ನಮ್ಮ ದುರವಸ್ಥೆಯನ್ನು ಕಂಡು ನೀವು ನಗದಿದ್ದರೆ ಮತ್ತೆ ಹೇಳಿ. ಬನ್ನಿ ನಮ್ಮ ಕರಾವಳಿ ತೀರದ ನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ನೀರಿಲ್ಲದೆ ಬರಗೆಟ್ಟಿದ್ದೇವೆ ನಾವು. ನಗರಪಾಲಿಕೆ ನೀರು ಬಿಟ್ಟ ದಿವಸ ನಮ್ಮ ಮನೆಯ ಕೊಡಪಾನ, ಪಾತ್ರೆ, ಚೆಂಬುಗಳು ಬಿಡಿ ತಟ್ಟೆ, ಲೋಟ, ಗ್ಲಾಸುಗಳೆಲ್ಲ ನೀರು ತುಂಬಿ ತುಳುಕಾಡುತ್ತಿರುತ್ತದೆ. ಒಂದು, ಎರಡು, ಮೂರು ಹೀಗೆ ದಿನಗಳೆದಂತೆ ತುಂಬಿಸಿಟ್ಟ ನೀರು ಕ್ಷೀಣಿಸುತ್ತಿದ್ದಂತೆ ನಮ್ಮ ಅಮ್ಮಂದಿರ ಮುಖದ ಕಳೆಯೂ ಕ್ಷೀಣಿಸುತ್ತದೆ. ಈಗ ನಮ್ಮ ಅಮ್ಮಂದಿರು ಮಕ್ಕಳನ್ನು ಸ್ನಾನಕ್ಕೆ ಕಳುಹಿಸಿ ಹೊರಗಿನಿಂದ ಸ್ಟೂಲು ಹಾಕಿಕೊಂಡು, ಬೆತ್ತ ಹಿಡಿದು ಮಕ್ಕಳನ್ನು ಕಾಯುತ್ತಿರುತ್ತಾರೆ. ಮಕ್ಕಳು ಸ್ನಾನ ಮುಗಿಸಿ ಹೊರ ಬರುವವರೆಗೂ “ಸಾಕು ಬನ್ರೊ…’ ಇದೇ ಉದ್ಗಾರ. ಮನೆಯ ಹೊರಗಿರುವ ನಲ್ಲಿಗಳ ತಲೆಯನ್ನೇ ಅಮ್ಮಂದಿರು ಕಿತ್ತಿಟ್ಟು ಬಿಟ್ಟಿದ್ದಾರೆ. ಆಗಾಗ ನೀರು ಬಿಟ್ಟು ಹೋಗುವ ಮಕ್ಕಳು ಎಲ್ಲಿ ಜಲರಾಶಿಯನ್ನೇ ಕೊಳ್ಳೆ ಹೊಡೆದು ಬಿಡುತ್ತಾರೊ ಏನೋ ಎಂದು.
ಪಕ್ಕದ ಮನೆಯ ವಸಂತಿ ಆಂಟಿ ಅಂತೂ ದಿನಕ್ಕೆ ಮೂರು ಬಾರಿ ಮನೆಯ ಟ್ಯಾಂಕನ್ನು ಇಣುಕಿ ತನ್ನ ಆಸ್ತಿಯೇ ಕರಗಿ ಹೋಗುತ್ತಿದೆ ಎಂಬಂತೆ ತಲೆ ಚಚ್ಚುವ ಅವಸ್ಥೆಯನ್ನೊಮ್ಮೆ ನೀವು ನೋಡಲೇ ಬೇಕು. ಎರಡು-ಮೂರು ದಿನವೂ ನೀರು ಬರಲಿಲ್ಲ ಎಂದಾದರೆ ನಮ್ಮ ಬೀದಿಯ ಓಣಿಗಳಲ್ಲಿ ಬಿಂದಿಗೆ ಹಿದಿದುಕೊಂಡು ಸಾಲುಗಟ್ಟಿ ಹೋಗುವ ಗಂಡಸರು, ಹೆಂಗಸರು ಮತ್ತು ಮಕ್ಕಳ ಸಾಲನ್ನಾದರೂ ನೀವು ನೋಡಬೇಕು.
ನಿಮಗಿಷ್ಟೆಲ್ಲ ವಿವರಿಸುತ್ತಿರುವಾಗಲೇ ಎದುರು ಮನೆಯ ಸುಮತಿ ಆಂಟಿಯ ಫೋನು ರಿಂಗಣಿಸಿತು. “ನಮ್ಮ ಬೆಂಗಳೂರಿನ ನೆಂಟರು’ ಎಂದು ಕಿವಿಯಿಂದ ಕಿವಿಗೆ ನಕ್ಕ ಆಂಟಿಯ ಮುಖ ಫೋನಿನಲ್ಲಿ ಮಾತನಾಡಲು ತೊಡಗಿದ ಕೂಡಲೇ ಬಿಳುಚಿಕೊಂಡಿತು. “ಹೋ ಹೌದಾ …ಬರುತ್ತಿದ್ದೀರಾ? ಬನ್ನಿ ಬನ್ನಿ ಆದರೆ ನಮಗೆ ನೀರು ಬರದೆ ನಾಲ್ಕು ದಿನ ಆಯ್ತು’ ಎಂದು ಮಾತನಾಡುತ್ತಿದ್ದವರ ಧ್ವನಿ ಕ್ಷೀಣಿಸತೊಡಗಿತು. ಅವರ ಅವಸ್ಥೆಯನ್ನು ನೋಡಲಾಗಲಿಲ್ಲ. ನೆಂಟರು ಬರುತ್ತಾರೆ ಎಂದ ಕೂಡಲೇ ಮೂಡೆ ಕಟ್ಟಿ ಬೇಯಿಸಿ, ಸೇಮಿಗೆ ಒತ್ತಿ ತಿನ್ನಿಸಿ ಸಂತೋಷ ಪಡುತ್ತಿದ್ದವರ ಸ್ಥಿತಿ ಕಂಡು ಅಯ್ಯೋ ಎನಿಸಿತು.
ನಿಮಗೆ ಇನ್ನೊಂದು ವಿಷಯ ಗೊತ್ತಾ? ಕರಾವಳಿಗರಾದ ನಾವು ಈಗ ಪಕ್ಕದ ಮನೆಯವರ ಹಣ, ಒಡವೆ, ಆಸ್ತಿ, ಬಂಗಲೆ ನೋಡಿ ಹೊಟ್ಟೆ ಕಿಚ್ಚು ಪಡುವುದಿಲ್ಲ. ಅವರ ಮನೆಯಲ್ಲಿರುವ ನೀರಿನ ಸಂಗ್ರಹ ನೋಡಿ ಅಸೂಯೆ ಪಟ್ಟುಕೊಳ್ಳುತ್ತಿದ್ದೇವೆ. ನಮ್ಮೂರಲ್ಲಿ ಈಗ ನೀರಿದ್ದವರೇ ಶ್ರೀಮಂತರು ಎಂಬ ಹಂತಕ್ಕೆ ತಲುಪಿದ್ದೇವೆ. ಕಡಲೂರಿನವರಾದ, ಸಾಗರದಂಚಿನಲ್ಲಿ ವಾಸಿಸುವ, ತಂಪಾದ ಕರಾವಳಿ ತೀರದ ಪ್ರದೇಶವರಾದ ನಮ್ಮ ಇಂದಿನ ದುರವಸ್ಥೆ ಇದು. ಅತಿಥಿ ಸತ್ಕಾರಕ್ಕೆ ಹೆಸರಾದ ನಮ್ಮೂರಲ್ಲಿ ಇಂದು ಪಕ್ಕದ ಮನೆಗೆ ಬರುವ ಅತಿಥಿಗಳನ್ನು ಕಂಡಾಗಲೇ ಭಯಪಟ್ಟುಕೊಳ್ಳುತ್ತಿದ್ದೇವೆ.
ನಮ್ಮ ಈ ಕಷ್ಟಕ್ಕೆ ಪರಿಹಾರ ಸಿಗಬೇಕೆಂದರೆ ಮಳೆದೇವ ಆದಷ್ಟು ಬೇಗ ಭೂಮಿಗೆ ಮಳೆ ಹನಿಸಲಿ. ಇದು ಅವನಲ್ಲಿ ನಮ್ಮೆಲ್ಲರ ಪ್ರಾರ್ಥನೆ.
ಪಿನಾಕಿನಿ ಪಿ. ಶೆಟ್ಟಿ, ಸ್ನಾತಕೋತ್ತರ ಪದವಿ
ಕೆನರಾ ಕಾಲೇಜು, ಮಂಗಳೂರು