ಉಡುಪಿ: ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಗೆ ಪೂರೈಸಲಾದ ಡಿಸ್ಟಿಲ್ಡ್ ವಾಟರ್‌ನಲ್ಲಿ ಆಲ್ಕೋಹಾಲ್ ಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಮೇ 13ರಂದು ಅಜಿತ್ ಎಂಬವರು ಡಿಸ್ಟಿಲ್ಡ್ ವಾಟರ್‌ನ ಕ್ಯಾನ್‌ಗಳನ್ನು ನೀಡಿದ್ದರು. ಅದರಲ್ಲಿ 3 ಕ್ಯಾನ್‌ಗಳಿಗೆ ಲೇಬಲ್ ಇರಲಿಲ್ಲ. ಹಾಗಾಗಿ ಅದನ್ನು ಹಿಂದಕ್ಕೆ ಕಳುಹಿಸಲಾಗಿತ್ತು. ಉಳಿದ 3 ಕ್ಯಾನ್‌ಗಳನ್ನು ಸ್ಟೋರ್ ಎಕ್ಸಿಕ್ಯೂಟಿವ್ ಗೋಕುಲ ಅವರು ಸ್ವೀಕರಿಸಿದ್ದರು. ಇವುಗಳಲ್ಲಿ 2 ಕ್ಯಾನ್‌ಗಳು 2019ರಲ್ಲಿ ತಯಾರಾಗಿದ್ದವು.
1 ಕ್ಯಾನ್‌ನ ಬ್ಯಾಚ್ ನಂಬರ್ 21/2017 ಇತ್ತು. ಈ ಕ್ಯಾನ್‌ನಲ್ಲಿದ್ದ ನೀರನ್ನು ಜೂ. 4ರಂದು ಹ್ಯೂಮಿಡಿಫೈಯರ್‌ಗಳಿಗೆ ಭರ್ತಿ ಮಾಡಲಾಗಿತ್ತು. ಅಂದು ಮಧ್ಯಾಹ್ನ ಆಸ್ಪತ್ರೆಯ ನರ್ಸಿಂಗ್ ಸೂಪರ್‌ವೈಸರ್ ಸಂದೇಶ ಮತ್ತು ನರ್ಸ್ ಡ್ರಾಯನ್ ಅವರು ಸ್ಟ್ರೆಚರ್‌ಗಳನ್ನು ಕನ್ಸಲ್ಟೆಷನ್ ಕೋಣೆಯ ಹತ್ತಿರ ತಂದು ಸಿಲಿಂಡರ್ ಅಳವಡಿಸಲು ತಯಾರು ಮಾಡಿದಾಗ ಕೆಲವು ಹನಿ ಕೈಗೆ ಬಿದ್ದಾಗ ಹಿಮದ ಅನುಭವ ಆಗಿತ್ತು. ಪರೀಕ್ಷಿಸಿದಾಗ ಹ್ಯೂಮಿಡಿ ಫೈಯರ್‌ನಲ್ಲಿ ಸ್ಪಿರಿಟ್ ವಾಸನೆ ಬರುತ್ತಿತ್ತು. ಹಾಗಾಗಿ ಆ ಡಿಸ್ಟಿಲ್ಡ್ ವಾಟರ್ ಅನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಆಗ ಅದರಲ್ಲಿ ಶೇ. 53.43 ಆಲ್ಕೋಹಾಲ್ ಇರುವುದು ಕಂಡು ಬಂದಿದೆ.
ಆಸ್ಪತ್ರೆಯ ಮುಖ್ಯಸ್ಥರು ಮತ್ತು ರೋಗಿಗಳಿಗೆ ಹಾನಿ ಉಂಟು ಮಾಡುವುದ ಕ್ಕಾ ಗಿ ಈ ಕೃತ್ಯ ಎಸಗಿದ್ದಾರೆ ಎಂದು ಮ್ಯಾನೇಜರ್ ಪ್ರಶಾಂತ್ ಮಲ್ಯ ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರಿಂದ ಸೊತ್ತುಗಳ ಸ್ವಾಧೀನ
ಉಡುಪಿ ನಗರ ಠಾಣಾಧಿಕಾರಿ ಅನಂತ ಪದ್ಮನಾಭ ನೇತೃತ್ವದ ಪೊಲೀಸ್ ತಂಡ ತನಿಖೆ ಆರಂಭಿಸಿದ್ದು ಡಿಸ್ಟಿಲರಿ ವಾಟರ್‌ನ ಕ್ಯಾನ್‌ಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದೆ.