Advertisement
ಈ ಕೂಟದ ಮೊದಲ ಅತಿಥೇಯ ರಾಷ್ಟ್ರ ಲೆಬನಾನ್ ಹಿಂದೆ ಸರಿದ ಕಾರಣ ಭಾರತ ಆತಿಥ್ಯ ವಹಿಸಿಕೊಳ್ಳಲು ಒಪ್ಪಿತ್ತು. ಆದರೆ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪಾಕಿಸ್ಥಾನ ಶೂಟರ್‌ಗಳಿಗೆ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಭಾರತ ವೀಸಾ ನಿರಾಕರಿಸಿತ್ತು. ಭಾರತದ ಈ ನಡೆಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಎ) ಖಂಡಿಸಿ, ಭಾರತಕ್ಕೆ ಯಾವುದೇ ವಿಶ್ವ ಮಟ್ಟದ ಕ್ರೀಡಾಕೂಟಗಳ ಅಯೋಜನೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿತ್ತು. ಐಒಎ ನಡೆಯನ್ನು ಅನುಸರಿಸಿರುವ ಯುಡಬ್ಲ್ಯುಡಬ್ಲ್ಯು ಭಾರತೀಯ ಕುಸ್ತಿ ಫೆಡರೇಶನ್‌ನೊಂದಿಗೆ (ಡಬ್ಲ್ಯುಎಫ್ಐ) ಎಲ್ಲ ಸಂಪರ್ಕವನ್ನು ಕಡಿದುಕೊಳ್ಳಲು ನಿರ್ಧರಿಸಿ, ಜೂನಿಯರ್ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಆತಿಥ್ಯವನ್ನು ಕಸಿದುಕೊಂಡಿದೆ.
“ಜೂನಿಯರ್ ಏಶ್ಯನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯನ್ನು ಭಾರತ ದಿಂದ ಥಾಯ್ಲೆಂಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಯುಡಬ್ಲ್ಯು ಡಬ್ಲ್ಯು ಈಗಾಗಲೇ ತಿಳಿಸಿದೆ. ಈ ಕೂಟದ ಆಯೋಜನೆಗೆ ನಾವು ಬಿಡ್ ಮಾಡಿರಲಿಲ್ಲ. ಯುಡಬ್ಲ್ಯುಡಬ್ಲ್ಯು-ಏಶ್ಯದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದೆವು. ಆದರೆ ಮುಂದಿನ ವರ್ಷ ನಾವು ಆಯೋಜಿಸಬೇಕು ಎಂದುಕೊಂಡಿರುವ ಪ್ರಮುಖ ಕೂಟಗಳಿಗೆ ಇದು ಸಮಸ್ಯೆ ತಂದೊಡ್ಡಲಿದೆ. ಸರಕಾರ ಇದರ ಬಗ್ಗೆ ಗಮನ ಹರಿಸಬೇಕು. ಆದರೆ ಲೋಕಸಭಾ ಚುನಾವಣೆಯ ಮುನ್ನ ಈ ಸಮಸ್ಯೆ ಬಗೆಹರಿಯಬಹುದೆಂಬ ನಿರೀಕ್ಷೆಯಿಲ್ಲ’ ಎಂದು ಡಬ್ಲ್ಯುಎಫ್ಐನ ಜತೆ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.