Advertisement
ಈಗಾಗಲೇ ದೇಶದ 16 ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ ರಾಜ್ಯದಲ್ಲಿಯೂ ಏಕರೂಪದ ಸಹಾಯವಾಣಿ ಕೇಂದ್ರ ಆರಂಭಿಸುವುದರ ಜತೆಗೆ ಪ್ರಸ್ತುತವಿರುವ 100(ಪೊಲೀಸ್ ಸಹಾಯವಾಣಿ), 101(ಅಗ್ನಿಶಾಮಕ ದಳ), 108 (ಆ್ಯಂಬುಲೆನ್ಸ್) ರಂತೆಯೇ “112′ ನಂಬರ್ ಕಾರ್ಯ ನಿರ್ವಹಿಸಲಿದೆ.
Related Articles
Advertisement
ಪ್ರಾಯೋಗಿಕ ಕಾರ್ಯಾಚರಣೆ: ಜುಲೈ ಮೊದಲ ಅಥವಾ ಎರಡನೇ ವಾರದಿಂದ ಪ್ರಾಯೋಗಿಕವಾಗಿ ಇದರ ಕಾರ್ಯಾಚರಣೆ ಆರಂಭಿಸಲಾಗುತ್ತದೆ. ಮೊದಲಿಗೆ ಪೊಲೀಸ್ ಸಹಾಯವಾಣಿ ಸಂಖ್ಯೆ 100ನ್ನು ಮಾತ್ರ 112 ಜತೆ ಹೊಂದಾಣಿಕೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ 101, 108 ಮತ್ತು 1098 (ಮಕ್ಕಳ ಸಹಾಯವಾಣಿ),
1090(ಮಹಿಳಾ ಸಹಾಯವಾಣಿ) ಸೇರಿ ಇತರ ತುರ್ತು ಸೇವೆಗಳ ಸಹಾಯವಾಣಿ ಸಂಖ್ಯೆಗಳನ್ನು ಜೋಡಣೆ ಮಾಡಲಾಗುತ್ತದೆ. 112 ಈ ಸಂಖ್ಯೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಸುಲಭ. ಯಾವುದೇ ಸಮಸ್ಯೆ ಎದುರಾದಾಗ ಅಥವಾ ತುರ್ತು ಸಂದರ್ಭಗಳಲ್ಲಿ ಜನರು ಈ ಸಂಖ್ಯೆಗೆ ಕರೆ ಮಾಡಬಹುದೆಂದು ಅಧಿಕಾರಿ ವಿವರಿಸಿದರು.
ಸಿಬ್ಬಂದಿಗೆ ಸೂಕ್ತ ತರಬೇತಿ: ಪೊಲೀಸ್ ಸಂವಹನ, ಲಾಜಿಸ್ಟಿಕ್ ಮತ್ತು ಆಧುನೀಕರಣ ಕೇಂದ್ರದ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಈಗಾಗಲೇ ಯೋಜನಾ ಕಾರ್ಯ ನಡೆಯುತ್ತಿದೆ. ಈ ಹಿಂದಿನ ನಗರ ಪೊಲೀಸ್ ಆಯುಕ್ತ, ಎಡಿಜಿಪಿ ಟಿ.ಸುನಿಲ್ ಕುಮಾರ್ ಸಹ ಕಾರ್ಯ ನಿರ್ವಹಣೆ ಬಗ್ಗೆ ಪರಿಶೀಲಿಸಿದ್ದರು.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಡಿಎಸಿ (ಸೆಂಟರ್ ಆಫ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್), ನಿಯಂತ್ರಣ ಕೊಠಡಿಯ ತಾಂತ್ರಿಕ ನಿರ್ವಹಣೆ ಮಾಡುತ್ತದೆ. ಎಲ್ಲ ತುರ್ತು ಸೇವೆಗಳ ಸಹಾಯವಾಣಿ ನಂಬರ್‌ಗಳನ್ನು ಒಂದೇ ನಂಬರ್‌ಗೆ ಜೋಡಣೆ ಮಾಡಿದ ಬಳಿಕ ಅದನ್ನು ಸಮರ್ಪಕವಾಗಿ ನಿರ್ವಹಿಸಲು ನಿಯಂತ್ರಣ ಕೊಠಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನಿಸ್ತಂತು (ವೈರ್‌ಲೆಸ್) ವಿಭಾಗದ ಹಿರಿಯ ಅಧಿಕಾರಿಗಳಿಂದ ಸೂಕ್ತ ತರಬೇತಿ ಕೊಡಲಾಗುತ್ತದೆ.
ದೂರುಗಳನ್ನು ಸ್ವೀಕರಿಸುವ ಆಪರೇಟರ್‌ಗಳು ಇತರ ಇಲಾಖೆಯ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಜತೆ ಹೇಗೆ ವ್ಯವಹರಿಸಬೇಕು?, ಯಾವ ರೀತಿ ಸ್ಪಂದಿಸಬೇಕು? ಎಂಬೆಲ್ಲ ಮಾಹಿತಿಯನ್ನು ತರಬೇತಿ ಮೂಲಕ ನೀಡಲಾಗುತ್ತದೆ. ಹೊಸದಾಗಿ ಸಿದ್ದವಾಗುತ್ತಿರುವ ನಿಯಂತ್ರಣ ಕೊಠಡಿಯಲ್ಲಿ 24/7 ಅಂತೆ ಪ್ರತಿ ಪಾಳಿಯಲ್ಲಿ 50-60 ಮಂದಿ ಕಾರ್ಯ ನಿರ್ವಹಿಸಲಿದ್ದು, ಕರೆ ಸ್ವೀಕರಿಸುವ ಸಿಬ್ಬಂದಿ ಇತರ ಇಲಾಖೆಗೆ ಕರೆ ಹಸ್ತಾಂತರಿಸಿ, ಕೇವಲ 7-8 ನಿಮಿಷಗಳಲ್ಲಿ ಸೇವೆ ಒದಗಿಸಲಿದ್ದಾರೆ. ಭವಿಷ್ಯದಲ್ಲಿ ಅದನ್ನು ಕೇವಲ ಒಂದೆರಡು ನಿಮಿಷಕ್ಕೆ ಕಡಿತ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಒಬ್ಬ ವ್ಯಕ್ತಿಗೆ ಏಕಕಾಲದಲ್ಲಿ ಪೊಲೀಸ್ ಹಾಗೂ ಆ್ಯಂಬುಲೆನ್ಸ್ ಸೇವೆ ಅಗತ್ಯವಿದ್ದರೆ, ಎರಡರಿಂದ ಮೂರು ಸಂಖ್ಯೆಗಳಿಗೆ ಕರೆ ಮಾಡುವ ಬದಲು ಒಂದೇ ಸಂಖ್ಯೆಗೆ ಕರೆ ಮಾಡಿ ಎರಡೂ ಸೇವೆಗಳನ್ನು ಪಡೆಯಬಹುದು ಎಂದು ಅಧಿಕಾರಿ ಹೇಳಿದರು.
ಎಂಡಿಟಿ ಅಳವಡಿಕೆ: ಪ್ರತಿ ಜಿಲ್ಲೆಯಲ್ಲೂ ತುರ್ತು ಸೇವೆಗಳ ವಾಹನಗಳಿದ್ದು, ಪ್ರತಿ ವಾಹನದಲ್ಲೂ ಮೊಬೈಲ್ ಡೇಟಾ ಟರ್ಮಿನಲ್(ಎಂಡಿಟಿ) ಇರುತ್ತದೆ. ಅದು ಪೊಲೀಸರಿಗೆ ಜಿಪಿಎಸ್ ಮೂಲಕ ಸಮೀಪದಲ್ಲಿರುವ ವಾಹನದ ಬಗ್ಗೆ ಮಾಹಿತಿ ನೀಡುತ್ತದೆ. ಹೀಗಾಗಿ, ಕೂಡಲೇ ವಾಹನ ಸ್ಥಳಕ್ಕೆ ತಲುಪಲು ಸಹಾಯ ಆಗುತ್ತದೆ. ಇದರಿಂದ ಸಮಯದ ಉಳಿತಾಯವೂ ಆಗುತ್ತದೆ ಎಂದು ಅಧಿಕಾರಿ ವಿವರಿಸಿದರು.
* ಮೋಹನ್ ಭದ್ರಾವತಿ