ಅರಕಲಗೂಡು: ತಾಲೂಕಿನಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಆಲಿಕಲ್ಲು ಸಹಿತ ಅಕಾಲಿಕ ಮಳೆ ಜಮ್ಮು- ಕಾಶ್ಮೀರದ ಹಿಮದ ರಾಶಿಯನ್ನು ನೆನಪಿಗೆ ತರಿಸಿತು. ಮೊದಲಿಗೆ ಹನಿಯೊಂದಿಗೆ ಆರಂಭವಾದ ಮಳೆ ಜೊತೆಗೆ ಹಿಡಿ ಗಾತ್ರದ ಆಲಿಕಲ್ಲುಗಳು ಮನೆ, ರಸ್ತೆ, ಜಮೀನಿನಲ್ಲಿ ಒಂದೇ ಸಮನೇ ಸುರಿಯಲಾರಂಭಿಸಿದವು.
ಇದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೂ ತೊಂದರೆ ಆಯಿತು. ದಟ್ಟವಾಗಿ ಸುರಿದ ಆಲಿಕಲ್ಲಿನ ರಾಶಿಯನ್ನು ಕಂಡ ತಾಲೂಕಿನ ದೊಡ್ಡಮಗ್ಗೆ, ಮಲ್ಲಿಪಟ್ಟಣ ಹೋಬಳಿಯ ಜನರು ಈ ಪ್ರಮಾಣದಲ್ಲಿ ಆಲಿ ಕಲ್ಲು ಬಿದ್ದಿದ್ದನ್ನು ತಾವು ಈ ಹಿಂದೆ ನೋಡಿಯೇ ಇಲ್ಲ ಎಂದು ಅಚ್ಚರಿಯಿಂದ ಮಾತನಾಡಿಕೊಳ್ಳುತ್ತಿದ್ದರು.
ರಸ್ತೆ ತುಂಬ ಆಲಿಕಲ್ಲು: ಮಳೆ ನಿಂತ ನಂತರವೂ ಆಲಿ ಕಲ್ಲು ರಸ್ತೆ, ಮನೆಯ ಅಂಗಳ, ಜಮೀನಿನಲ್ಲಿ ಹಾಗೆಯೇ ಇತ್ತು. ಎಲ್ಲೆಡೆ ಬೀಳಿಯ ಬಟ್ಟೆಯನ್ನು ಹಾಸಿದಂತೆ ಕಂಡು ಬರುತ್ತಿತ್ತು. ಎಲ್ಲಿ ನೋಡಿದರೂ ಆಲಿ ಕಲ್ಲಿನ ರಾಶಿಯೇ ಕಾಣಸಿಗುತ್ತಿತ್ತು. ಇಂತಹ ಅಪರೂಪದ ಸನ್ನಿವೇಶವನ್ನು ಕಣ್ಣು ತುಂಬಿಕೊಂಡ ಜನರು.
ಬೆಳೆಗೆ ಹಾನಿ: ತಡವಾಗಿ ಬಿತ್ತನೆ ಮಾಡಿದ್ದ ಬೆಳೆಗೆ ಈ ಆಲಿ ಕಲ್ಲು ಮಳೆ ಭಾರೀ ನಷ್ಟವನ್ನೇ ತಂದೊಡ್ಡಿದೆ. ಕೊಯ್ಲು ಮಾಡದೇ ಇರುವ ಮೆಣಸಿನ ಕಾಯಿ, ಎಲೆ ಕೋಸು, ತರಕಾರಿ, ಕಾಫಿ, ಏಲಕ್ಕಿ, ಇತರೆ ಬೆಳೆಗೆ ಈ ಆಲಿ ಕಲ್ಲು ಪೆಟ್ಟು ನೀಡಿದೆ. ಅಲ್ಲದೆ, ಜಮೀನಿನಲ್ಲಿ ದಟ್ಟವಾಗಿ ತಾಲೂಕಿನ ದೊಡ್ಡಮಗ್ಗೆ, ಕಸಬಾ, ಮಲ್ಲಿಪಟ್ಟಣ ಹೋಬಳಿಗಳಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಅಕಾಲಿಕ ಮಳೆ ಬಿದ್ದಿದ್ದು, ಮಳೆಯ ಹನಿಗಿಂತ ಆಲಿಕಲ್ಲು ರಾಶಿಗಳೇ ಅಧಿಕವಾಗಿತ್ತು. ಇದರಿಂದ ರೈತರು ಆತಂಕ ಪಡಬೇಕಾದಂತಹ ಪರಿಸ್ಥಿತಿ ತಲೆದೂರಿದೆ.
ದೊಡ್ಡಮಗ್ಗೆ ಹೋಬಳಿ ಬರಗೂರು, ಸೋಮನಹಳ್ಳಿ, ಸಂತೆಮರೂರು, ಮರಿತಮ್ಮನಹಳ್ಳಿ, ಅಂಕನಹಳ್ಳಿ ಗ್ರಾಮಗಳಲ್ಲಿ ಆಲಿಕಲ್ಲು ಸುರಿದು ಕೆಲ ಗಂಟೆಗಳ ಕಾಲ ರಸ್ತೆ ಹಾಗೂ ಮನೆಯ ಆವರಣಗಳು ಆಲಿಕಲ್ಲು ಗಳಿಂದ ಆವೃತಗೊಂಡವು. ರಾಮನಾಥಪುರ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿದ್ದ ಆನೆಕಲ್ಲನ್ನು ವಾಹನ ನಿಲ್ಲಿಸಿ ಪ್ರಯಾಣಿಕರು ತುಂಬಿಕೊಳ್ಳುವುದರ ಜೊತೆಯಲ್ಲಿ ತಿನ್ನಲು ಮುಂದಾಗಿದ್ದು ಸಹಜವಾಗಿತ್ತು.