ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಎ ಮತ್ತು ಬಿ ವೃಂದದ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಸಂದರ್ಶನ ಎದುರಿಸಿದ್ದ 1,083 ಅಭ್ಯರ್ಥಿಗಳಿಗೆ ಒಂದೇ ರೀತಿಯಲ್ಲಿ ಅಂಕಗಳನ್ನು ನೀಡಲಾಗಿತ್ತು ಎಂದು ಅವಕಾಶ ವಂಚಿತ ಅಭ್ಯರ್ಥಿಗಳ ಪರ ವಕೀಲರು ಗುರುವಾರ ಹೈಕೋರ್ಟ್ ಗಮನಕ್ಕೆ ತಂದರು.
ಅರ್ಜಿ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಚ್.ಜಿ.ರಮೇಶ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದ ಅವಕಾಶ ವಂಚಿತ ಅಭ್ಯರ್ಥಿಗಳ (ಅರ್ಜಿದಾರರು) ಪರ ಹಿರಿಯ ವಕೀಲ ಎಂ.ಬಿ. ನರಗುಂದ ಈ ಅಂಶ ತಿಳಿಸಿದರು.
2013ರಲ್ಲಿ ಏಪ್ರಿಲ್‌ನಲ್ಲಿ ಎ ಮತ್ತು ಬಿ ವೃಂದದ ಗೆಜೆಡೆಟ್ ಪ್ರೊಬೆಷನರಿ ಹುದ್ದೆಗಳ ಸಂದರ್ಶನ ನಡೆದಿತ್ತು. ಸಂದರ್ಶನಕ್ಕೆ 1,083 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಸದಸ್ಯರು ಸಂದರ್ಶನ ನಡೆಸಿ, ಎಲ್ಲ ಅಭ್ಯರ್ಥಿಗಳಿಗೂ ಒಂದೇ ತೆರನಾಗಿ ಅಂಕ ನೀಡಿದ್ದಾರೆ.
ಯಾವ ಅಭ್ಯರ್ಥಿಗಳಿಗೆ ಎಷ್ಟು ಅಂಕ ನೀಡಬೇಕು ಎಂಬುದನ್ನು ಸಂದರ್ಶನದ ಮುಂಚೆಯೇ ನಿಗದಿ ಮಾಡಿದ್ದರು ಮತ್ತು ಅಕ್ರಮ ನಡೆಸುವ ಉದ್ದೇಶದಿಂದಲೇ ಎಲ್ಲ ಅಭ್ಯರ್ಥಿಗಳಿಗೆ ಒಂದೇ ಮಾದರಿಯಲ್ಲಿ ಅಂಕಗಳನ್ನು ನೀಡಿದ್ದಾರೆ ಎಂಬುದು ತಿಳಿಯಲಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
2011ನೇ ಸಾಲಿನಲ್ಲಿ 362 ಎ ಮತ್ತು ಬಿ ವೃಂದದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಕೆಎಟಿ ನಿರ್ದೇಶನದಂತೆ ನೇಮಕಾತಿ ಆದೇಶ ಪತ್ರ ನೀಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ರೇಣುಕಾಂಬಿಕೆ ಸೇರಿದಂತೆ ಇತರೆ ಉದ್ಯೋಗ ವಂಚಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಇದೇ ವೇಳೆ ಕೆಪಿಎಸ್‌ಸಿ ಪರ ವಕೀಲರು ವಾದ ಮಂಡಿಸಿ, ಡಾ.ಮೈತ್ರಿ ಅವರು ತಮಗೆ ಬಯಸಿದ ಹುದ್ದೆ ಸಿಗಲಿಲ್ಲ ಎಂಬ ಕಾರಣಕ್ಕೆ ಬೇರೆಯವರಿಗೂ ಹುದ್ದೆ ಸಿಗಬಾರದು ಎಂಬ ದುರುದ್ದೇಶದಿಂದ ನ್ಯಾಯಾಲಯಕ್ಕೆ ಅರ್ಜಿ ದಾಖಲಿಸಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವರೆಗೆ ಸುಮ್ಮನಿದ್ದು ಬಳಿಕ ಅರ್ಜಿ ಸಲ್ಲಿಸಿದ್ದಾರೆ. ಅದೊಂದು ಸಾರ್ವಜನಿಕ ಹಿತಾಸಕ್ತಿ ಅಲ್ಲ, ವೈಯುಕ್ತಿಕ ಹಿತಾಸಕ್ತಿ ಅರ್ಜಿ ಎಂದು ದೂರಿದರು.
ಪ್ರಕರಣದಲ್ಲಿ ರಾಜ್ಯ ಸರ್ಕಾರವೇ ಮುಖ್ಯ ವ್ಯಾಜ್ಯದಾರ. ಕೆಎಟಿ ಆದೇಶವನ್ನು ಸರ್ಕಾರ ಒಪ್ಪಿಕೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಲು ಮುಂದಾಗಿತ್ತು. ಹೀಗಾಗಿ, ಇದರಲ್ಲಿ ತಗಾದೆಯ ಪ್ರಶ್ನೆಯೇ ಇಲ್ಲ ಎಂದು ಆಯ್ಕೆಯಾದ ಅಭ್ಯರ್ಥಿಗಳ ಪರ ವಕೀಲರು ವಾದ ಮಂಡಿಸಿದರು. ವಾದ-ಪ್ರತಿ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ನ.7ಕ್ಕೆ ಮುಂದೂಡಿತು.