Advertisement

ಬಕ್ನರ್‌ ದಾಖಲೆ ಮುರಿಯಲಿರುವ ಅಲೀಂ ದಾರ್‌

10:05 AM Dec 12, 2019 | Team Udayavani |

ಪರ್ತ್‌: ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವೆ ಗುರುವಾರದಿಂದ ಪರ್ತ್‌ನಲ್ಲಿ ಆರಂಭ ವಾಗಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿ ಯುವ ಮೂಲಕ ಪಾಕಿಸ್ಥಾನದ ಅಂಪಾಯರ್‌ ಅಲೀಂ ದಾರ್‌ ನೂತನ ದಾಖಲೆಯೊಂದನ್ನು ಬರೆಯಲಿದ್ದಾರೆ. ಅತೀ ಹೆಚ್ಚು ಟೆಸ್ಟ್‌ಗಳಲ್ಲಿ ಫೀಲ್ಡ್‌ ಅಂಪಾಯರ್‌ ಆಗಿ ಕರ್ತವ್ಯ ನಿಭಾಯಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Advertisement

ಇದು ಅಲೀಂ ದಾರ್‌ ಅವರ 129ನೇ ಟೆಸ್ಟ್‌ ಪಂದ್ಯ. ಸದ್ಯ ಅವರು ವೆಸ್ಟ್‌ ಇಂಡೀಸಿನ ಸ್ಟೀವ್‌ ಬಕ್ನರ್‌ ಜತೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ (128 ಟೆಸ್ಟ್‌).

ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿ
“ನನ್ನ ಅಂಪಾಯರಿಂಗ್‌ ಬದುಕನ್ನು ಆರಂಭಿಸಿದಾಗ ಇಂಥದೊಂದು ಮೈಲಿಗಲ್ಲು ನೆಡಲಿದ್ದೇನೆ ಎಂದು ಭಾವಿಸಿರಲಿಲ್ಲ. ತವರಿನ ಗುಜ್ರನ್‌ವಾಲಾದಲ್ಲಿ ಅಂತಾರಾಷ್ಟ್ರೀಯ ಬದುಕನ್ನು ಆರಂಭಿಸಿದ ನಾನು ಸಾವಿರಾರು ಮೈಲು ದೂರದ ಆಸ್ಟ್ರೇಲಿಯದಲ್ಲಿ ಹೊಸ ಎತ್ತರ ತಲುಪುತ್ತಿದ್ದೇನೆ. ಇದೊಂದು ಅದ್ಭುತ ಪಯಣ, ನನ್ನ ಬದುಕಿನ ಮಹತ್ವದ ಘಟ್ಟ. ಈ ಅವಧಿಯಲ್ಲಿ ಅದೆಷ್ಟೋ ಸ್ಮರಣೀಯ ಟೆಸ್ಟ್‌ ಪಂದ್ಯಗಳಿಗೆ ಸಾಕ್ಷಿಯಾದ ಸೌಭಾಗ್ಯ ನನ್ನದು…’ ಎಂದು ಅಲೀಂ ದಾರ್‌ ಹೇಳಿದ್ದಾರೆ.

ಅಲೀಂ ದಾರ್‌ ಇದಕ್ಕೆ 2 ಉದಾಹರಣೆಗಳನ್ನೂ ಕೊಟ್ಟರು. ಇವುಗಳೆಂದರೆ, ಬ್ರಿಯಾನ್‌ ಲಾರಾ ಅವರ 400 ರನ್ನುಗಳ ವಿಶ್ವದಾಖಲೆ ಸಂದರ್ಭದಲ್ಲಿ ಹಾಗೂ 2006ರ ಜೊಹಾನ್ಸ್‌ ಬರ್ಗ್‌ ಏಕದಿನದಲ್ಲಿ ಆಸ್ಟ್ರೇಲಿಯದ ವಿಶ್ವದಾಖಲೆಯ ಮೊತ್ತವನ್ನು ದಕ್ಷಿಣ ಆಫ್ರಿಕಾ ಚೇಸ್‌ ಮಾಡಿದ ವೇಳೆ ಅಂಗಳದಲ್ಲಿದ್ದುದು.

51ರ ಹರೆಯದ ಅಲೀಂ ದಾರ್‌ 2003ರ ಬಾಂಗ್ಲಾ-ಇಂಗ್ಲೆಂಡ್‌ ನಡುವಿನ ಢಾಕಾ ಪಂದ್ಯದಲ್ಲಿ ಮೊದಲ ಸಲ ಟೆಸ್ಟ್‌ ಅಂಪಾಯರಿಂಗ್‌ ನಡೆಸಿದ್ದರು. ಇದಕ್ಕೂ ಮುನ್ನ 2000ದ ಪಾಕಿಸ್ಥಾನ-ಶ್ರೀಲಂಕಾ ನಡುವಿನ ತವರಿನ ಸರಣಿಯ ಏಕದಿನ ಪಂದ್ಯದಲ್ಲಿ ತೀರ್ಪುಗಾರನಾಗಿದ್ದರು. 207 ಏಕದಿನ ಹಾಗೂ 46 ಟಿ20 ಪಂದ್ಯಗಳಲ್ಲೂ ದಾರ್‌ ಅಂಪಾಯರಿಂಗ್‌ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next