ನಟ ತಿಲಕ್ ಮತ್ತು ನವ ನಟಿ ಸುಷ್ಮಾ ರಾಜ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ “ಬೆಕ್ಕಿಗೊಂದು ಮೂಗುತಿ’ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಆಡಿಯೋ ಖರೀದಿಸಿದ್ದು, ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಲಹರಿ ಆಡಿಯೋ ಸಂಸ್ಥೆಯ ಮುಖ್ಯಸ್ಥ ವೇಲು ಚಿತ್ರದ ಹಾಡುಗಳನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ಲಹರಿ ವೇಲು, “ಸದ್ಯ ಲಹರಿ ಸಂಸ್ಥೆಯ ಚಂದದಾರರ ಸಂಖ್ಯೆ ಐವತ್ತು ಲಕ್ಷದಷ್ಟಿದೆ. ಲಹರಿ ಸಂಸ್ಥೆಯಲ್ಲಿ ನಿರ್ಮಾಣವಾದ ಭಾವಗೀತೆ, ಚಿತ್ರಗೀತೆ, ಜನಪದ ಗೀತೆಗಳು ಜನಮನ ಗೆಲ್ಲಲು ಯಶಸ್ವಿಯಾಗಿದೆ. ಮೂರು ದಶಕಗಳಿಂದ ಗಂಧದ ಪೆಟ್ಟಿಗೆಯಲ್ಲಿ ಕ್ಯಾಸೆಟ್, ಸಿಡಿಯನ್ನು ಬಿಡುಗಡೆ ಮಾಡಲಾಗುತ್ತಿತ್ತು. ಡಾ. ಭೀಮಸೇನ್ ಜೋಶಿ, ಡಾ.ರಾಜಕುಮಾರ್, ಇಳಯರಾಜ ಮೊದಲಾದ ದಿಗ್ಗಜರು ಮುಟ್ಟಿದ ಪೆಟ್ಟಿಗೆಯನ್ನು ಸುರಕ್ಷಿತವಾಗಿ ಇಡಲಾಗಿದೆ. ಐವತ್ತು ಲಕ್ಷ ಚಂದದಾರರು ಬಂದಿರುವ ಕಾರಣ ಇನ್ನು ಮುಂದೆ ಚಿನ್ನದ ಕೋಟ್ ಇರುವ ಬಾಕ್ಸ್‌ದಲ್ಲಿ ಚಿತ್ರದ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಲಾಗುವುದು’ ಎಂದು ಹಿರಿಯ ಸಂಗೀತ ನಿರ್ದೇಶಕರ ಸಾಧನೆಯನ್ನು ಶ್ಲಾಘಿಸಿದರು.
ಚಿತ್ರದ ನಾಯಕ ತಿಲಕ್ ಮಾತನಾಡಿ, “ಈ ಚಿತ್ರದಲ್ಲಿ ಸೇನಾ ಅಧಿಕಾರಿಯಾಗಿ ಅಭಿನಯಿಸಿದ್ದೇನೆ. ಏಲಿಯನ್ ಗುಣವನ್ನು ಬದಲಿಸುವ ಅಪರೂಪದ ಪಾತ್ರ ಈ ಚಿತ್ರದಲ್ಲಿ ನನಗೆ ಸಿಕ್ಕಿದೆ. ಭೂಮಿಗೆ ಬರುವ ಏಲಿಯನ್‌ಗೂ, ನನಗೂ ಯಾವ ರೀತಿಯ ಸಂಬಂಧ ಎನ್ನುವುದನ್ನು ತಿಳಿಯಲು ಸಿನಿಮಾ ನೋಡಬೇಕು’ ಎಂದರು.
ಪ್ರೀತಿ, ನಂಬಿಕೆ, ವಿಶ್ವಾಸ ಯಾವುದರಲ್ಲೂ ಅರ್ಥವಿಲ್ಲ ಎಂದು ತಿಳಿದುಕೊಂಡಿರುವ ಪಾತ್ರದಲ್ಲಿ ನಾಯಕಿ ಸುಷ್ಮಾ ರಾಜ್ ಕಾಣಿಸಿಕೊಂಡಿದ್ದಾರೆ. “ಪ್ರಾಣಿ ರೂಪದಲ್ಲಿ ಭೂಮಿಗೆ ಬಂದು, ಕೊನೆಗೆ ಮನುಷ್ಯಳಾಗಿ ರೂಪುಗೊಳ್ಳುತ್ತೇನೆ. ಪ್ರೀತಿ ಎಂದರೆ ಅದೊಂದು ಆಯುಧವಲ್ಲ. ಭಾವನೆಗಳು ತುಂಬಿಕೊಂಡಿದ್ದರೇನೆ ಬದುಕು ಎಂದು ನಾಯಕ ನನಗೆ ಅರಿವು ಮೂಡಿಸುತ್ತಾನೆ. ಅದರಿಂದ ಜೀವನದಲ್ಲಿ ಬದಲಾಗುತ್ತೇನೆ’ ಎಂದು ಸುಷ್ಮಾ ರಾಜ್ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.
“ಬೆಕ್ಕಿಗೊಂದು ಮೂಗುತಿ’ ಚಿತ್ರಕ್ಕೆ ಲೆಸ್ಲಿà ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ನಿರ್ದೇಶಕ ಲೆಸ್ಲಿà, “ಚಿತ್ರೀಕರಣ ಮುಗಿಸಿದ ಬೆನ್ನಲ್ಲೆ ನನ್ನ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿತು. ಆದರೆ ಚಿತ್ರವನ್ನು ತೆರೆಗೆ ತರಲೇಬೇಕು ಎಂಬ ಉದ್ದೇಶದಿಂದ, ಸಾಕಷ್ಟು ಮುತುವರ್ಜಿ ವಹಿಸಿಕೊಂಡು ಚಿತ್ರವನ್ನು ಬಿಡುಗಡೆ ಹಂತಕ್ಕೆ ತರಲಾಗಿದೆ. ಐವತ್ತು ವರ್ಷಗಳಿಂದ ಸಿನಿಮಾ ಮಾಡುವ ಕನಸು ಈಗ ಈಡೇರಿದೆ’ ಎಂದರು.
“ಬೆಕ್ಕಿಗೊಂದು ಮೂಗುತಿ’ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಹಾಡುಗಳಿಗೆ ಯುವ ಸಂಗೀತ ನಿರ್ದೇಶಕ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಬಿ.ಕೆ.ಮಾಧುರಿ ಉಮೇಶ್ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ, ಚಿತ್ರಕ್ಕೆ “ಯು’ ಪ್ರಮಾಣ ಪತ್ರ ನೀಡಿ ಬಿಡುಗಡೆಗೆ ಅಸ್ತು ಎಂದಿದೆ. ಸದ್ಯ “ಬೆಕ್ಕಿಗೊಂದು ಮೂಗುತಿ’ ಚಿತ್ರದ ಹಾಡುಗಳ ಜೊತೆಗೆ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.