Advertisement

ಅಜಿಂಕ್ಯ ರಹಾನೆ ಬಳಗಕ್ಕೆ ಕಾದಿದೆ ಕಾನ್ಪುರ ಟೆಸ್ಟ್‌

12:00 AM Nov 25, 2021 | Team Udayavani |

ಕಾನ್ಪುರ: ಟಿ20 ವಿಶ್ವಕಪ್‌ ರನ್ನರ್ ಅಪ್‌ ನ್ಯೂಜಿಲ್ಯಾಂಡ್‌ಗೆ 3-0 ವೈಟ್‌ವಾಶ್‌ ಮಾಡಿದ ಉತ್ಸಾಹದಲ್ಲಿರುವ ಭಾರತಕ್ಕೆ ಗುರುವಾರದಿಂದ ನಿಜವಾದ ಪರೀಕ್ಷೆ ಎದುರಾಗಲಿದೆ.

Advertisement

ವಿಶ್ವ ಟೆಸ್ಟ್‌ ಚಾಂಪಿಯನ್‌ ಖ್ಯಾತಿಯ ತಂಡದೆದುರು ಕಾನ್ಪುರದ “ಗ್ರೀನ್‌ ಪಾರ್ಕ್‌’ ಅಂಗಳದಲ್ಲಿ ಮೊದಲ ಟೆಸ್ಟ್‌ ಆರಂಭವಾಗಲಿದ್ದು, ಟೀಮ್‌ ಇಂಡಿಯಾ ಎಂತಹ ಪ್ರದರ್ಶನ ನೀಡಿತು ಎಂಬುದು ಎಲ್ಲರ ಕುತೂಹಲ.

ಹಾಗೆಯೇ ರಾಹುಲ್‌ ದ್ರಾವಿಡ್‌-ಅಜಿಂಕ್ಯ ರಹಾನೆ ಕಾಂಬಿನೇಶನ್‌ ಯಾವ ರೀತಿಯ ಮ್ಯಾಜಿಕ್‌ ಮಾಡೀತೆಂಬ ನಿರೀಕ್ಷೆಯೂ ತೀವ್ರಗೊಂಡಿದೆ.

ಕಳೆದ ಕೆಲವು ತಿಂಗಳಿಂದ ಬರೀ ಟಿ20 ಪಂದ್ಯಗಳನ್ನೇ ಆಡುತ್ತ ಬಂದಿರುವ ಆಟಗಾರರು ಇಲ್ಲಿ ಟೆಸ್ಟ್‌ ಮಾದರಿಗೆ ಹೊಂದಿ ಕೊಳ್ಳಬೇಕಿದೆ. ಹಾಗೆಯೇ ಟಿ20ಯ ಯಾವುದೇ ಯಶಸ್ಸು ಟೆಸ್ಟ್‌ ಕ್ರಿಕೆಟಿಗೆ ಅನ್ವಯವಾಗದೆಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕಿದೆ. ಅದು ಹೊಡಿಬಡಿ ಆಟವಾದರೆ, ಇದು ನಿಂತು ಆಡುವ ಆಟ. ಸಹನೆ, ತಾಳ್ಮೆ, ಏಕಾಗ್ರತೆ ಬಹಳ ಮುಖ್ಯ. ಭಾರತದ ಆಟಗಾರರಿಗೆ ಇದನ್ನು ಹೇಳಿಕೊಡಲು ದ್ರಾವಿಡ್‌ ಇದ್ದಾರೆಂಬುದು ಸಮಾಧಾನದ ಸಂಗತಿ.

ವಿಲಿಯಮ್ಸನ್‌ ಆಗಮನ
ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಟಿ20 ಸರಣಿಯ ತಂಡಗಳನ್ನೇ ಉಲ್ಲೇಖೀಸುವುದಾದರೆ, ಇವೆರಡೂ ವಿಭಿನ್ನ ಸಾಮರ್ಥ್ಯ ಹೊಂದಿರುವುದನ್ನು ಗಮನಿಸಬೇಕು. ಭಾರತದ ಟಿ20 ತಂಡ ಅತ್ಯಂತ ಸಮತೋಲವಾಗಿತ್ತು. ಇನ್ನೊಂದೆಡೆ ನ್ಯೂಜಿಲ್ಯಾಂಡ್‌ ಟೆಸ್ಟ್‌ ಸರಣಿಯ ಅಭ್ಯಾಸಕ್ಕೆಂದೇ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿತು. ನಾಯಕ ಕೇನ್‌ ವಿಲಿಯಮ್ಸನ್‌ ಕೂಡ ಇವರಲ್ಲೊಬ್ಬರು. ಹಾಗೇಯೇ ವೇಗಿ ಕೈಲ್‌ ಜಾಮೀಸನ್‌ ಕೂಡ ಟಿ20 ಆಡಿರಲಿಲ್ಲ. ಇದೀಗ ವಿಲಿಯಮ್ಸನ್‌, ಜಾಮೀಸನ್‌ ಪುನರಾಗಮನ ಆಗುತ್ತಿದೆ. ಪ್ರವಾಸಿಗರ ಟೆಸ್ಟ್‌ ಟೀಮ್‌ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ.

Advertisement

ತ್ರಿವಳಿ ಸ್ಪಿನ್‌ ದಾಳಿ
ಬ್ಯಾಟಿಂಗಿಗೆ ಹೋಲಿಸಿದರೆ ಭಾರತದ ಬೌಲಿಂಗ್‌ ಹೆಚ್ಚು ಬಲಿಷ್ಠ ಎನ್ನಲಡ್ಡಿಯಿಲ್ಲ. ಅಶ್ವಿ‌ನ್‌, ಜಡೇಜ ಮತ್ತು ಅಕ್ಷರ್‌ ಪಟೇಲ್‌ ಅವರನ್ನು ಹೊಂದಿರುವ ಸ್ಪಿನ್‌ ವಿಭಾಗವೇ ಟೀಮ್‌ ಇಂಡಿಯಾದ ಟ್ರಂಪ್‌ಕಾರ್ಡ್‌. ಗ್ರೀನ್‌ಪಾರ್ಕ್‌ ಟ್ರ್ಯಾಕ್‌ ಸ್ಪಿನ್ನಿಗೆ ತಿರುಗಿದರೆ, ನ್ಯೂಜಿಲ್ಯಾಂಡ್‌ ಬ್ಯಾಟ್ಸ್‌ಮನ್‌ ಸ್ಪಿನ್ನಿಗೆ ತಿಣುಕಾಡಿದರೆ ಭಾರತದ ಮೇಲುಗೈ ಬಗ್ಗೆ ಅನುಮಾನವೇ ಬೇಡ. ಆದರೂ ವಿಲಿಯಮ್ಸನ್‌, ರಾಸ್‌ ಟೇಲರ್‌, ಲ್ಯಾಥಂ ಬಗ್ಗೆ ಎಚ್ಚರ ಅಗತ್ಯ.

ಇದನ್ನೂ ಓದಿ:ಬೆಳೆನಷ್ಟಕ್ಕೆ ಪ್ರತಿ ಎಕರೆಗೆ 10 ಸಾವಿರ ರೂ. ಪರಿಹಾರಕ್ಕೆ ಡಿಕೆಶಿ ಆಗ್ರಹ

ನ್ಯೂಜಿಲ್ಯಾಂಡ್‌ ತ್ರಿವಳಿ ಸ್ಪಿನ್ನರ್‌ಗಳನ್ನು ದಾಳಿಗೆ ಇಳಿಸಲಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಭಾರತದ ಬ್ಯಾಟ್ಸ್‌ಮನ್‌ಗಳು ಸ್ಪಿನ್ನನ್ನು ಚೆನ್ನಾಗಿಯೇ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿರುವುದರಿಂದ ಇದೇನೂ ಆತಂಕದ ಸಂಗತಿಯಲ್ಲ.

ನ್ಯೂಜಿಲ್ಯಾಂಡ್‌ ಭಾರತವನ್ನು ಸೋಲಿಸುವ ಮೂಲಕವೇ ಚೊಚ್ಚಲ ಐಸಿಸಿ ಟೆಸ್ಟ್‌ ಚಾಂಪಿಯನ್‌ ಆಗಿತ್ತೆಂಬುದನ್ನು ಮರೆಯುವಂತಿಲ್ಲ. ಡ್ರಾ ಮಾಡಿಕೊಳ್ಳಬಹುದಾದ ಈ ಪಂದ್ಯದಲ್ಲಿ ಕೊಹ್ಲಿ ಪಡೆ ಹೀನಾಯ ಸೋಲನುಭವಿಸಿತ್ತು. ಇದಕ್ಕೀಗ ಸೇಡು ತೀರಿಸಿಕೊಳ್ಳಬೇಕಿದೆ.

ರಹಾನೆ ಫಾರ್ಮ್ ಚಿಂತೆ
ಭಾರತ ತಂಡದಿಂದ ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ಬೇರ್ಪಟ್ಟಿದ್ದಾರೆ. ತಂಡದ ಸಾಮರ್ಥ್ಯ ಅಷ್ಟರ ಮಟ್ಟಿಗೆ ಕುಂಠಿತಗೊಂಡಿದೆ. ಹಾಗೆಯೇ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಫಾರ್ಮ್ ಬಗ್ಗೆ ಇನ್ನೂ ಖಚಿತವಾಗಿ ಏನೂ ಹೇಳುವಂತಿಲ್ಲ. ಅವರ ನೆಟ್‌ ಪ್ಯಾಕ್ಟೀಸ್‌ ಕೂಡ ಗಮನಾರ್ಹ ಮಟ್ಟದಲ್ಲಿರಲಿಲ್ಲ. ಜಯಂತ್‌ ಯಾದವ್‌ ಎಸೆತಕ್ಕೆ ಬೌಲ್ಡ್‌ ಆದರೆ, ಪ್ರಸಿದ್ಧ್ ಕೃಷ್ಣ ಎಸೆತವನ್ನು ಕ್ಯಾಚ್‌ ನೀಡಿದ್ದರು. ನೆಟ್‌ ಬೌಲರ್‌ ಶಿವಂ ಮಾವಿ ಅವರ ಬೌನ್ಸರ್‌ ಒಂದು ಎದೆಗೆ ಬಡಿದಿತ್ತು. ಹೀಗಾಗಿ ರಹಾನೆ ಪಾಲಿಗೆ ಬ್ಯಾಟಿಂಗ್‌ ಎನ್ನುವುದು ದೊಡ್ಡ ಸವಾಲಾಗಿ ಕಾಡಬಹುದು ಎಂಬ ಭೀತಿ ಇದೆ. ಆದರೆ ರಹಾನೆ ಲಕ್ಕಿ ಕ್ಯಾಪ್ಟನ್‌ ಎಂಬುದು ಸಾಬೀತಾಗಿದೆ.

ಅಗರ್ವಾಲ್‌-ಗಿಲ್‌ ಅವರ ಆರಂಭ, ಟೆಸ್ಟ್‌ ಸ್ಪೆಷಲಿಸ್ಟ್‌ ಪೂಜಾರ ಅವರ ಫಾರ್ಮ್ ಭಾರತದ ಸರಣಿ ಭವಿಷ್ಯವನ್ನು ನಿರ್ಧರಿಸಲಿದೆ. ಇವರೆಲ್ಲ ಸೌಥಿ, ವ್ಯಾಗ್ನರ್‌, ಜಾಮೀಸನ್‌ ದಾಳಿಯನ್ನು ತಡೆದು ನಿಲ್ಲುವುದು ಮುಖ್ಯ.

Advertisement

Udayavani is now on Telegram. Click here to join our channel and stay updated with the latest news.

Next