Advertisement
ಸುಮ್ಮನೆ ಯೋಚಿಸಿ- ದಿನದಲ್ಲಿ ಮಹಿಳೆ ಬಿಡುವುದು ಮಾಡಿಕೊಳ್ಳುವುದು ಯಾವಾಗ? ಎಲ್ಲರೂ ಹೋದ ಮೇಲೆ ಒಂದು ಲೋಟ ಚಹಾ ಹಿಡಿದು ಕುರ್ಚಿಯಲ್ಲಿ ಕೂರುವುದೆಂದರೆ ಅದೊಂದು ದಿವ್ಯ ಸಮಾಧಿಯೋಗ. ಇಂಥ ಯೋಗ ಮನೆಯಲ್ಲಿ ಉಳಿಯುವ ಮಹಿಳೆಯರಿಗೆ ಮಾತ್ರ. ಅಷ್ಟರಲ್ಲಿ ಅವಳಿಗೆ ಕಿಟಕಿಯಲ್ಲಿ ಧೂಳು ಕೂತಿರುವುದು ಕಾಣಿಸುತ್ತದೆ. ಅದನ್ನು ಒರೆಸಿ ಬಿಡೋಣ ಅಂಥ ಏಳುವಷ್ಟರಲ್ಲಿ ರಾಶಿಬಿದ್ದ ಬಿಟ್ಟೆಗಳು ನೆನಪಾಗುತ್ತವೆ. ಆ ಬಳಿಕ ಪಾತ್ರೆ ತೊಳೆಯುವುದು… ಹೀಗೆ ಇದೊಂದು ನಿತ್ಯ ಧಾರಾವಾಹಿ. ಮರುದಿನ ಬೆಳಗ್ಗೆ ಮತ್ತೆ ಚಹಾ ಕುಡಿಯುತ್ತ ಧ್ಯಾನಭಂಗಿಯಲ್ಲಿÉ ಕುಳಿತಿರುವಾಗ ಕಣ್ಣು ಫ್ಯಾನ್ ಕಡೆಗೆ ಹೋಗುತ್ತದೆ. ಫ್ಯಾನ್‌ನ ರೆಕ್ಕೆಗಳು ಕಪ್ಪಾಗಿವೆ. ಒಂದೇ ಒಂದು ರಜಾದಿನವಾದ ಭಾನುವಾರ ಗಂಡನಲ್ಲಿ ಹೇಳಿದರೆ, “ಇರಲಿ ಬಿಡೆ, ಮತ್ತೆ ಮಾಡುತ್ತೇನೆ’ ಎಂದು ಸಾಗಹಾಕುತ್ತಾನೆ. ಮಕ್ಕಳು ಅವರವರ ಹೋಮ್‌ವರ್ಕ್‌ನಲ್ಲಿಯೋ ಟಿವಿ ನೋಡುವುದರಲ್ಲೋ ಬಿಝಿ. ಉದ್ಯೋಗಿ ಮಹಿಳೆಯಾದರೆ ಅವಳಿಗೆ ನಿಜವಾದ ಬಿಡುವು ಇರುವುದು ರಸ್ತೆಯ ನಡುವೆ ಮಾತ್ರ! ಮನೆಗೆ ಹೋದರೆ ರಾಶಿಬಿದ್ದ ಪಾತ್ರೆಗಳು ಕಾಣಿಸುತ್ತವೆ, ಆಫೀಸಿಗೆ ಹೋದರೆ ಝಿಂಕ್‌ನಲ್ಲಿ ರಾಶಿಬಿದ್ದ ಫೈಲುಗಳು ಕಾಣಿಸುತ್ತವೆ. ಗಂಡ ಮನೆಗೆ ಬಂದವನೇ, “ಒಂಚೂರು ಕ್ಲೀನ್ ಇಟ್ಕೊàಬಾರದಾ? ಪಕ್ಕನೆ ಯಾರಾದರೂ ನೆಂಟರು ಬಂದರೆ!’ ಎಂದು ಸೂಚನೆ ಕೊಡುತ್ತಾನೆ. ಆದರೆ, ಎಲ್ಲರೂ ಸಾಕ್ಸ್‌ನಿಂದ ಅಂಗಿಯವರೆಗೆ ತೆಗೆದು ಮೂಲೆಯಲ್ಲಿ ಬಿಸಾಕುತ್ತಾರೆಯೇ ವಿನಾ ಒಪ್ಪವಾಗಿ ಜೋಡಿಸಿಡುವುದಿಲ್ಲ. ಕಚೇರಿಯಿಂದ ಬಂದ ಮಹಿಳೆಗೆ ಕೆಲಸ ಪರಂಪರೆಗಳೇ ಕಣ್ಣೆದುರು ಕಾಣಿಸಿ ಕಂಗಾಲಾಗುತ್ತಾಳೆ.
“ನಾಳೆ ನಮಗೆ ರಜೆ’ ಎನ್ನುತ್ತವೆ ಮಕ್ಕಳು. “ನಾಳೆ ನನಗೂ ಕೆಲಸಕ್ಕೆ ಹೋಗುವುದಕ್ಕಿಲ್ಲ’ ಎನ್ನುತ್ತಾನೆ ಗಂಡ. ಎಲ್ಲರಿಗೂ ರಜೆ ಇದೆ, ಮನೆಯ ಯಜಮಾನಿಗೆ ರಜೆ ಯಾವಾಗ? ಗೃಹಿಣಿಗೆ ರಜೆಯೇ ಇಲ್ಲ. ರಜೆ ಮಾಡಿದರೆ ಉಳಿದವರಿಗೆ ಊಟವಿಲ್ಲ. ಉದ್ಯೋಗಿ ಮಹಿಳೆ ಕಚೇರಿಯ ಕೆಲಸಕ್ಕೆ ರಜೆ ಹಾಕಿದರೂ ಮನೆಯಲ್ಲಿ ಬಿಡುವಿಲ್ಲ. ಯಾಕೋ ಒಬ್ಟಾಕೆ ಗೆಳತಿಯೊಂದಿಗೆ ಹೇಳುತ್ತಿದ್ದಳು, “”ನಮ್ಮ ಅಮ್ಮ-ಅಜ್ಜಿಯಂದಿರಿಗಾದರೆ ತಿಂಗಳಲ್ಲಿ ಮೂರು ದಿನ ರಜೆ ಇರುತ್ತಿತ್ತು. ಅಡುಗೆ ಮಾಡಬಾರದು, ದೇವರ ಕೋಣೆಗೆ ಹೋಗಬಾರದು, ಬಾವಿಯನ್ನು ಮುಟ್ಟಬಾರದು ಎಂದು ಅವರು ಮನೆಯ ಹೊರಗಿನ ಕೋಣೆಯಲ್ಲಿ ಕುಳಿತು ಆರಾಮ ಮಾಡಿಕೊಳ್ಳುತ್ತಿದ್ದರು. ಈಗ ಅದೂ ಇಲ್ಲ. ವೈಚಾರಿಕತೆಯ ಹೆಸರಿನಲ್ಲಿ ಮೂರು ದಿನದ ರಜೆಯನ್ನು ಕಿತ್ತು ಹಾಕಿದ್ದಾರೆ!” ಎಲ್ಲ ಸಂಗತಿಗಳಿಗೆ ಎರಡು ಮುಖಗಳಿರುತ್ತವೆ. ವಿಚಾರ, ವಿಜ್ಞಾನ ಎಂದೆಲ್ಲ ಯೋಚಿಸಿ ಮಹಿಳೆಯನ್ನು ಮುಕ್ತಗೊಳಿಸುವ ಔದಾರ್ಯವನ್ನು ಸಮಾಜ ತೋರಿಸುತ್ತದೆ. ಆದರೆ, ಅದೇ ಆಕೆಯ ಮುಕ್ತತೆಗೆ ಮುಳುವಾಗುತ್ತದೆ. ಇಷ್ಟಕ್ಕೂ ಮುಕ್ತತೆ ಎಂದರೇನು?
ಮಹಿಳೆ ಸ್ವಾತಂತ್ರ್ಯವನ್ನು ಬಯಸಿ ಸ್ವಾವಲಂಬಿಯಾಗಲು ಯೋಚಿಸಿದಾಗ ಆಕೆಗೆ ಔದ್ಯೋಗಿಕ ಅವಕಾಶಗಳನ್ನು ಒದಗಿಸಲಾಯಿತು. ಆರ್ಥಿಕವಾಗಿ ಸ್ವಾತಂತ್ರ್ಯಳಾದರೆ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಒಂದು ತಿಳುವಳಿಕೆ. ಆದರೆ, ಆಕೆ ಬಂಧನವಾದ ಉದಾಹರಣೆಗಳು ಇವೆ. ಆಕೆ ದುಡಿದು ಹಣ ಸಂಪಾದಿಸಿ ತರುತ್ತಾಳೆ ಎಂಬ ಕಾರಣಕ್ಕೆ ಆಕೆಯ ಪಾಲಿಗಿರುವ ಮನೆಗೆಲಸದ ಹೊಣೆಯನ್ನು ಮನೆಯಲ್ಲಿರುವ ಗಂಡುಜೀವಿಗಳು ಹಂಚಿಕೊಳ್ಳುತ್ತಾರೆಯೆ? ಅದೂ ಇಲ್ಲ. ಆಫೀಸ್ ಕೆಲಸವನ್ನೂ ಮಾಡಬೇಕು, ಮನೆಗೆಲಸವನ್ನೂ ಮಾಡಬೇಕು. ಆಫೀಸ್ ಕೆಲಸಕ್ಕಾದರೂ ರಜೆ ಇದ್ದೀತು, ಮನೆಗೆಲಸಕ್ಕಿಲ್ಲ. ಕೆಲಸಕ್ಕೆ ಹೋಗುವ ಹೆಂಗಸರನ್ನು ತುಂಬ ಅಭಿಮಾನದಿಂದ ಕಾಣುವ ದಿನಗಳಿದ್ದವು. ದುಡಿಯುವ ಮಹಿಳೆಗೂ ತಾನು ಸ್ವಾವಲಂಬಿ ಎಂಬ ಹೆಗ್ಗಳಿಕೆ ಇತ್ತು. ಆದರೆ ಇದು ಕೂಡ ಪರಿಸ್ಥಿತಿಯ ಒಂದು ಮುಖ ಮಾತ್ರ. ಕೆಲವು ಗಂಡಸರು, “”ನಾವು ಹೆಂಗಸರನ್ನು ಕೆಲಸಕ್ಕೆ ಕಳುಹಿಸುವಷ್ಟು ದುರ್ಬಲರೇನಲ್ಲ” ಅಥವಾ ಕೆಲವು ಗೃಹಿಣಿಯರು, “”ನಮ್ಮ ಗಂಡಂದಿರು ನಮ್ಮನ್ನು ಕೆಲಸಕ್ಕೆ ಕಳುಹಿಸುವಷ್ಟು ದುರ್ಬಲರೇನಲ್ಲ” ಎಂದು ಹೇಳುವುದರೊಂದಿಗೆ ಸಮಸ್ಯೆ ದಿಕ್ಸೂಚಿ ತಿರುಗಿಬಿಟ್ಟಿದೆ !
Related Articles
ಹೆಚ್ಚಿನ ಕಡೆಗಳಲ್ಲಿ “ನಾನು ದುಡಿದು ಸಂಪಾದಿಸುತ್ತೇನೆ, ನಾನು ಮನೆಯ ಹೊಣೆ ಹೊರುತ್ತಿದ್ದೇನೆ’ ಎಂದು ಗಟ್ಟಿಯಾಗಿ ಘೋಷಿಸುವ ಹೆಂಗಸರು, ತಮ್ಮ ಮಾತಿಗೆ ಗಂಡಂದಿರು ಒಡಂಬಡದಿದ್ದರೆ ಸೀದಾ ಎದ್ದು ಹೋಗುತ್ತಾರೆ. ಸ್ವಾವಲಂಬನೆಯಿಂದ ಸಂಸಾರಕ್ಕೆ ಸುಖವಾಗಿದೆ. ಆದರೆ, ಕೆಲವೆಡೆ ಸಂಸಾರಗಳೂ ಮುರಿದು ಬಿದ್ದಿವೆ. ಮಹಿಳೆ ದುಡಿಯುವುದೂ ಸಮಸ್ಯೆಯೇ, ದುಡಿಯದಿದ್ದರೂ ಸಮಸ್ಯೆಯೇ ಎಂಬ ವಿಚಿತ್ರ ಸನ್ನಿವೇಶಕ್ಕೆ ನಮ್ಮನ್ನು ನಾವು ನೂಕಿಸಿಕೊಂಡಿದ್ದೇವೆ.
Advertisement
“ನಾನೇ ಮನೆಗೆಲಸ ಮಾಡಬೇಕು, ನಾನೇ ಕಚೇರಿ ಕೆಲಸ ಮಾಡಬೇಕು’ ಎಂದು ಹೇಳುವ ಮಹಿಳೆಯರು, “ನಾನೇ ಹೆರಲೂ ಬೇಕು’ ಎಂದೂ ಬೇಸರದಿಂದ ಹೇಳಿಕೊಳ್ಳುತ್ತಾರೆ. ಹೆರುವುದು ಸಂಕಟದ ಸಂಗತಿಯಾಗಿರಲಿಲ್ಲ ಹಿಂದಿನ ದಿನಗಳಲ್ಲಿ. ಈಗ ಹೆರುವುದೇ ಹೊರೆ. ಅದಕ್ಕಾಗಿ “ಮಕ್ಕಳು ಬೇಡ’ ಎಂಬ ತೀರ್ಮಾನಕ್ಕೆ ಕೆಲವು ದಂಪತಿಗಳು ಬರುತ್ತಿದ್ದಾರೆ. ಇಬ್ಬರೂ ದುಡಿಯುವುದರಲ್ಲಿ ಬಿಝಿ! ಮಕ್ಕಳನ್ನು ಸೃಷ್ಟಿಸಲು, ಪಾಲಿಸಲು ಸಮಯವೆಲ್ಲಿ? ಹಳೆಯ ದಿನಗಳಾದರೆ ಅಮ್ಮ ಮಕ್ಕಳಿಗೆ ಹತ್ತಿರವಿದ್ದಳು. ಕರುಳ ಬಳ್ಳಿ ತುಂಡಾದರೂ ಭಾವನಾತ್ಮಕ ಸೇತುವೊಂದು ಇದ್ದೇ ಇರುತ್ತದೆ. ಹಾಗಾಗಿ, ಇಡೀ ಜಗತ್ತೇ ವಿರೋಧವಾಗಿ ನಿಂತರೂ ತನ್ನ ಅಮ್ಮ ಜೊತೆಯಲ್ಲಿದ್ದರೆ ತಾನು ಜಗತ್ತನ್ನೇ ಗೆದ್ದೇನು ಎಂಬಂಥ ಆತ್ಮವಿಶ್ವಾಸ ಮಕ್ಕಳಲ್ಲಿ ಇರುತ್ತದೆ. ತಂದೆಯ ಜೊತೆಗೆ ಭಾವನಾತ್ಮಕ ಸಾಮೀಪ್ಯ ಉಂಟಾಗುವುದು ಬೆಳೆದ ಮೇಲೆ ಮಾತ್ರ. ಮಕ್ಕಳನ್ನು ಹೊಂದುವುದೆಂದರೆ ತಂದೆ-ತಾಯಿಯರಿಗೆ ತಮ್ಮನ್ನು ತಾವು “ಕಳೆದುಕೊಳ್ಳುವಂಥ’ ಯೌಗಿಕವಾದ ಅವಕಾಶ. ಮಕ್ಕಳನ್ನು ಪಡೆಯುವುದು ಕಾಮತೃಷೆ ಪೂರೈಕೆ ಅಲ್ಲ. ಈಗ ಎಲ್ಲವೂ ಗೋಚಲಾಗಿ ಬಿಟ್ಟಿದೆ. ಜೊತೆಗೆ “ಆ್ಯಂಟಿನಾಟಲಿಸಂ’ನಂಥ “ಮಕ್ಕಳನ್ನು ಮಾಡಬೇಡಿ’ ಎಂದು ಸಾರುವ ಚಳುವಳಿಗಳು ಸಮಾಜದ ದಿಕ್ಕನ್ನು ಬದಲಿಸುತ್ತಿವೆ.
ಈ ಹಿಂದೆ ಹೆಚ್ಚಿನ ಮನೆಗಳಲ್ಲಿ ಮಹಿಳೆಯರಿಗೆ ಸರ್ವಾಧಿಕಾರವಿತ್ತು. ಮೇಲ್ವರ್ಗದ ಸಾಂಪ್ರದಾಯಿಕ ಮನೆಗಳಲ್ಲಿ ಮಾತ್ರ ಹೆಂಡತಿ, ಗಂಡನಿಗೆ ವಿಧೇಯಳಾಗಿದ್ದಳು. ಸಾಮಾನ್ಯ ವರ್ಗದ ಮನೆಗಳಲ್ಲಿ ಗಂಡ ತಪ್ಪು ಮಾಡಿದರೆ ಹೆಂಡತಿ ಹೊಡೆಯುತ್ತಿದ್ದಳು! ಕುಡಿದು ಬರುವ ಗಂಡ ಕಳ್ಳನಂತೆ ಮನೆ ಸೇರುತ್ತಿದ್ದ. ಇಲ್ಲದಿದ್ದರೆ ಹೆಂಡತಿಯ ಪೊರಕೆ ಏಟಿಗೆ ಗುರಿಯಾಗಬೇಕಾಗಿತ್ತು. ಕೆಲವು ಮನೆಗಳಲ್ಲಿ ಸೋಮಾರಿ ಗಂಡನನ್ನೂ, ಮಕ್ಕಳನ್ನೂ ಸಾಕುವ ಹೊಣೆಯನ್ನು ಮಹಿಳೆಯೇ ಹೊರುತ್ತಿದ್ದಳು. ಮೇಲ್ವರ್ಗದ ಮನೆಗಳಲ್ಲಿ ಗಂಡನ ಪಾದಗಳಿಗೆ ನಮಸ್ಕರಿಸುತ್ತಾರೆ. ಅವರು ದುಡಿಮೆಗೆ ಹೋದರೆ ಅಲ್ಲಿ ಬಾಸ್‌ಗೂ ವಿಧೇಯಳಾಗಿ ಇರಬೇಕು! ಈ ಹಿಂದೆ ಗಂಡನನ್ನೋ, ಮಾವನನ್ನೋ ಮನೆಯಲ್ಲಿರುವವರನ್ನೊ ಸಂಭಾಳಿಸಿದರೆ ಸಾಕಿತ್ತು, ಈಗ ಕಚೇರಿಯ ಮೆನೇಜರ್‌ಗಳನ್ನೂ ನಿಭಾಯಿಸಬೇಕು. ಎಷ್ಟೋ ಕಚೇರಿಗಳಲ್ಲಿ ತಮ್ಮ ಮಾತಿಗೆ ಅನುಗುಣವಾಗಿ ವ್ಯವಹರಿಸದಿದ್ದರೆ ಮಹಿಳೆ ತೊಂದರೆ ಅನುಭವಿಸಬೇಕಾಗುತ್ತದೆ. ಸಾಫ್ಟ್ ವೇರ್ ಕ್ಷೇತ್ರದಲ್ಲಿಯೂ ಔದ್ಯೋಗಿಕ ಮಹಿಳೆಗೆ ಸವಾಲುಗಳಿವೆ.ನೂರಾರು ಕಾನೂನುಗಳು ಇದ್ದೇ ಇವೆ, ಮಹಿಳೆಯ ಪರವಾಗಿ ಮಾತನಾಡುವ ಎನ್‌ಜಿಓಗಳಿವೆ. ಆದರೆ, ಯಾರು ಅದರ ಆಸರೆ ಪಡೆಯುವುದು? ಕೆಲವೊಮ್ಮೆ ತಮ್ಮ ಜಗಳವನ್ನು ಬಹಿರಂಗಪಡಿಸುವುದೇ ಮತ್ತೂಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಹಾಗಾಗಿ, ಆ ಕಾಲವಿರಲಿ, ಈ ಕಾಲವಿರಲಿ ಸಮಸ್ಯೆ ಹೆಣ್ಣಿಗೆ ತಪ್ಪಿದ್ದಲ್ಲ. ಹಾಗೆ ನೋಡಿದರೆ ಈಗಲೇ ಸಮಸ್ಯೆ ಅಧಿಕ. ಆಗೆಲ್ಲ ಕಾಡುಮಾರ್ಗದಲ್ಲಿ ಒಬ್ಬಳೇ ಹೆಣ್ಣಿಗೂ ಹೋಗಲು ಭಯವಿರಲಿಲ್ಲ. ಇಲ್ಲವೆಂದಲ್ಲ , ಇಂದಿನಷ್ಟು ಭಯವಿರಲಿಲ್ಲ. ಯಾಕೆ ಹೀಗಾಯಿತು? ಸೂಕ್ಷ್ಮ ಸಂಬಂಧದ ನಡುವೆ
ಗಂಡು-ಹೆಣ್ಣಿನ ಸಂಬಂಧ ಬಹಳ ಸೂಕ್ಷ್ಮವಾದುದು. ಸ್ತ್ರೀವಾದದ ಬಗ್ಗೆ ಭಾಷಣ ಮಾಡುವ ಎಷ್ಟೋ ಹೆಂಗಸರು ತಾವು ಮಾತ್ರ ತಮ್ಮ ಹೆಸರಿನ ಜೊತೆಗೆ ಗಂಡಂದಿರ ಹೆಸರು ಹಾಕಿ ಧನ್ಯರಾಗುತ್ತಾರೆ. ಖಾಸಗಿಯಾಗಿ ಅವರು ಕಟ್ಟಾ ಸಾಂಪ್ರದಾಯಕವಾಗಿರುತ್ತಾರೆ. ಎಲ್ಲ “ಇಸಂ’ಗಳಲ್ಲಿರುವಂತೆಯೇ ಸ್ತ್ರೀವಾದಿಗಳಲ್ಲಿಯೂ “ಮಿಥ್ಯಾವಾದಿ’ಗಳು ಅಧಿಕವಾಗುತ್ತಿದ್ದಾರೆ. ವಾದ, ಜಗಳ, ಸ್ವಾಭಿಮಾನ ಮುಂತಾದ ಹಳಸಲು ಪದಗಳನ್ನು ಬಿಟ್ಟು “ಮಾನವತಾ ವಾದ’ ಎಂಬ ಸಿದ್ಧಾಂತವನ್ನು ಅನುಸರಿಸುವುದು ಎಲ್ಲ ಕಾಲಕ್ಕೂ ಸೂಕ್ತ ಅನಿಸುತ್ತದೆ. ಆ ಅರ್ಥದಲ್ಲಿ ಮಹಿಳಾ ದಿನವೂ ಮಾನವತಾ ದಿನವೇ ಆಗಲಿ ! ಕರುಣಾ ರಾವ್ ಐ ಯಾಮ್ ವೆರಿ ಸಾರಿ
ಮನೆಯಲ್ಲಿ ನೈಟಿಯಂಥ ದೊಗಲೆ ಅಂಗಿ, ಕಚೇರಿಗೆ ಹೋಗುವಾಗ ಚೂಡಿದಾರ್ ಧರಿಸಿದರೆ ಸೀರೆ ಧರಿಸುವುದು ಮದುವೆಯಂಥ ಕಾರ್ಯಕ್ರಮಗಳಲ್ಲಿ ಮಾತ್ರ. ಇವತ್ತಿನ ಅದೃಷ್ಟವೆಂದರೆ ಕಲ್ಯಾಣ ಮಂಟಪಗಳಲ್ಲಿ ಸೀರೆ ಧರಿಸಿದ ನಾರಿಯರು ಕಾಣಸಿಗುತ್ತಾರೆ. ಹೊರಗಿನ ಪ್ರಪಂಚದಲ್ಲಿ ಅವರೆಷ್ಟೇ ಮಾಡ್ ಡ್ರೆಸ್ ಧರಿಸಿರಲಿ, ಮದುವೆಯ ಹಾಲ್‌ಗೆ ಬರುವಾಗ ನೀಟಾಗಿ ಸೀರೆಯುಟ್ಟುಕೊಂಡು ಬರುತ್ತಾರೆ. ಸ್ಲಿವ್‌ಲೆಸ್ ಇರಲಿ, ಬೆನ್ನು ಕಾಣುತ್ತಿರಲಿ, ಅಂತೂ ಸೀರೆ ಉಡುತ್ತಾರೆಂಬುದು ಸತ್ಯ ತಾನೆ? ಸೀರೆ, ಸ್ತ್ರೀಯರ ಮಾನ ರಕ್ಷಣೆ ನೀಡುವಲ್ಲಿ ಸೂಕ್ತ ವಸ್ತ್ರವಾಗಲಾರದೆಂಬುದು ಕಾಲೇಜು ಪ್ರಾಧ್ಯಾಪಕಿ ಮಾಲತಿ ರಾಯ್ ಅವರ ವಾದವಾಗಿದೆ. “”ದ್ರೌಪದಿಯೇನಾದರೂ ಸಲ್ವಾರ್ ಕಮೀಜ್ ಉಡುತ್ತಿದ್ದರೆ ದುಶಾÏಸನಿಗೆ ಎಳೆಯಲು ಸಾಧ್ಯವಾಗುತ್ತಿತ್ತೆ? ಸೀರೆಯುಟ್ಟವರನ್ನು ರೇಪ್ ಮಾಡುವಷ್ಟು ಸುಲಭವಾಗಿ ಬೇರೆ ವಸ್ತ್ರ ಧರಿಸಿದವರನ್ನು ಬಲಾತ್ಕಾರ ಮಾಡುವುದು ಸಾಧ್ಯವಿಲ್ಲ” ಪ್ರತಿಯೊಂದು ಉಡುಪಿಗೂ ಅದರದ್ದೇ ಆದ ಮಿತಿಗಳಿರುತ್ತವೆ. “”ಸೀರೆ ಉಡುವವರು ಸೆಕ್ಸಿಯಾಗಿ ಕಾಣುತ್ತಾರಾದರೆ ಬಿಗಿಯಾಗಿ ಪ್ಯಾಂಟು-ಟೀಶರ್ಟ್‌ಗಳನ್ನು ಧರಿಸಿದರು ಹೇಗೆ ಕಾಣಿಸುತ್ತಾರೆ, ಅವರು ಸಾಧ್ವಿಗಳಾಗಿ ಕಾಣಿಸುತ್ತಾರೆಯೆ?” ಎಂದು ಪ್ರಶ್ನಿಸುತ್ತಾರೆ, ಮೈಸೂರಿನಲ್ಲಿ ಗೃಹಿಣಿಯಾಗಿರುವ ಲಾವಣ್ಯ ಕೃಷ್ಣ. “”ಭಾರತೀಯರು ಸೀರೆ ಧರಿಸದೆ ಸಲ್ವಾರ್, ಪ್ಯಾಂಟು-ಶರ್ಟ್ ಧರಿಸಿದರೆ ಅದನ್ನು ಯುರೋಪಿಯನ್ನರು ಧರಿಸಬೇಕೆ? ಅವರಿಗಾದರೆ ಅಂಥ ಉಡುಪುಗಳು ಸಾಮಾನ್ಯ. ಆದರೆ, ನಾವು ಭಾರತೀಯರೆಂದು “ಐಡೆಂಟಿಟಿ’ ಮಾಡುವಂತೆ ಇರುವ ಸೀರೆಯನ್ನೇಕೆ ತ್ಯಜಿಸಬೇಕು? ಭಾರತೀಯ ಮಹಿಳೆ ನ್ಯೂಯಾರ್ಕ್‌ನಲ್ಲಿದ್ದರೂ ಗೊತ್ತಾಗುತ್ತದೆ- ಅವಳ ಸೀರೆಯಿಂದ. ಅಂಥ ಸಾಂಸ್ಕೃತಿಕ ಅನನ್ಯತೆಯನ್ನು ಬಿಂಬಿಸುವ ಈ ಅಪೂರ್ವ ಉಡುಪನ್ನು ವರ್ಜಿಸುವುದು ಸಲ್ಲದು” ಎಂಬುದು ಲಾವಣ್ಯ ಕೃಷ್ಣ ಅವರ ಪ್ರತಿಪಾದನೆಯಾಗಿದೆ. ಬೆಂಗಳೂರಿನ ಇನ್‌ಫ್ರಾಕಾಸ್‌ಮಾಸ್‌ನಲ್ಲಿ ರಿಸೆಪ್ಷನಿಷ್ಟ್ ಆಗಿರುವ ಚಿತ್ರಾ ಹೇಳುತ್ತಾಳೆ, “”ಅದೊಂದು ಕಿರಿಕಿರಿ ಉಡುಪು ಸರ್, ನಡೆಯುವಾಗ ಕಾಲಿನ ಸುತ್ತ ಯಾರೋ ಹಿಡಿದೆಳೆಯುವಂತೆ ಅನುಭವವಾಗುತ್ತದೆ. ಸೆರಗು ಜಾರದಂತೆ ನೋಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆ. ರಶ್‌ನಲ್ಲಿ ಸಿಟಿಬಸ್‌ನಲ್ಲಿ ಬರುವುದಂತೂ ಯಾರಿಗೂ ಬೇಡ”. ಚಿತ್ರಾಳ ಮಾತನ್ನು ಅಲ್ಲಗಳೆಯಲಾಗದು. ನಾವು ಸ್ಟಿಚ್ಚಿಂಗ್‌ನ ಬಟ್ಟೆಗಳನ್ನು ಧರಿಸತೊಡಗಿ ವರ್ಷಗಳೇ ಕಳೆದರೂ ಸೀರೆ ಮಾತ್ರ ಇನ್ನೂ ಹೊಲಿಯದ ಸ್ಥಿತಿಯಲ್ಲಿಯೇ ಧರಿಸುವ ಬಟ್ಟೆಯಾಗಿದೆ. ಆ ಅರ್ಥದಲ್ಲಿ ಇದು ಅತ್ಯಂತ ಸಾಂಪ್ರದಾಯಿಕ ಉಡುಪು. ಪುರುಷರು ಪಂಚೆಯಿಂದ ಪ್ಯಾಂಟಿನತ್ತ ಚಲಿಸಿದರೂ ಸ್ತ್ರೀಯರು ಸೀರೆಯೆಂಬ ಅದೇ ಸಾಂಪ್ರದಾಯಿಕ ವಸ್ತ್ರವನ್ನೇ ಬಹುಕಾಲದಿಂದ ಧರಿಸುತ್ತಿದ್ದಾರೆ. ಆದರೆ, ದೆಹಲಿಯ ಎನ್‌ಜಿಒ ಕಾರ್ಯಕರ್ತೆ ಮೀರಾ ಹೇಳುವಂತೆ ಇದು ಅತ್ಯಂತ ಆಧುನಿಕ ಉಡುಗೆ. ಅವರು ಹೇಳುತ್ತಾರೆ,
“”ಕುಪ್ಪಸ, ಪೆಟಿಕೋಟ್‌ನಂಥ ಆಧುನಿಕ ಉಡುಗೆಗಳನ್ನು ಧರಿಸಿದರೆ ಮಾತ್ರ ಸೀರೆಯನ್ನು ಉಡುವುದಕ್ಕೆ ಸಾಧ್ಯ. ಹಾಗೆ ನೋಡಿದರೆ ಸೀರೆ ಧರಿಸಿದಾಗ ಶರೀರದ ಭಾಗಗಳು ತೋರುವಂತೆ ಬೇರಾವ ಉಡುಪಿನಲ್ಲಿಯೂ ಕಾಣಲಾರದು. ಸೀರೆ ಧರಿಸಿದವರು ಉಳಿದ ಉಡುಪುಗಳನ್ನು ಧರಿಸಿದವರಿಗಿಂತ ಸೆಕ್ಸಿಯಾಗಿ ಕಾಣುತ್ತಾರೆ…” ಸೀರೆ, ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಉಡುಪು. ಅದೊಂದು ಅತ್ಯಂತ ಸರಳವಾದ ವಸ್ತ್ರ . ಹಳೆ ಕಾಲದಲ್ಲಿ ಎದೆಗೊಂದು, ಸೊಂಟಕ್ಕೊಂದು ವಸ್ತ್ರ ಕಟ್ಟಿಕೊಳ್ಳುತ್ತಿದ್ದರು. ಅದೇ ಬಟ್ಟೆ ಕೊಂಚ ಉದ್ದವಾಗಿ ಸೀರೆಯಾಗಿ ಭಾರತೀಯ ಮಹಿಳೆಯರ ಮೈಗೆ ಸುತ್ತಿಕೊಂಡಿದೆ. ಸೀರೆಯೇನೋ, ಚಂದದ ಉಡುಪು ಹೌದು. ಆದರೆ ಅದನ್ನು ಸುತ್ತಿಕೊಳ್ಳುವ ಕಷ್ಟ ಯಾರಿಗೆ ಬೇಕಿದೆ?
ಆರ್ಕಿಟೆಕ್ಚರ್‌ನಲ್ಲಿ ಪದವೀಧರೆಯಾಗಿದ್ದರೂ ಈಗ ಗೃಹಿಣಿಯಾಗಿರುವ ಸ್ವಯಂಪ್ರಭಾ ಶೆಟ್ಟಿ ಅವರು ಸೀರೆಯೊಂದು ಆಧುನಿಕ ಉಡುಗೆ ಎಂದು ಪ್ರತಿಪಾದಿಸುವವರನ್ನು ತರಾಟೆಗೆಳೆಯುತ್ತಾರೆ. “”ಅದ್ಹೇಗೆ ಸೀರೆ ಸೆಕ್ಸಿ ಉಡುಗೆಯಾಗುವುದು? ಅದನ್ನು ಉಡುವಂತೆ ಉಟ್ಟರೆ ಅದರಷ್ಟು ಅಂದ ಬೇರೊಂದಿಲ್ಲ. ಉದ್ದ ಕೈಯ ರವಿಕೆ ಈಗೆಲ್ಲಿ ಹೋಯಿತು? ಅದನ್ನು ಬಿಟ್ಟು ನಾವೀಗ ಸ್ಲಿàವ್‌ಲೆಸ್ ಕುಪ್ಪಸದತ್ತ ಆಕರ್ಷಿತರಾದುದೇಕೆ? ತೆಳು ಸೀರೆಗೆ ಒಳಗೊಂದು ಬಟ್ಟೆಯಿಟ್ಟು ಹೊಲಿಯುವ ಕ್ರಮವಿತ್ತಲ್ಲ. ಈಗ ಅದು ಯಾಕಿಲ್ಲ. ಹೊಟ್ಟೆ, ಬೆನ್ನಿನ ಭಾಗದಲ್ಲಿ ಒಂಚೂರೂ ಕಾಣದಂತೆ ಸೀರೆಯನ್ನು ಸುತ್ತಿ ಪಿನ್ ಹಾಕಿಕೊಳ್ಳುವ ಸಂಪ್ರದಾಯವನ್ನು ನಾವೀಗ ಏಕೆ ತೊರೆದಿದ್ದೇವೆ? ಈಗ ಸೀರೆ ಉಡುವುದೆಂದರೆ ಅಷ್ಟಗಲದ ಬೆನ್ನು ಕಾಣಿಸಬೇಕು, ಹೊಕ್ಕುಳು ಕಾಣಿಸಬೇಕು. ಹಿಂಭಾಗ ವಿಕಾರವಾಗಿ ಕಾಣುವಂತೆ ಹೈಹೀಲ್ಡ್ ಚಪ್ಪಲಿ ಧರಿಸಬೇಕು… ಹೀಗೆ ಮಾಡಿದರೆ ಸೀರೆಯ ಸಾಂಪ್ರದಾಯಿಕ ಅಂದ ಹೇಗೆ ಉಳಿಯುವುದು ಹೇಳಿ?” ಶಮಿತಾ ಬೆಂಗಳೂರಿನ ಹೊಟೇಲೊಂದರಲ್ಲಿ ರಿಸೆಪ್ಷನಿಷ್ಟ್. ಅವಳಿರುವುದು ಸಾಂಪ್ರದಾಯಿಕ ವ್ಯವಸ್ಥೆ ಇರುವ ಹೊಟೇಲ್ ಒಂದರಲ್ಲಿ. ಹಾಗಾಗಿ, ಅವಳು ಸೀರೆ ಧರಿಸಬೇಕಾಗುತ್ತದೆ. ಆದರೆ, ಪ್ರಯಾಣದಲ್ಲಾಗುವ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅವಳು ಪ್ರತಿದಿನ ಪ್ಯಾಂಟು ಟೀ-ಶರ್ಟ್‌ಗಳೊಂದಿಗೆ ಹೊಟೇಲ್‌ಗೆ ಹೋದರೂ ಅಲ್ಲಿ ರೆಸ್ಟ್‌ರೂಮ್‌ಗೆ ಹೋಗಿ ಸೀರೆ ಉಡುತ್ತಾಳೆ. ಹಾಗೆಯೇ ಸಂಜೆ ಮರಳಿ ಬರುವಾಗ ಆ ಸೀರೆಯನ್ನು ಬದಲಿಸಿ ಮಾಡ್ ಉಡುಪಿನಲ್ಲಿ ಹಿಂದಿರುಗುತ್ತಾಳೆ. ಕಲ್ಯಾಣಮಂಟಪದವರೆಗೂ ಚೂಡಿದಾರ್‌ನಲ್ಲಿ ಹೋಗಿ, ಅಲ್ಲಿರುವ ಡ್ರೆಸ್ಸಿಂಗ್‌ರೂಮ್‌ನಲ್ಲಿ ಸೀರೆ ಧರಿಸಿ ಫಂಕ್ಷನ್ ಮುಗಿದ ಮೇಲೆ ಮತ್ತೆ ಚೂಡಿದಾರ್ ಧರಿಸಿ ಮರಳುವವರು ಅನೇಕ ಮಂದಿ ಇದ್ದಾರೆ ! ಸಂಪ್ರದಾಯವನ್ನು ಮಹಿಳೆ ಹೇಗೆ ಅನುಸಂಧಾನ ಮಾಡಿ ಕೊಂಡಿದ್ದಾಳೆ ನೋಡಿ ! ಸೀರೆ ಒಂದು ಉದಾಹರಣೆ ಮಾತ್ರ ! ಬಿಂದೂ ಜಿ.