ಕುಮಟಾ: ತಾಲೂಕಿನ ಹೊಸಾಡಿನಲ್ಲಿರುವ ವಿಶ್ವದ ಮೊಟ್ಟ ಮೊದಲ ಗೋಬ್ಯಾಂಕ್ ನಲ್ಲಿ ” ಆಲೆಮನೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ಹಿರಿಯ ಶಿಕ್ಷಣ ತಜ್ಞ ಅರುಣ ಉಭಯಕರ್ ಕಬ್ಬಿನ ಗಾಣಕ್ಕೆ ಕಬ್ಬು ಕೊಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಗೋ ಸಂರಕ್ಷಣೆಯ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು. ಗೋವಿದ್ದರೆ ನಾವು ಎಂಬಂತೆ ಅವುಗಳಿಗಾಗಿ ನಮ್ಮ ಕೈಲಾದ ಸೇವೆಯನ್ನು ನೀಡಬೇಕು. ಗೋವುಗಳಿಂದ ಹಲವಾರು ಪ್ರಯೋಜನ ಪಡೆದುಕೊಳ್ಳುವ ನಾವು ಅವುಗಳ ಉಳಿವಿಗೆ ಕೈಜೋಡಿಸಬೇಕು ಎಂದ ಅವರು ಶ್ರೀಮಠದ ಕಾರ್ಯಗಳನ್ನು ಕೊಂಡಾಡಿದರು.
ಗೋ ಬ್ಯಾಂಕ್ ನ ಅಧ್ಯಕ್ಷರಾದ ಮುರಳೀಧರ ಪ್ರಭು ಮಾತನಾಡಿ ಆಲೆಮನೆ ಹಬ್ಬ ಮಾರ್ಚ್ 13 ರ ವರೆಗೆ ನಡೆಯಲಿದ್ದು ಸಂಜೆ 4 ರಿಂದ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ರವಿವಾರ ಪೂರ್ಣ ದಿನ ಅವಕಾಶವಿದೆ. ದಿನಾಂಕ 12 ರಂದು ವಿಶೇಷ ಗೋ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯದರ್ಶಿಗಳಾದ ಸುಬ್ರಾಯ ಭಟ್ಟ, ಕುಮಟಾ ಮಂಡಲ ಅಧ್ಯಕ್ಷರಾದ ಜಿ.ಎಸ್.ಹೆಗಡೆ. ಗೋ ಸಂಧ್ಯಾ ಸಂಚಾಲಕರಾದ ಗೋಪಾಲಕೃಷ್ಣ ಉಗ್ರು, ವಿದ್ಯಾನಿಕೇತನದ ಕಾರ್ಯಾಧ್ಯಕ್ಷರಾದ ಆರ್ .ಜಿ.ಭಟ್ಟ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಅರುಣ ಹೆಗಡೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ಗೋಪಾಲಕೃಷ್ಣ ಭಜನಾ ಮಂಡಳಿ ಹೆಬ್ಳೆಕೇರಿ ಕಡತೋಕಾ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು.