ರಾವಲ್ಪಿಂಡಿ: ಜಿಂಬಾಬ್ವೆ ಎದುರಿನ ಭಾನುವಾರದ ದ್ವಿತೀಯ ಏಕದಿನ ಪಂದ್ಯದಲ್ಲಿ, ಐಸಿಸಿ ಉನ್ನತ ಸಮಿತಿಯ ಅಂಪೈರ್, ಪಾಕಿಸ್ತಾನ ಅಲೀಂ ದಾರ್ ನೂತನ ಮೈಲುಗಲ್ಲು ನೆಟ್ಟರು.
ಸರ್ವಾಧಿಕ 210 ಏಕದಿನ ಪಂದ್ಯಗಳಲ್ಲಿ ತೀರ್ಪುಗಾರನಾಗಿ ಕಾಣಿಸಿಕೊಂಡ ವಿಶ್ವದಾಖಲೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಅವರು ದಕ್ಷಿಣ ಆಫ್ರಿಕಾದ ರುಡಿ ಕೋರ್ಟ್‌ಜೆನ್ ಅವರ 209 ಪಂದ್ಯಗಳ ದಾಖಲೆಯನ್ನು ಮುರಿದರು. ಪ್ರವಾಸಿ ಶ್ರೀಲಂಕಾ ಎದುರಿನ 2000ದ ಗುಜ್ರನ್‌ವಾಲಾ ಪಂದ್ಯದಲ್ಲಿ ಅಲೀಂ ದಾರ್ ಏಕದಿನ ಪಂದ್ಯದಲ್ಲಿ ಅಂಪೈರಿಂಗ್ ಆರಂಭಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲೂ ಅತ್ಯಧಿಕ ಪಂದ್ಯಗಳಲ್ಲಿ ತೀರ್ಪುಗಾರನಾಗಿ ಕರ್ತವ್ಯ ನಿಭಾಯಿಸಿದ ದಾಖಲೆ ಅಲೀಂ ದಾರ್ ಹೆಸರಲ್ಲಿದೆ. “ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳೆರಡರಲ್ಲೂ ಈ ದಾಖಲೆ ಸ್ಥಾಪಿಸಿರುವುದು ನನ್ನ ಪಾಲಿನ ಮಹಾನ್ ಗೌರವ.
ಅಂಪೈರಿಂಗ್ ಹಾದಿಯಲ್ಲಿ ಇಷ್ಟು ದೂರ ಸಾಗಿ ಬರುವೆನೆಂಬ ಕಲ್ಪನೆಯೂ ನನಗಿರಲಿಲ್ಲ. ಈ ವೃತ್ತಿಯ ಪ್ರತಿಯೊಂದು ಕ್ಷಣವನ್ನೂ ನಾನು ಆನಂದಿಸಿದ್ದೇನೆ’ ಎಂದು ದಾರ್ ಹೇಳಿದರು. ಅಲೀಂ ದಾರ್ ಸರ್ವಾಧಿಕ 132 ಟೆಸ್ಟ್ ಪಂದ್ಯಗಳಲ್ಲಿ ತೀರ್ಪುಗಾರನಾಗಿ ಕಾಣಿಸಿಕೊಂಡಿದ್ದಾರೆ. ವಿಂಡೀಸಿನ ಸ್ಟೀವ್ ಬಕ್ನರ್ ಅವರ 129 ಪಂದ್ಯಗಳ ದಾಖಲೆಯನ್ನು ದಾರ್ ಹಿಂದಿಕ್ಕಿದ್ದಾರೆ.
ಇದನ್ನೂ ಓದಿ:5 ವರ್ಷದ ಹಿಂದೆ ಕಳೆದುಕೊಂಡ ಅರಶಿನ-ಕುಂಕುಮವನ್ನು ಮತದ ರೂಪದಲ್ಲಿ ಭಿಕ್ಷೆಯಾಗಿ ನೀಡಿ: ಕುಸುಮಾ