Advertisement
ಅಲೆವೂರು ಗ್ರಾ.ಪಂ.ವ್ಯಾಪ್ತಿಯ ಕೋಡಿ ಪ್ರದೇಶದಲ್ಲಿ 15 ವರ್ಷಗಳಿಂದ ಮುಚ್ಚಿದ ರೀತಿ ಇರುವ 93 ಸೆಂಟ್ಸ್ ಕೋಡಿ ಮದಗ ಪುನಶ್ಚೇತನಕ್ಕೆ ಗ್ರಾ.ಪಂ. ಮುಂದಾಗಿದೆ. ನರೇಗಾ ಯೋಜನೆಯಲ್ಲಿ ಮದಗದ ಹೂಳು ತೆಗೆಯಲು 1.5 ಲಕ್ಷ ರೂ. ಮೊತ್ತವನ್ನು ಮೀಸಲಿರಿಸಲಾಗಿದೆ. ಎ.24ರಂದು ಅಲೆವೂರು ಗ್ರಾ.ಪಂ.ಅಧ್ಯಕ್ಷ ಶ್ರೀಕಾಂತ್ ನಾಯಕ್ ಕಾಮಗಾರಿಗೆ ಚಾಲನೆ ನೀಡಿದ್ದರು. ಕೋವಿಡ್ 19 ಮುನ್ನೆಚ್ಚರಿಕೆ ಪ್ರಕಾರ ಇಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಕೆಲಸ ಮಾಡುವವರು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಮಾಸ್ಕ್ ಧರಿಸಿ ಕೆಲಸ ಮಾಡುತ್ತಿದ್ದಾರೆ.
ಅಂತರ್ಜಲ ಮಟ್ಟ ವೃದ್ಧಿ
ಬೇರೆ ಜಿಲ್ಲೆಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಉದ್ಯೋಗ ಚೀಟಿ ಹೊಂದಿದವರು ಸಾಮೂಹಿಕ ಕೂಲಿ ಕೆಲಸಕ್ಕಿಂತ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ ಇದಕ್ಕೆ ಅಲೆವೂರು ಗ್ರಾ.ಪಂ.ಭಿನ್ನವಾಗಿದೆ. ಲಾಕ್‌ಡೌನ್‌ನಿಂದ ಸ್ಥಳೀಯರು ಮನೆಯಲ್ಲಿ ಬಿಡುವಿನಲ್ಲಿದ್ದು, ಸಾರ್ವಜನಿಕ ಕೋಡಿ ಕೆರೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ. 20 ಮಂದಿ ಉದ್ಯೋಗ ಚೀಟಿ ಹೊಂದಿದ್ದವರು ಕೋಡಿ ಮದಗದ ಹೂಳು ತೆಗೆಯಲು ಶ್ರಮಿಸುತ್ತಿದ್ದಾರೆ. ಇವರೊಂದಿಗೆ ಕೆಲ ಸ್ವಯಂಸೇವಕರೂ ಕೈ ಜೋಡಿಸಿದ್ದಾರೆ. ಸಂಜೆ 3 ರಿಂದ 9 ಗಂಟೆಯವರೆಗೆ ಜನರು ಹೂಳೆತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ರಾತ್ರಿ ಗ್ಯಾಸ್ ಲೈಟ್ ಬೆಳಕಿನಲ್ಲಿ ಶ್ರಮಿಸುತ್ತಿದ್ದಾರೆ. ಪುನಶ್ಚೇತನ ಅಗತ್ಯ
ಅಲೆವೂರು ಗ್ರಾ.ಪಂ.ವ್ಯಾಪ್ತಿಯಲ್ಲಿ 50 ರಿಂದ 60 ಮನೆಗಳಿವೆ. ಹೆಚ್ಚಿನ ಮನೆಗಳಲ್ಲಿ ಬಾವಿ ಇದೆ. ಆದರೆ ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಮದಗಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿಯಾಗುವುದರಿಂದ ನೀರಿನ ಸಮಸ್ಯೆಯನ್ನು ತಡೆಯಬಹುದು. ಜತೆಗೆ ಕೃಷಿ ಪ್ರದೇಶಕ್ಕೆ ನೀರನ್ನು ಬಳಸಬಹುದು. ಬಿಡುವಿನಲ್ಲಿರುವ ಸ್ಥಳಿಯರಿಗೆ ಉದ್ಯೋಗ ಕೂಡ ದೊರೆತಂತಾಗಿದೆ.
-ಶ್ರೀಕಾಂತ್ ನಾಯಕ್, ಅಧ್ಯಕ್ಷರು, ಅಲೆವೂರು ಗ್ರಾ.ಪಂ.