ಶಿರಸಿ: ತಾಲ್ಲೂಕಿನ ವಾನಳ್ಳಿಯ ತವರುಮನೆ ಹೋಮ್ ಸ್ಟೇ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ 10ದಿನಗಳ ಆಲೆಮನೆ ಹಬ್ಬಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಹುಬ್ಬಳ್ಳಿಯ ಪತ್ರಕರ್ತೆ ಕೃಷ್ಣಿ ಶಿರೂರ ಆಲೆಮನೆ ಹಬ್ಬಕ್ಕೆ ಗಾಣಕ್ಕೆ ಕಬ್ಬು ನೀಡುವ ಮೂಲಕ ಚಾಲನೆ ನೀಡಿ, ಬಂಧುಗಳನ್ನು, ಸ್ನೇಹಿತ ರನ್ನು ಒಗ್ಗೂಡಿಸಿ, ಸಂಭ್ರಮಿಸುವ ಆಲೆಮನೆ ಇತ್ತೀಚಿನ ವರ್ಷಗಳಲ್ಲಿ ತನ್ನ ಆಯಾಮ ಬದಲಿಸಿಕೊಂಡಿದೆ. ಹೆಚ್ಚು ಶ್ರಮದಾಯಕ ವೆನಿಸುವ ಕಬ್ಬಿನ ಆಲೆಮನೆಯಲ್ಲಿ ಕೂಲಿಯಾಳಿನ ಸಮಸ್ಯೆ, ಕಟ್ಟಿಗೆ ಸಮಸ್ಯೆಯಂತ ಅಡೆತಡೆಗಳಿಂದ ಆಲೆಮನೆ ನೇಪಥ್ಯಕ್ಕೆ ಸೇರುವಂತಾಯಿತು ಎಂದರು.
ಕಳೆದ ನಾಲ್ಕು ವರ್ಷಗಳಿಂದ ತವರಮನೆ ಹೋಮ್ ಸ್ಟೇ ಆಲೆಮನೆಯನ್ನು ಆಯೋಜಿಸಿ ಆಲೆಮನೆಯ ಹಬ್ಬದ ಸಂಭ್ರಮವನ್ನು ಕಟ್ಟಿಕೊಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದರು.
ಹಿರಿಯ ಸಹಕಾರಿ ಎನ್.ಎಸ್.ಹೆಗಡೆ ತೋಟಿಕೊಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆನಾಡಿನ ಆಲೆಮನೆಯಲ್ಲಿ ತಯಾರಾಗುವ ಬೆಲ್ಲ ಕಲಬೆರೆಕೆ ರಹಿತವಾಗಿರುವುದರೊಂದಿಗೆ ಆರೋಗ್ಯದಾಯಕ ಎಂದರು.
ಗ್ರಾಮೀಣ ಠಾಣೆ ಪಿಎಸ್ಐ ಈರಯ್ಯ ದುಂತೂರ, ಶ್ರೀಮತಿ ಹೆಗಡೆ ತೋಟಿಕೊಪ್ಪ ಉಪಸ್ಥಿತರಿದ್ದರು. ಪಿ.ಜಿ.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ರಾಮ ವೈದ್ಯ, ನಾಗವೇಣಿ ಹೆಗಡೆ ಇದ್ದರು. ಜನವರಿ 2 ರವರೆಗೆ ಆಲೆಮನೆ ಹಬ್ಬದ ಸಂಭ್ರಮ ತವರು ಮನೆಯಲ್ಲಿ ನಡೆಯಲಿದೆ.