Advertisement

ಅಖೀಲ ಭಾರತ ಶ್ರೀ ಅಯ್ಯಪ್ಪ ಸೇವಾ ಸಂಘ ಮುಂಬಯಿ ದಶಮಾನೋತ್ಸವ 

04:29 PM Nov 21, 2018 | Team Udayavani |

ಮುಂಬಯಿ: ಇತಿಹಾಸವುಳ್ಳ ಭಕ್ತಿಯ ಪರಂಪರೆ, ಧಾರ್ಮಿಕ ಕಟ್ಟುಕಟ್ಟಳೆಗಳಿಗೆ ವಿಶೇಷ ಮಹತ್ವ ನೀಡುವ ಮೂಲಕ ಸನಾತನ ಧರ್ಮದ ಭಕ್ತಿಯ ಇತಿಹಾಸಕ್ಕೆ ನಾವೆಲ್ಲ ತಲೆಬಾಗಬೇಕು. ಭಕ್ತಿಯಲ್ಲಿ ಭಗವಂತನನ್ನು ಕಾಣಬೇಕಾದಲ್ಲಿ ಕಠಿನ ವ್ರತಾಚರಣೆ ಅಗತ್ಯ. ಆ ಮೂಲಕ ನಾವು ಭಗವಂತನನ್ನು ಸ್ಪಂದಿಸಲು ಸಾಧ್ಯ. ಮನೆಯಿಂದ ದೂರವಿದ್ದು, ಎರಡು ತಿಂಗಳ ಕಾಲ ಕಠಿನ ಶ್ರದ್ಧಾಭಕ್ತಿಯಿಂದ ಅಯ್ಯಪ್ಪನನ್ನು ಆರಾಧಿಸುವ ವ್ರತಧಾರಿಗಳ ಭಕ್ತಿಯ ಸಾಧನೆ, ಧಾರ್ಮಿಕ ಚಿಂತನೆ ಮೆಚ್ಚುವಂಥದ್ದಾಗಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ  ನುಡಿದರು. 

Advertisement

ನ. 18ರಂದು ಘಾಟ್‌ಕೋಪರ್‌ ಪೂರ್ವದ ಜವೇರಿಬೆನ್‌ ಪೋಪಟ್‌ಲಾಲ್‌ ಸಭಾಗೃಹದಲ್ಲಿ ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘ ಮುಂಬಯಿ ಇದರ ದಶಮಾನೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಹಿರಿಯರ ನಂಬಿಕೆಯ ಧರ್ಮಕ್ಕೆ ಮಹತ್ವ ನೀಡುವ ಸಂಸ್ಕಾರ ನಮ್ಮದು. ಆ ಮೂಲಕ ಆಡಂಬರವಿಲ್ಲದ ಭಕ್ತಿಯ ಆಚರಣೆಗೆ ಮಹತ್ವ ನೀಡುವ ಮೂಲಕ ನಮ್ಮ ಆಚಾರ, ವಿಚಾರಗಳಿಗೆ ಮಹತ್ವ ನೀಡಿ ಧಾರ್ಮಿಕತೆಗೆ ಒತ್ತು ನೀಡುವ ಈ ಧಾರ್ಮಿಕ ಸಂಸ್ಥೆಯಿಂದ ಇನ್ನಷ್ಟು ಸಮಾಜ ಸೇವೆ, ಆರೋಗ್ಯ, ಶೈಕ್ಷಣಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿರಲಿ ಎಂದರು. 

ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ ಇವರು ಮಾತನಾಡಿ, ಮಹಾನಗರದಲ್ಲಿ ಧಾರ್ಮಿಕ ಸೇವಾ ಸಂಸ್ಥೆಯಾಗಿ ಹಲವಾರು ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯ ಕಾರ್ಯ ಅಭಿನಂದನೀಯ. ಎರಡು ತಿಂಗಳುಗಳ ಕಾಲ ಅರಿಷಡ್ವರ್ಗಗಳು ಸೇರಿದಂತೆ ದುರ್ಗುಣಗಳನ್ನು ತ್ಯಜಿಸಿ ಭಗವಂತ ಎಂಬ ಒಂದೇ  ಧ್ಯಾನದ ಮೂಲಕ ಪಂಪ ಸಾನ್ನಿಧ್ಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಕಾಣುವ ಅಯ್ಯಪ್ಪ ಭಕ್ತರ ಕಠಿನ ಭಕ್ತಿಯನ್ನು ಮೆಚ್ಚುವಂಥದ್ದಾಗಿದೆ. ಸನ್ನಿಧಾನದ ಅಯ್ಯಪ್ಪ ಸ್ವಾಮಿ ಆಶೀರ್ವಾದದಿಂದ ಈ ಸಂಸ್ಥೆಯ ಸರ್ವ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ನುಡಿದು ಸಂಸ್ಥೆಯ ಪದಾಧಿಕಾರಿಗಳನ್ನು, ಸದಸ್ಯರನ್ನು ಅಭಿನಂದಿಸಿದರು.

ಆಶೀರ್ವಚನ ನೀಡಿದ ಜರಿಮರಿ ಉಮಾಮಹೇಶ್ವರಿ ದೇವಸ್ಥಾನದ ಅರ್ಚಕ ಎಸ್‌. ಎನ್‌. ಉಡುಪ ಅವರು ಮಾತನಾಡಿ, ಶಾಲಾ ಜೀವನದ ಸಹಪಾಠಿಗಳು ಇಂದು ಧಾರ್ಮಿಕ ಚಿಂತನೆಯ ಮೂಲಕ ಸಮಾಜ ಸೇವೆಯಲ್ಲಿ ನಿರತರಾಗಿದ್ದು, ಅದೆಷ್ಟೋ ಅಯ್ಯಪ್ಪ ಭಕ್ತಾದಿಗಳಿಗೆ ಅಯ್ಯಪ್ಪ ದರ್ಶನ ನೀಡಿದ ಸಂಸ್ಥೆಗಳಿಗೆ ಬೆಲೆ ನೀಡದಿದ್ದಲ್ಲಿ ಮುಂದೆ ಧಾರ್ಮಿಕ ನಂಬಿಕೆಗಳಿಗೆ ಬೆಲೆ ಇಲ್ಲದಂತಾಗುತ್ತದೆ. ಭಕ್ತಿಯಲ್ಲಿ ಶ್ರದ್ಧೆ, ನಂಬಿಕೆ, ಕಠಿನ ವ್ರತ ಇದ್ದಲ್ಲಿ ಪ್ರತಿಯೊಬ್ಬ ಭಕ್ತರಿಗೂ ಅಯ್ಯಪ್ಪ ಸ್ವಾಮಿಯ ಅನುಗ್ರಹ ಶ್ರೇಯಸ್ಸು ದೊರೆಯುತ್ತದೆ ಎಂದು ನುಡಿದು ಶುಭಹಾರೈಸಿದರು. 
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟÅ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಇವರು ಮಾತನಾಡಿ, ಧಾರ್ಮಿಕ ಸಮಾನತೆಯ ಬಗ್ಗೆ ಚಿಂತಿಸುವ ನಾವು ಕಟ್ಟುಪಾಡುಗಳ ಬಗ್ಗೆ ಮಾತನಾಡುತ್ತೇವೆ. ಧಾರ್ಮಿಕ ಚಿಂತನೆಯಲ್ಲಿ ಕಟ್ಟುಪಾಡು, ಅನ್ಯಾಯ, ಅನಾಚಾರ, ರಕ್ತಪಾತ ತಪ್ಪು. ಹಸಿವಿನ ಹಿಂದಿನ ಒಂದು ಮಹತ್ವದ ಕೆಲಸವೆಂದರೆ ಅದು ಅನ್ನದಾನ. ಪ್ರತಿಯೋರ್ವ ವ್ಯಕ್ತಿಗೂ ಹಸಿವಿನಲ್ಲಿ ನೆಮ್ಮದಿ ದೊರೆಯುತ್ತದೆ. ಇಂತಹ ಅನ್ನದಾನ ಸೇವೆ ಈ ಸಂಸ್ಥೆಯಿಂದ ನಡೆಯುತ್ತಿರುವುದು ಅಭಿನಂದನೀಯ ಎಂದರು. 
ಅಧ್ಯಕ್ಷತೆ ವಹಿಸಿದ್ದ ಪದ್ಮನಾಭ ಎಸ್‌. ಪಯ್ಯಡೆ ಇವರು ಕಲಶದಲ್ಲಿರಿಸಿದ ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. 

ಸರೋಜಾ ಶೆಟ್ಟಿ ಪ್ರಾರ್ಥನೆಗೈದರು. ಅತಿಥಿಗಳನ್ನು ಸಂಸ್ಥೆಯ ಅಧ್ಯಕ್ಷ ಉದಯ ಎಲ್‌. ಶೆಟ್ಟಿ ಪೇಜಾವರ, ಉಪಾಧ್ಯಕ್ಷ ಪೂವಪ್ಪ ಎ. ಪೂಜಾರಿ, ಕೋಶಾಧಿಕಾರಿ ರಾಜೇಶ್‌ ಬಂಗೇರ, ಕಾರ್ಯದರ್ಶಿ ಕೃಷ್ಣ ಎಂ. ಪೂಜಾರಿ, ಪ್ರೇಮನಾಥ ಪುತ್ರನ್‌, ಸಂತೋಷ್‌ ವಂಡ್ಸೆ, ಪ್ರವೀಣ್‌ ವಿ. ಶೆಟ್ಟಿ, ರಮ್ಯಾ ಉದಯ್‌ ಶೆಟ್ಟಿ, ಸದಾನಂದ, ರಾಜೇಶ್‌ ಬಂಗೇರ, ಯುಗಾನಂದ ಶೆಟ್ಟಿ ಮೊದಲಾದ ಸದಸ್ಯರು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. 

Advertisement

ಉದ್ಯಮಿಗಳಾದ ಗೋಪಾಲ ಪುತ್ರನ್‌, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಆರ್‌. ಸಿ. ಶೆಟ್ಟಿ, ಸಂಜೀವ ಶೆಟ್ಟಿ, ಸುರೇಶ್‌ ಶೆಟ್ಟಿ ಶಿಬರೂರು, ನವೀನ್‌ ಚಂದ್ರ ಸನಿಲ್‌, ಜಯಪ್ರಕಾಶ್‌ ಶೆಟ್ಟಿ, ಶ್ರೀನಿವಾಸ ಗುರುಸ್ವಾಮಿ, ಜೊತೆ ಕೋಶಾಧಿಕಾರಿ ಸುರೇಶ್‌ ಪಾಟ್ಕರ್‌, ರವೀಂದ್ರನಾಥ ಭಂಡಾರಿ ವೇದಿಕೆಯಲ್ಲಿ ಅತಿಥಿಗಳಾಗಿ ಶುಭಹಾರೈಸಿದರು. 

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ನವೀಲ್‌ ಡಿ. ಪಡೀಲ್‌ ನಿರ್ದೇಶನ, ಸುಂದರ್‌ ರೈ ಮಂದಾರ ಅಭಿನಯದ ಬಂಜಿಗ್‌ ಹಾಕೊಡಿc ನಾಟಕ ಪ್ರದರ್ಶನಗೊಂಡಿತು. ಸಂಸ್ಥೆಗೆ ಸಹಕಾರ ನೀಡಿದ ದಾನಿಗಳನ್ನು, ಗಣ್ಯರನ್ನು ಗೌರವಿಸಲಾಯಿತು. ಅಶೋಕ್‌ ಪಕ್ಕಳ ಸ್ವಾಗತಿಸಿ, ಸಮ್ಮಾನ ಪತ್ರ ವಾಚಿಸಿ, ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸಂತೋಷ್‌ ಕೆ. ಪೂಜಾರಿ ವಂದಿಸಿದರು. ಅನ್ನಸಂತರ್ಪಣೆ ನಡೆಯಿತು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಹಿರಿಯ ಗುರುಸ್ವಾಮಿ ಶ್ರೀನಿವಾಸ್‌ ಅವರ ಮಾರ್ಗದರ್ಶನದಿಂದ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರ ಜತೆಗೆ ಪ್ರತೀ ವರ್ಷ ನಾಟಕ ಪ್ರದರ್ಶನವನ್ನು ಆಯೋಜಿಸಿ ಊರಿನ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಅನ್ನದಾನ, ಶೈಕ್ಷಣಿಕ ನೆರವು, ವೈದ್ಯಕೀಯ ಇನ್ನಿತರ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಪ್ರಶಂಸೆಗೆ ಸಂಸ್ಥೆಯು ಪಾತ್ರವಾಗಿದೆ. ಆರ್ಥಿಕವಾಗಿ ಹಿಂದುಳಿದ ಅಯ್ಯಪ್ಪ  ವ್ರತಧಾರಿಗಳನ್ನು ಶಬರಿಮಲೆ ಯಾತ್ರೆಗಳಿಗೆ ಉಚಿತವಾಗಿ ಕರೆದೊಯ್ಯುವ ಕಾರ್ಯವನ್ನು ಸಂಸ್ಥೆಯ ಮಾಡುತ್ತಿದೆ. ಇದರ ಸದುಪಯೋಗವನ್ನು ವ್ರತಧಾರಿಗಳು ಪಡೆದುಕೊಳ್ಳಬಹುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಗೌರವಿಸುವ ಕಾರ್ಯದಲ್ಲೂ ಸಂಸ್ಥೆಯು ತೊಡಗಿದೆ. ಸಂಸ್ಥೆಯ ಸಮಾಜಪರ ಕಾರ್ಯಗಳಿಗೆ ಎಲ್ಲರ ಸಹಕಾರ ಸದಾಯಿರಲಿೆ.
ಉದಯ ಎಲ್‌. ಶೆಟ್ಟಿ ಪೇಜಾವರ, 
ಅಧ್ಯಕ್ಷರು, ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘ ಮುಂಬಯಿ

ಚಿತ್ರ-ವರದಿ : ರಮೇಶ್‌ ಉದ್ಯಾವರ 

Advertisement

Udayavani is now on Telegram. Click here to join our channel and stay updated with the latest news.

Next