Advertisement

ಎಚ್ಚರ…ಅಧಿಕ ದರಕ್ಕೆ ಮಾರಬೇಡಿ ಬೀಜ ಗೊಬ್ಬರ

09:04 AM May 21, 2019 | Suhan S |

ಹಾವೇರಿ: ಮಳೆಗಾಲ ಸಮೀಪಿಸುತ್ತಿದ್ದು ಮುಂಗಾರು ಮಳೆ ಬೀಳುತ್ತಿದ್ದಂತೆ ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿ ಭರಾಟೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಬೀಜ, ಗೊಬ್ಬರವನ್ನು ನಿಗದಿತ ದರದಲ್ಲಿಯೇ ಮಾರಾಟ ಮಾಡಲು ಕೃಷಿ ಇಲಾಖೆ ಮಾರಾಟಗಾರರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

Advertisement

ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅಂಥ ಮಾರಾಟಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಕಟ್ಟೆಚ್ಚರಿಕೆ ನೀಡಿದೆ. ಬಿತ್ತನೆಬೀಜ ಹಾಗೂ ಗೊಬ್ಬರವನ್ನು ಪರವಾನಗಿ ಹೊಂದಿದ ಅಧಿಕೃತ ಮಾರಾಟಗಾರರೇ ಮಾರಾಟ ಮಾಡಬೇಕು. ಬೀಜ, ಗೊಬ್ಬರವನ್ನು ಪ್ಯಾಕೇಟ್, ಚೀಲದ ಮೇಲೆ ಮುದ್ರಿಸಿರುವ ನಿಗದಿತ ದರದಲ್ಲಿಯೇ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಪ್ಯಾಕೇಟ್ ಇಲ್ಲದ ಬಿಡಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡಬಾರದು. ಬೀಜ, ಗೊಬ್ಬರದ ದಾಸ್ತಾನು ವಿವರ ಫಲಕವನ್ನು ಅಂಗಡಿಯಲ್ಲಿ ಹಾಕಬೇಕು ಎಂದು ಇಲಾಖೆ ಸೂಚಿಸಿದೆ.

ಕಾಳಸಂತೆಯಲ್ಲಿ ಬಿತ್ತನೆ ಬೀಜಗಳ ಮಾರಾಟ ತಡೆಯಲು, ಉತ್ಕೃಷ್ಟ ದರ್ಜೆಯ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದ ರೈತರಿಗೆ ವಿತರಿಸಲು ಹಾಗೂ ನಿಗದಿತ ದರದಲ್ಲಿಯೇ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಸರ್ಕಾರ, ತಪ್ಪಿತಸ್ಥ ಮಾರಾಟಗಾರರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವೇ ಬೀಜದ ಬೆಲೆ ನಿಗದಿಗೊಳಿಸಿದೆ. ಬೆಲೆ ನಿಯಂತ್ರಣ ಸಮಿತಿಯ ಶಿಫಾರಸ್ಸಿನಂತೆ ಗರಿಷ್ಠ ಮಾರಾಟ ಬೆಲೆಯನ್ನು ನಿಗದಿಗೊಳಿಸಲಾಗಿದ್ದು, ಮಾರಾಟಗಾರರು ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ.

ಗೋಲಿಬಾರ್‌, ಲಾಠಿ ಪ್ರಹಾರ ನಡೆದಿತ್ತು: ಜಿಲ್ಲೆಯಲ್ಲಿ 2008ರಲ್ಲಿ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಿ ರೈತರು ಹೋರಾಟ ನಡೆಸಿದಾಗ ಹಾವೇರಿಯಲ್ಲಿ ರೈತರ ಮೇಲೆ ಪೊಲೀಸರು ಗೋಲಿಬಾರ್‌ ನಡೆಸಿ, ಇಬ್ಬರು ರೈತರು ಮೃತಪಟ್ಟಿದ್ದರು. ನಾಲ್ಕು ವರ್ಷಗಳ ಹಿಂದೆ ಬೀಜಕ್ಕಾಗಿ ಗಲಾಟೆ ನಡೆದು ಲಾಠಿ ಪ್ರಹಾರವೂ ನಡೆದಿತ್ತು. ಕೆಲ ಬೇಡಿಕೆಯ ಕಂಪನಿ ಬೀಜಗಳು ಕಾಳಸಂತೆಯಲ್ಲಿಯೂ ಮಾರಾಟವಾಗಿತ್ತು. ಈಗ ಕೇಂದ್ರ ಸರ್ಕಾರ ಬೆಲೆ ನಿಯಂತ್ರಣ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ ತಂದಿರುವ ಜತೆಗೆ ಗೊಬ್ಬರ ವಿತರಣೆಗೆ ಹೊಸ ಪದ್ಧತಿ ಜಾರಿಗೆ ತಂದಿರುವುದರಿಂದ ರೈತರಿಗೆ ವರದಾನವಾಗಿದೆ.

ಬಯೋಮೆಟ್ರಿಕ್‌ ಪದ್ಧತಿ: ರಸಗೊಬ್ಬರ ದುರುಪಯೋಗ, ಅಕ್ರಮ ದಾಸ್ತಾನು, ಕೃತಕ ಅಭಾವ ತಡೆಯುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಬಯೋಮೆಟ್ರಿಕ್‌ ದಾಖಲೆ ಮೂಲಕ ರೈತರಿಗೆ ರಸಗೊಬ್ಬರ ವಿತರಿಸುವ ನೂತನ ಪದ್ಧತಿಯನ್ನು ಕಳೆದ ವರ್ಷದಿಂದ ಜಾರಿಗೆ ತಂದಿದೆ. ಕೇಂದ್ರ ಸರ್ಕಾರದ ಈ ಹೊಸ ಪದ್ಧತಿಯಿಂದಾಗಿ ರೈತರು ತಮ್ಮ ಆಧಾರ್‌ ಕಾರ್ಡ್‌ ನೊಂದಿಗೆ ಗೊಬ್ಬರದ ಅಂಗಡಿಗೆ ಹೋಗಿ ಅಲ್ಲಿ ಆಧಾರ್‌ ನಂಬರ್‌ ದಾಖಲಿಸಿ, ಅಲ್ಲಿರುವ ಪಿಒಎಸ್‌ (ಪಾಯಿಂಟ್ ಆಫ್‌ ಸೇಲ್) ಯಂತ್ರದಲ್ಲಿ ತಮ್ಮ ಬೆರಳಿನ ಮುದ್ರೆ ಒತ್ತಿಯೇ ತಮಗೆ ಬೇಕಾದ ರಸಗೊಬ್ಬರ ಪಡೆಯಬೇಕಾಗಿದೆ.

Advertisement

ರೈತರೇನು ಮಾಡಬೇಕು?: ರೈತರು ಅಧಿಕೃತ ಪರವಾನಗಿ ಹೊಂದಿದ ಪರಿಕರ ಮಾರಾಟಗಾರರಿಂದ ಮಾತ್ರ ಬೀಜ, ರಸಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಔಷಧಿಗಳನ್ನು ಖರೀದಿಸಬೇಕು. ಪರಿಕರ ಖರೀದಿಸುವ ಮುನ್ನ ರೈತರು ಬೀಜ ಮತ್ತು ಕೀಟನಾಶಕಗಳ ಲಾಟ್, ಬ್ಯಾಚ್ ಸಂಖ್ಯೆ, ಉತ್ಪಾದನೆಯಾದ ದಿನಾಂಕ, ಅವಧಿ ಕೊನೆಗೊಳ್ಳುವ ದಿನಾಂಕ ಇವುಗಳನ್ನು ಪರಿಶೀಲಿಸಿ ಖರೀದಿಸಬೇಕು. ಖರೀದಿಸಿದ ಪರಿಕರಗಳಿಗೆ ಕಡ್ಡಾಯವಾಗಿ ರಸೀದಿಯಲ್ಲಿ ಲಾಟ್, ಬ್ಯಾಚ್ ಸಂಖ್ಯೆಯನ್ನು ಹಾಗೂ ನಿಗದಿಪಡಿಸಿದ ದರವನ್ನು ನಮೂದಿಸಿರುವುದನ್ನು ಖಾತರಿ ಪಡಿಸಿಕೊಂಡು ರಸೀದಿ ಪಡೆಯಬೇಕು ಹಾಗೂ ಯಾವುದೇ ಕಾರಣಕ್ಕೂ ರೈತರು ಯಾವುದೇ ಆಮಿಷಕ್ಕೊಳಗಾಗದೆ ಪರಿಕರಗಳ ಗುಣಮಟ್ಟವನ್ನು ಖಾತರಿಪಡಿಸಿಕೊಂಡು ಪರಿಕರಗಳನ್ನು ಖರೀದಿಸಬೇಕು.

ಮಾರಾಟಗಾರರು ಏನು ಮಾಡಬೇಕು?: ಎಲ್ಲ ಖಾಸಗಿ ಕೃಷಿ ಪರಿಕರ ಮಾರಾಟಗಾರರು ತಮ್ಮ ಪರವಾನಗಿಗಳನ್ನು ನವೀಕರಿಸಿದ್ದನ್ನು ಖಾತರಿ ಪಡಿಸಿಕೊಳ್ಳಬೇಕು ಹಾಗೂ ಬೀಜ ರಸಗೊಬ್ಬರದ ದರಗಳನ್ನು ರೈತರಿಗೆ ಕಾಣುವಂತೆ ದಾಸ್ತಾನು ಮತ್ತು ವಿವಿಧ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಬೇಕು. ಮಾರಾಟ ಮಾಡಿದ ಪರಿಕರಗಳಿಗೆ ಕಡ್ಡಾಯವಾಗಿ ಬಿಲ್ ನೀಡಬೇಕು. ಮಾರಾಟಗಾರರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ, ಅವಧಿ ಮೀರಿರುವ ಪರಿಕರಗಳನ್ನು ಮಾರಾಟ ಮಾಡುವುದಾಗಲಿ, ಯಾವುದೇ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವುದಾಗಲಿ ಮಾಡಬಾರದು. ದಾಸ್ತಾನು, ದರ ವಿವರ ಫಲಕವನ್ನು ಅಂಗಡಿ ಎದುರು ಹಾಕಬೇಕು.

ಒಟ್ಟಾರೆ ಜಿಲ್ಲೆಯಲ್ಲಿ ರೈತರಿಗೆ ಬೀಜ, ಗೊಬ್ಬರ ವಿತರಣೆಯಲ್ಲಿ ಯಾವುದೇ ತೊಂದರೆಯಾಗದಂತೆ ಕೃಷಿ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಅವು ಕಟ್ಟುನಿಟ್ಟಾಗಿ ಅನುಷ್ಠಾನವಾಗಿ ರೈತರಿಗೆ ಸಹಕಾರಿಯಾಗಬೇಕಿದೆ.

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next