ಬೀಜಿಂಗ್: ಜಗತ್ತಿನ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾದ ಚೀನಾದ ಇ ವಾಣಿಜ್ಯ ಕಂಪನಿ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ ಹತ್ತು ಸಾವಿರ ಉದ್ಯೋಗಿಗಳನ್ನು ತೆಗೆದು ಹಾಕಿರುವುದಾಗಿ ವಿವಿಧ ಮಾಧ್ಯಮಗಳ ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರವೀಣ್ ನೆಟ್ಟಾರ್ ಹತ್ಯೆ ಮಾಡಿದ್ದ ಮೂವರು ಪ್ರಮುಖ ಆರೋಪಿಗಳ ಬಂಧನ
ಜೂನ್ ತಿಂಗಳಲ್ಲಿ ಅಲಿಬಾಬಾ ಕಂಪನಿಯ ಒಟ್ಟು ಆದಾಯದಲ್ಲಿ ಶೇ.50ರಷ್ಟು ಇಳಿಕೆಯಾದ ಪರಿಣಾಮ ಉದ್ಯೋಗಿಗಳನ್ನು ವಜಾ ಮಾಡುವ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ವಿವರಿಸಿದೆ. ಅಲಿಬಾಬ್ ಗ್ರೂಪ್ ಆಫ್ ಕಂಪನಿಯ ವಸ್ತುಗಳ ಮಾರಾಟದಲ್ಲಿ ಭಾರೀ ಇಳಿಕೆ ಮತ್ತು ಚೀನಾದ ಆರ್ಥಿಕ ಸ್ಥಿತಿ ಕೂಡಾ ಡೋಲಾಯಮಾನ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಖರ್ಚು-ವೆಚ್ಚ ಸರಿದೂಗಿಸಲು ಉದ್ಯೋಗಿಗಳನ್ನು ವಜಾ ಮಾಡುತ್ತಿರುವುದಾಗಿ ವರದಿ ವಿವರಿಸಿದೆ.
ಜೂನ್ ತ್ರೈಮಾಸಿಕದಲ್ಲಿ ಇ ವಾಣಿಜ್ಯ ಕಂಪನಿ ಸುಮಾರು 9,241 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರೊಂದಿಗೆ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 2,45,700ಕ್ಕೆ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.
ಕಳೆದ ವರ್ಷ ಜೂನ್ ನಲ್ಲಿ ಅಲಿಬಾಬಾ ಗ್ರೂಪ್ ಆಪ್ ಕಂಪನಿಯ ಒಟ್ಟು ಆದಾಯ 45.14 ಬಿಲಿಯನ್ ನಷ್ಟಿದ್ದು, 2022ರ ಜೂನ್ ನಲ್ಲಿ ಅದು 22.74 ಬಿಲಿಯನ್ ಯುವಾನ್ ಗೆ ಇಳಿಕೆಯಾಗಿದೆ. ಇದು ಒಟ್ಟು ಆದಾಯದ ಶೇ.50ರಷ್ಟು ಕುಸಿತ ಕಂಡಂತಾಗಿದೆ ಎಂದು ತಿಳಿಸಿದೆ.