್ವರ್ಣಿಮ ಭಾರತ, ಅಖೀಲ ಭಾರತ ಯುವ ಜಾಗೃತಿ ಬಸ್‌ ಪ್ರದರ್ಶನ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ವಿಚಾರಗಳನ್ನು ತಿಳಿಯುವ ಸಲುವಾಗಿ ಎಲ್ಲರೂ ವಿಶಾಲವಾಗಿ ಯೋಚನೆ ಮಾಡಬೇಕಿದೆ ಎಂದು ತಿಳಿಸಿದರು. 

ನಾಯಕತ್ವ ಗುಣ: ಜೀವನದಲ್ಲಿ ಆಹಾರ, ಧ್ಯಾನ, ಯೋಗ, ಅಧ್ಯಾತ್ಮಿಕ ಚಿಂತನೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಮುಖವಾಗಿದೆ. ಇಂದು ವಿಶ್ವದ ಎಲ್ಲಾ ರಾಷ್ಟ್ರಗಳು ಶಾಂತಿಯನ್ನು ಬಯಸುತ್ತಿದ್ದು, ಶಾಂತಿ ಎಂಬುದು ಯಾರೊಬ್ಬರ ಸ್ವತ್ತಲ್ಲ. ಅದು ನಮ್ಮಲ್ಲಿಯೇ ಇರುತ್ತದೆ. ಇನ್ನು ತಂತ್ರಜ್ಞಾನವನ್ನು ನಕಾರಾತ್ಮಕವಾಗಿ ಬಳಸಿಕೊಳ್ಳುವ ಬದಲಿಗೆ ಸಕಾರಾತ್ಮಕವಾಗಿ ಬಳಸಿಕೊಳ್ಳಲು ಸಾಧ್ಯವಿದ್ದು, ಆ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.

ಸಾಧಕರ ಆದರ್ಶ ಪಾಲಿಸಿ: ಪ್ರಸ್ತುತ ಯುವಕರಿಗೆ ಸಿನಿಮಾ ನಟರು, ಕ್ರೀಡಾಪಟುಗಳು ಆದರ್ಶ ವ್ಯಕ್ತಿಗಳಾಗುತ್ತಿದ್ದು, ಅದಕ್ಕೆ ನಾವೇ ಕಾರಣರಾಗಿದ್ದೇವೆ. ಸ್ವಾಮಿ ವಿವೇಕಾನಂದ ಸೇರಿದಂತೆ ವಿಶೇಷ ಸಾಧನೆ ಮಾಡಿದವರನ್ನು ಆದರ್ಶ ವ್ಯಕ್ತಿಗಳನ್ನಾಗಿಸಿಕೊಳ್ಳುವಂತೆ ಅರಿವು ಮೂಡಿಸುವ ಅಗತ್ಯವಿದೆ.

ಬದಲಾವಣೆಯೆಂಬುದು ನಮ್ಮಿಂದಲೇ ಆಗಬೇಕಿದ್ದು, ಆಗ ಮಾತ್ರ ಅದನ್ನು ಬೇರೆಯವರಿಗೆ ಹೇಳಲು ಸಾಧ್ಯ ಎಂದು ವಿವೇಕಾನಂದರು ಹೇಳಿದ್ದಾರೆ. ಆ ನಿಟ್ಟಿನಲ್ಲಿ ನಾವು ನುಡಿಯುವ ಹಾಗೂ ನಡೆಯುವ ಕಾರ್ಯ ಒಂದೇ ಆಗಿರಬೇಕು. ದೇಶದ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಂ.ಎನ್‌.ನಟರಾಜ್‌, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಬಿ.ಕೆ.ಲಕ್ಷ್ಮೀಜಿ, ರಾಜಯೋಗ ಶಿಕ್ಷಕಿ ಬಿ.ಕೆ.ಶಾಂಭವಿ, ಬಿ.ಕೆ.ರಾಮಚಂದ್ರರಾವ್‌, ಬಿ.ಕೆ.ಪ್ರಶಾಂತಿಜೀ ಇನ್ನಿತರರು ಹಾಜರಿದ್ದರು.

ಯುವ ಜಾಗೃತಿ ಬಸ್‌ ಪ್ರದರ್ಶನ: ನನ್ನ ಭಾರತ ಸ್ವರ್ಣಿಮ ಭಾರತ ಶೀರ್ಷಿಕೆಯಲ್ಲಿ ದೇಶಾದ್ಯಂತ ಸಂಚರಿಸುತ್ತಿರುವ ಯುವ ಜಾಗೃತಿ ಬಸ್‌ನಲ್ಲಿ ಹಲವು ಮೌಲ್ಯಾಧಾರಿತ ಮಾಹಿತಿ, ಸಂದೇಶ ನೀಡಲಾಗಿದೆ. ಪ್ರಮುಖವಾಗಿ ಅಶೋಕ ಚಕ್ರ, ರೈತ, ಉದ್ಯಮಿ, ಸೈನಿಕ, ವೈದ್ಯ, ಸಂಗೀತ ಹೀಗೆ ದೇಶದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಚಿತ್ರಗಳನ್ನು ಬಸ್‌ನಲ್ಲಿ ಬರೆಯಲಾಗಿದೆ.

ರಾಜಯೋಗ ಧ್ಯಾನದ ಮೂಲಕ ಅಧ್ಯಾತ್ಮಿಕ ಮೌಲ್ಯಗಳ ಅಳವಡಿಕೆ ಮತ್ತು ಉತ್ತಮ ಚಾರಿತ್ರ ನಿರ್ಮಾಣಕ್ಕಾಗಿ ಯುವಜನತೆಯನ್ನು ಹುರಿದುಂಬಿಸುವ ಉದ್ದೇಶದಲ್ಲಿ ಸ್ವತ್ಛ ಭಾರತ, ಅಧ್ಯಾತ್ಮಿಕ ಮೌಲ್ಯಗಳು, ಚಾರಿತ್ರ ನಿರ್ಮಾಣ, ಯೋಗ, ಧ್ಯಾನ, ಸಕಾರಾತ್ಮಕತೆ ಮುಂತಾದ ವಿಷಯಗಳ 12 ಚಿತ್ರಗಳನ್ನು ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next