ಎಚ್.ಡಿ.ಕೋಟೆ: ಮದ್ಯವ್ಯಸನ ದೇಶದ ಅತಿ ದೊಡ್ಡ ಪಿಡುಗು. ಮದ್ಯದ ಚಟಕ್ಕೆ ದಾಸರಾದವರಿಗೆ ಇಂತಹ ಮದ್ಯವರ್ಜನ ಶಿಬಿರಗಳ ಮೂಲಕ ಮುಕ್ತಿ ದೊರೆಯಲಿ ಎಂದು ಸುತ್ತೂರು ಮಠದ ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಜೆಎಸ್‌ಎಸ್ ಮಂಗಳ ಮಂಟಪದಲ್ಲಿ ಕುಡಿತ ಬಿಡಿಸುವ ಉಚಿತ ಶಿಬಿರದಲ್ಲಿ ಮಾತನಾಡಿದ ಅವರು, ತಮಗರಿವಿಲ್ಲದಂತೆ ಮದ್ಯದ ಚಟಕ್ಕೆ ದಾಸರಾಗುವ ಮಂದಿ ನಂತರ ತಮ್ಮನ್ನ ತಾವೇ ಮದ್ಯಕ್ಕೆ ದಾಸರಾಗಿಸಿಕೊಳ್ಳುವುದೇ ಅಲ್ಲದೆ, ಮನೆ ಮಠ ಹೆಂಡತಿ ಮಕ್ಕಳನ್ನು ತಾತ್ಸವರಾಗಿ ಕಾಣುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಾರೆ ಎಂದರು.
ಮದ್ಯದ ದಾಹ ತೀರಿಸಿಕೊಳ್ಳಲು ಹಣಕ್ಕಾಗಿ ಕಾಡಿಬೇಡಿವುದೂ ಉಂಟು, ಇದರಿಂದ ಸಮಾಜದಲ್ಲಿ ಅವರನ್ನು ಇತರರು ಬೇರೆ ರೀತಿಯಲ್ಲಿ ಕಾಣುತ್ತಾರೆ. ಮದ್ಯ ವ್ಯಸನಿಗಳು ಇಂಥ ಶಿಬಿರದಲ್ಲಿ ಕಳೆದ 10 ದಿನಗಳ ಹಿಂದಿನಿಂದ ಪಾಲ್ಗೊಂಡು ಶಿಬಿರದಲ್ಲಿ ಮದ್ಯ ತ್ಯಜಿಸುವ ಮಾರ್ಗಗಳನ್ನು ಕಂಡುಕೊಂಡಿದ್ದೀರಿ. ಮುಂದಿನ ದಿನಗಳಲ್ಲಿ ಚಟದಿಂದ ಹೊರಗುಳಿದು ಸಮಾಜದ ಮುಖ್ಯವಾಹಿನಿಗೆ ಬಂದು ಸಮಾಜದಲ್ಲಿ ಸುಖಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.
ಶಾಸಕ ಅನಿಲ್ ಚಿಕ್ಕಮಾದು ಮತ್ತು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಬಿಡಗಲು ಪಡುವಲ ವಿರಕ್ತ ಮಠದ ಮಹದೇವಸ್ವಾಮಿ ಮಾತನಾಡಿ, ಮದ್ಯ ವ್ಯಸನಕ್ಕೆ ಉದ್ದೇಶ ಪೂರಕವಾಗಿ ಯಾರೂ ದಾಸರಾಗುವುದಿಲ್ಲ. ಅರಿವಿಲ್ಲದೇ ಒಮ್ಮೆ ಮದ್ಯದ ಚಟಕ್ಕೆ ಬಲಿಯಾದರೆ ಮತ್ತೆ ಅದರಿಂದ ಹೊರ ಬರುವುದು ಕಷ್ಟಕರ. ಮದ್ಯವ್ಯಸನಿಗಳು ಇಂತಹ ಮದ್ಯ ವರ್ಜನ ಶಿಬಿರಗಳ ಉಪಯೋಗ ಪಡೆದುಕೊಂಡು ಚಟದಿಂದ ವಿಮುಕ್ತರಾಗಿ ದೇಶದ ಪ್ರಗತಿಗೆ ಸಹಕಾರಿಯಾಗುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಬಿ.ವಿ.ಬಸವರಾಜು, ಮೊತ್ತ ಬಸವರಾಜಪ್ಪ, ಬಾಬು ನಾಯಕ್, ಶಂಗರೇಗೌಡ, ಕೃಷ್ಣಸ್ವಾಮಿ ಇತರರು ಇದ್ದರು.