Advertisement

ಹರಿದು ಬಂದ ನೆರವಿನ ಮಹಾಪೂರ

10:53 AM Aug 11, 2019 | Suhan S |

ಧಾರವಾಡ: ಅವರು ಚಹಾ ಕೇಳಿದರೆ ಜನರು ಹಾಲು ಕೊಡುತ್ತಿದ್ದಾರೆ, ಅವರು ಅನ್ನ ಕೇಳಿದರೆ ಜನ ಬಿರಿಯಾನಿ ಕೊಡುತ್ತಿದ್ದಾರೆ, ಅವರು ನೀರು ಎಂದರೆ ಸಾಕು ಬಿಸ್ಲೆರಿ ಬಾಟಲ್ಗಳನ್ನು ಮಡಿಲಿಗೆ ಹಾಕುತ್ತಿದ್ದಾರೆ, ಕೆಮ್ಮಿದರೆ ಔಷಧಿಯ ಕಿಟ್ ಅವರ ತೊಡೆ ಮೇಲಿರುತ್ತದೆ, ಉಂಡು ಮನೆಗೆ ಕಟ್ಟಿಕೊಳ್ಳಲು ಬೇಕಾಗುವಷ್ಟು ಅಗತ್ಯ ವಸ್ತುಗಳು ಬಂದು ಬೀಳುತ್ತಿವೆ.

Advertisement

ಜಿಲ್ಲೆಯ ನೆರೆ ಸಂತ್ರಸ್ತರಿಗೆ ಒಂದೇ ದಿನದಲ್ಲಿ ಜಿಲ್ಲೆಯ ಜನರು ಸ್ಪಂದಿಸಿದ ಪರಿ ಇದು. ಇಲ್ಲಿನ ಮುಗದುಮ್ಮ ಕಲ್ಯಾಣ ಮಂಟಪದಲ್ಲಿ ಅಳ್ನಾವರ ಪಟ್ಟಣದಿಂದ ಸ್ಥಳಾಂತರ ಮಾಡಿರುವ ಸಾವಿರಕ್ಕೂ ಅಧಿಕ ನಿರಾಶ್ರಿತರಿಗೆ ಕಳೆದ ಎರಡು ದಿನಗಳಿಂದ ಅಗತ್ಯ ವಸ್ತುಗಳನ್ನು ಸಂಘ-ಸಂಸ್ಥೆಗಳು ಮತ್ತು ಜನ ಸಾಮಾನ್ಯರೇ ಸ್ವಯಂಪ್ರೇರಣೆಯಿಂದ ತಂದು ಕೊಡುತ್ತಿದ್ದಾರೆ.

ಇನ್ನು ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ, ನಿಗದಿ ಗ್ರಾಮಗಳು ಸೇರಿದಂತೆ ಅನೇಕ ಗ್ರಾಮಸ್ಥರು ಸ್ವಯಂಪ್ರೇರಣೆಯಿಂದ ತಮ್ಮೂರುಗಳಲ್ಲಿ ಶನಿವಾರ ರೊಟ್ಟಿ ಸಂಗ್ರಹಿಸಿ ಅವುಗಳನ್ನು ಸಂತ್ರಸ್ತರಿಗೆ ತಲುಪಿಸಿದರು.

ನಿರಾಶ್ರಿತರು ಇಲ್ಲಿಗೆ ಬಂದುಳಿದ 24 ಗಂಟೆಯಲ್ಲಿ ಎರಡು ಲಾರಿಯಷ್ಟು ಅಗತ್ಯ ವಸ್ತುಗಳು ಜಮಾವಣೆಯಾಗಿವೆ. ಅಕ್ಕಿ, ಬೇಳೆ, ತುಪ್ಪ, ಎಣ್ಣೆ ಸೇರಿದಂತೆ ದಿನಸಿ ವಸ್ತುಗಳನ್ನು ಸಾರ್ವಜನಿಕರು ನೆರೆ ಸಂತ್ರಸ್ತರಿಗೆ ತಂದು ಒಪ್ಪಿಸುತ್ತಿದ್ದಾರೆ. ಈ ಕೇಂದ್ರದ ಉಸ್ತುವಾರಿಯನ್ನು ಧಾರವಾಡ ಉಪ ವಿಭಾಗಾಧಿಕಾರಿ ಮಹ್ಮದ್‌ ಜುಬೇದ್‌ ನಿರ್ವಹಿಸುತ್ತಿದ್ದು, ಶನಿವಾರ ರಾತ್ರಿ ಇಲ್ಲಿಂದ ಕೆಲವಷ್ಟು ಜನರನ್ನು ಮರಳಿ ಅವರ ಊರುಗಳಿಗೆ ಸ್ಥಳಾಂತರಿಸುವುದಾಗಿ ‘ಉದಯವಾಣಿ’ಗೆ ತಿಳಿಸಿದರು.

ನಟ ಯಶ್‌ ಸಹಾಯಹಸ್ತ: ಜಿಲ್ಲೆಯ ನೆರೆ ಸಂತ್ರಸ್ತರಿಗೆ ಅವಶ್ಯಕ ವಸ್ತುಗಳ ದೇಣಿಗೆ ಸ್ವೀಕಾರಕ್ಕಾಗಿ ಜಿಲ್ಲಾಡಳಿತವು ಅಕ್ಕನ ಬಳಗದ ಕಲ್ಯಾಣಮಂಟಪದಲ್ಲಿ ಆರಂಭಿಸಿರುವ ಕೇಂದ್ರಕ್ಕೆ ಅಗತ್ಯ ವಸ್ತುಗಳು ಹರಿದು ಬರುತ್ತಿದೆ.

Advertisement

ನಟ ಯಶ್‌ ಅವರ ಯಶೋಮಾರ್ಗ ಫೌಂಡೇಶನ್‌ದಿಂದ ಅಕ್ಕಿ, ಎಣ್ಣೆ, ಬ್ಲಾಂಕೇಟ್, ಚಾಪೆ, ಚಾದರ, ಸ್ಯಾನೆಟರಿ ನ್ಯಾಪ್ಕಿನ್‌, ಗೋಧಿ ಹಿಟ್ಟು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳು ಎರಡು ಲಾರಿಗಳಲ್ಲಿ ಬಂದಿದ್ದು, ಅವುಗಳನ್ನು ಕೇಂದ್ರಕ್ಕೆ ಹಸ್ತಾಂತರ ಮಾಡಲಾಯಿತು. ಶ್ರೀ ಬಾಲಾಜಿ ಟ್ರೇಡಿಂಗ್‌ ಕಂಪನಿ ಮಾಲೀಕ ಮಂಜುನಾಥ ಹರ್ಲಾಪುರ ಅವರು ಐದು ಲಕ್ಷ ಮೊತ್ತದ ದಿನಸಿ, ಕಾಳುಕಡಿ ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಇದೇ ರೀತಿ ಮನಸೂರ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಂದ ಯುವಕ ಮಂಡಳ, ಸಂಘ-ಸಂಸ್ಥೆಗಳು ಅಗತ್ಯ ವಸ್ತುಗಳನ್ನು ತಂದು ಕೇಂದ್ರಕ್ಕೆ ಹಸ್ತಾಂತರ ಮಾಡುತ್ತಿದ್ದಾರೆ.

ರೋಟರಿ ಕ್ಲಬ್‌ ಧಾರವಾಡ ಸೆಂಟ್ರಲ್ ಹಾಗೂ ಧಾರವಾಡ ಬಾಂಡ್ಸ್‌ನೊಂದಿಗೆ ತಾಲೂಕಿನ ಹಾರೋಬೆಳವಡಿ ಗ್ರಾಮಕ್ಕೆ ತೆರಳಿ ಅಗತ್ಯ ವಸ್ತು ಪೂರೈಸುವುದರ ಜೊತೆಗೆ ಗ್ರಾಮಸ್ಥರ ಆರೋಗ್ಯ ಹಿತದೃಷ್ಟಿಯಿಂದ ರೆಡ್‌ ಕ್ರಾಸ್‌ ವತಿಯಿಂದ ಜಾಗೃತಿ ಹಾಗೂ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇದಲ್ಲದೇ ಗಾಂಧೀಚೌಕ ಗಜಾನನ ಉತ್ಸವ ಸಮಿತಿ ವತಿಯಿಂದ ಹಾರೋಬೆಳವಡಿ ಗ್ರಾಮಸ್ಥರಿಗೆ ಚಾಪೆ ಹಾಗೂ ಬ್ಲಾಂಕೆಟ್‌ಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next